Site icon Vistara News

ಏಷ್ಯಾ ಟೀಮ್‌ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌; ಫೈನಲ್​ಗೆ ಲಗ್ಗೆಯಿಟ್ಟ ಭಾರತ ಮಹಿಳಾ ತಂಡ

Indian Women's Badminton

ಶಾ ಆಲಂ (ಮಲೇಷ್ಯಾ): ಭಾರತ ಮಹಿಳಾ ಬ್ಯಾಡ್ಮಿಂಟನ್​ ತಂಡವು ಏಷ್ಯಾ ಟೀಮ್‌ ಚಾಂಪಿಯನ್‌ಷಿಪ್‌ನ(Badminton Asia Team Championships) ಸೆಮಿಫೈನಲ್​ ಪಂದ್ಯದಲ್ಲಿ ಜಪಾನ್​ ವಿರುದ್ಧ 3-2 ಅಂತರದಿಂದ ಜಯ ಸಾಧಿಸಿ ಫೈನಲ್​ ಪ್ರವೇಶಿಸಿದೆ. ಈ ಮೂಲಕ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಈ ಟೂರ್ನಿಯಲ್ಲಿ ಫೈನಲ್​ ಪ್ರವೇಶಿಸಿದ ದಾಖಲೆ ಬರೆದಿದೆ. ಸೆಮಿಫೈನಲ್​ ಪ್ರವೇಶಿಸುವ ಮೂಲಕ ಐತಿಹಾಸಿಕ ಪದಕವೊಂದನ್ನು ಖಾತ್ರಿ ಪಡಿಸಿದ್ದ ಭಾರತ ಇದೀಗ ಫೈನಲ್​ನಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರಿ ಚಿನ್ನದ ಪದಕ ಗೆಲ್ಲಲಿ ಎನ್ನುವುದು ಎಲ್ಲ ಭಾರತೀಯರ ಹಾರೈಕೆಯಾಗಿದೆ.

ಮಲೇಷ್ಯಾದ ಸೆಲಂಗೋರ್‌ನಲ್ಲಿ ಶನಿವಾರ ನಡೆದ ಸೆಮಿಫೈನಲ್​ ಕಾದಾಟದಲ್ಲಿ ಭಾರತದ ವನಿತೆಯರು ಜಪಾನ್ ತಂಡವನ್ನು 3-2 ಗೋಲುಗಳಿಂದ ಸೋಲಿಸಿ ಮೊದಲ ಬಾರಿಗೆ ಬ್ಯಾಡ್ಮಿಂಟನ್ ಏಷ್ಯಾ ಟೀಮ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ತಲುಪಿದ ಇತಿಹಾಸ ನಿರ್ಮಿಸಿದರು.

ಅವಳಿ ಒಲಂಪಿಕ್ ಪದಕ ವಿಜೇತೆ, ಬರವಸೆಯ ಆಟಗಾರ್ತಿ ಪಿವಿ ಸಿಂಧು ತಮ್ಮ ಸಿಂಗಲ್ಸ್ ಪಂದ್ಯದಲ್ಲಿ​ ಸೋಲು ಕಂಡರು. ಆದರೆ, ಯುವ ಆಟಗಾರ್ತಿಯರಾದ ಅಶ್ಮಿತಾ ಚಲಿಹಾ ಮತ್ತು ಅನ್ಮೋಲ್ ಖಾರ್ಬ್ ತಮ್ಮ ಸಿಂಗಲ್ಸ್ ಪಂದ್ಯಗಳನ್ನು ಗೆದ್ದು ಪಂದ್ಯದಲ್ಲಿ ಹಿಡಿತ ಸಾಧಿಸಿದರು. ಗಾಯತ್ರಿ ಗೋಪಿಚಂದ್ ಮತ್ತು ಜಾಲಿ ಟ್ರೀಸಾ ಡಬಲ್ಸ್​ನಲ್ಲಿ ಗೆದ್ದು ಬೀಗಿದರು. ನಿರ್ಣಾಯಕ ಐದನೇ ಪಂದ್ಯದಲ್ಲಿ ನಟ್ಸುಕಿ ನಿದೈರಾ ಅವರನ್ನು ನೇರ ಗೇಮ್‌ಗಳಲ್ಲಿ (21-14, 21-18) ಸೋಲಿಸಿದ ಅನ್ಮೋಲ್ ಖಾರ್ಬ್ ಭಾರತದ ಫೈನಲ್ ಪ್ರವೇಶವನ್ನು ಖಚಿತಪಡಿಸಿದರು.​

ಗುಂಪು ಹಂತದ ಪಂದ್ಯದಲ್ಲಿ ಅಗ್ರಶ್ರೇಯಾಂಕದ ಚೀನಾಕ್ಕೆ ಆಘಾತ ನೀಡಿದ್ದ ಭಾರತದ ಆಟಗಾರ್ತಿಯರು ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲೂ ಅಮೋಘ ಆಟವಾಡಿದ್ದರು. ಎರಡು ಒಲಿಂಪಿಕ್ಸ್‌ ಪದಕ ವಿಜೇತೆ ಪಿ.ವಿ. ಸಿಂಧು ಮುಂದಾಳತ್ವದಲ್ಲಿ ಅಶ್ಮಿತಾ ಚಲಿಹಾ, ಅಶ್ವಿನಿ ಪೊನ್ನಪ್ಪ ಮತ್ತು ತನಿಶಾ ಕ್ರಾಸ್ಟೊ ಅವರು ಹಾಂಗ್‌ಕಾಂಗ್‌ ಆಟಗಾರ್ತಿಯರನ್ನು ಸದೆಬಡಿದಿದ್ದರು.

2016 ಮತ್ತು 2020ರ ಆವೃತ್ತಿಗಳಲ್ಲಿ ಭಾರತ ಪುರುಷರ ತಂಡವು ಕಂಚಿನ ಪದಕ ಜಯಿಸಿತ್ತು. ಇದೇ ಮೊದಲ ಬಾರಿ ಮಹಿಳಾ ತಂಡ ಪದಕವನ್ನು ಖಚಿತಪಡಿಸಿಕೊಂಡಿದ್ದು ಚಿನ್ನ ಗೆಲ್ಲುವ ಇರಾದೆಯಲ್ಲಿದೆ.

Exit mobile version