ಕೇಪ್ಟೌನ್ : ಭಾರತ ವನಿತೆಯರ ಕ್ರಿಕೆಟ್ ತಂಡ ಮಹಿಳೆಯರ ಟಿ20 ವಿಶ್ವ ಕಪ್ (T20 world Cup) ಟೂರ್ನಿಯಲ್ಲಿ ಅದ್ಧೂರಿ ಶುಭಾರಂಭ ಮಾಡಿತು. ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಪ್ರತಿಸ್ಪರ್ಧಿ ಪಾಕಿಸ್ತಾನ ತಂಡವನ್ನು (INDvsPAK T20) ಏಳು ವಿಕೆಟ್ಗಳಿಂದ ಬಗ್ಗು ಬಡಿದ ಹರ್ಮನ್ಪ್ರೀತ್ ಕೌರ್ ಬಳಗ ಸಂಭ್ರಮಾಚರಣೆ ಮಾಡಿತು. ಜೆಮಿಮಾ ರೋಡ್ರಿಗಸ್ (53 ರನ್, 38 ಎಸೆತ) ಹಾಗೂ ರಿಚಾ ಘೋಷ್ (31 ರನ್, 20 ಎಸೆತ) ಸ್ಫೋಟಕ ಬ್ಯಾಟಿಂಗ್ ನಡೆಸಿ ಭಾರತ ತಂಡಕ್ಕೆ ಸುಲಭ ಜಯ ತಂದುಕೊಟ್ಟರು.
ಇಲ್ಲಿ ನ್ಯೂಲ್ಯಾಂಡ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಭಾನುವಾರ (ಫೆಬ್ರವರಿ 12) ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿ ಬಿಸ್ಮಾ ಮರೂಫ್ ನೇತೃತ್ವದ ಪಾಕಿಸ್ತಾನ ತಂಡ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 149 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಭಾರತ ಬಳಗ ಇನ್ನೂ ಆರು ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ ನಷ್ಟಕ್ಕೆ 151 ರನ್ ಬಾರಿಸಿ ಜಯ ಸಾಧಿಸಿತು.
ರಿಚಾ ಘೋಷ್- ಜೆಮಿಮಾ ಜುಗಲ್ಬಂದಿ
ಭಾರತ ವಿರುದ್ಧ ಟಿ20 ಮಾದರಿಯಲ್ಲಿ ಗರಿಷ್ಠ ಮೊತ್ತ ಬಾರಿಸಿ ಸಾಧನೆ ಮಾಡಿದ್ದ ಪಾಕಿಸ್ತಾನ ತಂಡ ವಿಜಯದ ನಿರೀಕ್ಷೆಯಲ್ಲಿತ್ತು. ಆದರೆ, ಭಾರತ ತಂಡದ ಬ್ಯಾಟರ್ಗಳು ಸಲೀಸಾಗಿ ಬ್ಯಾಟ್ ಬೀಸಿ ಅಧಿಕಾರಯುತ ಜಯ ತನ್ನದಾಗಿಸಿಕೊಂಡರು. ಅದರಲ್ಲೂ ಕೊನೇ ಹಂತದಲ್ಲಿ ಜೆಮಿಮಾ ರೋಡ್ರಿಗಸ್ ಹಾಗೂ ರಿಚಾ ಘೋಷ್ ಸ್ಥಳೀಯ ಪ್ರೇಕ್ಷಕರಿಗೆ ಬ್ಯಾಟಿಂಗ್ ರಸದೌತಣ ಉಣಬಡಿಸಿದರು. ಅರ್ಧ ಶತಕ ಬಾರಿಸಿದ ಜೆಮಮಿ ಹಾಗೂ ಘೋಷ್ ಕೊನೇ ವಿಕೆಟ್ಗೆ 58 ರನ್ ಬಾರಿಸಿ ಮಿಂಚಿದರು. ಅದಕ್ಕಿಂತ ಮೊದಲು ಆರಂಭಿಕ ಬ್ಯಾಟರ್ ಶಫಾಲಿ ವರ್ಮಾ ಕೂಡ 33 ರನ್ಗಳ ಕೊಡುಗೆ ಕೊಟ್ಟರು. ನಾಯಕಿ ಹರ್ಮನ್ಪ್ರೀತ್ ಕೌರ್ 16 ರನ್ ಬಾರಿಸಿದರು.
ಭಾರತ ತಂಡ 38 ರನ್ಗಳಿಗೆ ಮೊದಲ ವಿಕೆಟ್ ಕಳೆದುಕೊಂಡರೆ 62ಕ್ಕೆ ಎರಡನೇ ವಿಕೆಟ್ ನಷ್ಟ ಮಾಡಿಕೊಂಡಿತು. 93 ರನ್ಗಳಿಗೆ 3 ವಿಕೆಟ್ ಪತನಗೊಳ್ಳುವುದರೊಂದಿಗೆ ಭಾರತ ತಂಡ ಆತಂಕಕ್ಕೆ ಬಿತ್ತು. ಆದರೆ, ರಿಚಾ ಹಾಗೂ ಜೆಮಿಮಾ ಪಾಕ್ ಬೌಲರ್ಗಳನ್ನು ಇನ್ನಿಲ್ಲದಂತೆ ಕಾಡಿ ಗೆದ್ದರು.
ಬಿಸ್ಮಾ ಮರೂಫ್ ಅರ್ಧ ಶತಕ
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ 42 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಹಿನ್ನಡೆಗೆ ಒಳಗಾಯಿತು. ಆದರೆ ನಾಯಕಿ ಬಿಸ್ಮಾ ಮರೂಫ್ (68) ಅಜೇಯರಾಗಿ ಅರ್ಧ ಶತಕ ಬಾರಿಸಿ ತಂಡಕ್ಕೆ ಆಧಾರವಾದರು. ಕೊನೆಯಲ್ಲಿ ಆಯೇಷಾ ನಸೀಮ್ (43) ಕೂಡ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು.
ಇದನ್ನೂ ಓದಿ : Women’s T20 World Cup : ಭಾರತ ಮಹಿಳೆಯರ ತಂಡದ ವಿರುದ್ಧ ವಿಶೇಷ ದಾಖಲೆ ಬರೆದ ಪಾಕಿಸ್ತಾನದ ಮಹಿಳೆಯರು
ಭಾರತ ಪರ ಬೌಲಿಂಗ್ನಲ್ಲಿ ರಾಧಾ ಯಾದವ್ 2 ವಿಕೆಟ್ ಕಬಳಿಸಿದರೆ ದೀಪ್ತಿ ಶರ್ಮಾ ಹಾಗೂ ಪೂಜಾ ವಸ್ತ್ರಾಕಾರ್ ತಲಾ ಒಂದು ವಿಕೆಟ್ ಪಡೆದರು.