Site icon Vistara News

CWG- 2022 | ಮಹಿಳೆಯರ ಟಿ20 ಸೆಮಿಫೈನಲ್‌ನಲ್ಲಿ ಭಾರತ ತಂಡಕ್ಕೆ 4 ರನ್‌ ರೋಚಕ ಜಯ, ಫೈನಲ್‌ಗೆ ಪ್ರವೇಶ

CWG-2022

ಬರ್ಮಿಂಗ್ಹಮ್‌ : ಕಾಮನ್ವೆಲ್ತ್‌ ಗೇಮ್ಸ್‌ನ (CWG-2022) ಮಹಿಳೆಯರ ಟಿ೨೦ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಭಾರತ ಮಹಿಳೆಯರ ತಂಡ ೪ ರನ್‌ ರೋಚಕ ಜಯ ದಾಖಲಿಸಿದ್ದು, ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಈ ಮೂಲಕ ಕ್ರೀಡಾಕೂಟಕ್ಕೆ ಕ್ರಿಕೆಟ್‌ ಸೇರ್ಪಡೆಗೊಂಡ ಮೊದಲ ಆವೃತ್ತಿಯಲ್ಲೇ ಚೊಚ್ಚಲ ಪದಕವೊಂದನ್ನು ಖಾತರಿ ಮಾಡಿದೆ.

ಇಲ್ಲಿನ ಎಜ್‌ಬಾಸ್ಟನ್‌ ಕ್ರಿಕೆಟ್‌ ಸ್ಟೇಡಿಯಮ್‌ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್‌ ಮಾಡಿದ ಭಾರತ ಮಹಿಳೆಯರ ತಂಡ ನಿಗದಿತ ೨೦ ಓವರ್‌ಗಳಲ್ಲಿ ೫ ವಿಕೆಟ್‌ ನಷ್ಟಕ್ಕೆ ೧೬೪ ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ ತಮ್ಮ ಪಾಲಿನ ೨೦ ಓವರ್‌ಗಳು ಮುಕ್ತಾಯಗೊಂಡಾಗ ೬ ವಿಕೆಟ್‌ ಕಳೆದುಕೊಂಡು ೧೬೦ ರನ್ ಪೇರಿಸಿ ಸೋಲೊಪ್ಪಿಕೊಂಡಿತು.

ಭಾರತ ಪರ ಆರಂಭಿಕ ಬ್ಯಾಟರ್‌ ಸ್ಮೃತಿ ಮಂಧಾನಾ (61) ಅರ್ಧ ಶತಕ ಬಾರಿಸಿದರೆ, ಜೆಮಿಮಾ ರೋಡ್ರಿಗಸ್‌ ೪೪ ರನ್ ಪೇರಿಸಿ ಭಾರತ ತಂಡ ಉತ್ತಮ ಮೊತ್ತ ಪೇರಿಸಲು ನೆರವಾದರು. ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದ ಸ್ಮೃತಿ ೨೩ ಎಸೆತಗಳಲ್ಲಿ ಅರ್ಧ ಶತಕ ಬಾರಿಸಿದರಲ್ಲದೆ, ಕೇವಲ ೩೧ ಎಸೆತಗಳಲ್ಲಿ ೬೧ ರನ್‌ ಬಾರಿಸಿದರು. ಶಫಾಲಿ ವರ್ಮ ೧೫ ರನ್‌ ಬಾರಿಸಿದರೆ, ಹರ್ಮನ್‌ಪ್ರೀತ್‌ ಕೌರ್‌ ೨೦ ರನ್‌ಗಳ ಕೊಡುಗೆ ಕೊಟ್ಟರು. ದೀಪ್ತಿ ಶರ್ಮ ೨೦ ರನ್‌ ಬಾರಿಸಿದರು.

ಇಂಗ್ಲೆಂಡ್‌ ಪರ ಬೌಲಿಂಗ್‌ನಲ್ಲಿ ಕ್ಯಾಥ್ರಿನ್‌ ಬ್ರಂಟ್‌ ೩೦ ರನ್‌ಗಳನ್ನು ನೀಡಿ ೧ ವಿಕೆಟ್ ಉರುಳಿಸಿದರೆ, ಫ್ರೆಯಾ ಕೆಂಪ್‌ ೨೨ ರನ್‌ಗಳಿಗೆ ೨ ವಿಕೆಟ್‌ ಪಡೆದರು. ನ್ಯಾಟ್‌ ಸ್ಕೀವರ್‌ ೨೬ ರನ್‌ಗಳಿಗೆ ೧ ವಿಕೆಟ್ ಪಡೆದರು.

ಮರು ಹೋರಾಟ

ದೊಡ್ಡ ಮೊತ್ತದ ಗುರಿಯನ್ನು ಬೆನ್ನಟ್ಟಲು ಹೊರಟ ಇಂಗ್ಲೆಂಡ್‌ ತಂಡ ಉತ್ತಮ ಆರಂಭ ಪಡೆಯಿತು. ಆರಂಭಿಕರಾದ ಸೋಫಿಯಾ ಡಂಕ್ಲಿ ೧೯ ರನ್‌, ಹಾಗೂ ಡ್ಯಾನಿ ವೇಟ್‌ (೩೫) ಮೊದಲ ವಿಕೆಟ್‌ಗೆ ೨೮ ರನ್‌ ಗಳಿಸಿದರು. ಬಳಿಕ ಅಲೈಸ್ ಕಾಪ್ಸಿ ೧೩ ರನ್‌ ಬಾರಿಸಿದರು. ಆದರೆ ಆ ಬಳಿಕ ನ್ಯಾಟ್‌ ಸ್ಕೀವರ್‌ (೪೧), ಆಮಿ ಜೋನ್ಸ್‌ (೩೧) ಭಾರತದ ಪಾಳೆಯದಲ್ಲಿ ನಡುಕ ಹುಟ್ಟಿಸಿದರು. ಆದರೆ, ಭಾರತೀಯ ಬೌಲರ್‌ಗಳು ಸಂಘಟಿತ ಪ್ರಯತ್ನ ಮಾಡಿ ಗೆಲುವಿಗೆ ಸಹಕರಿಸಿದರು. ಭಾರತದ ಬೌಲರ್‌ಗಳಾದ ಸ್ನೇಹ್‌ ರಾಣಾ (೨೮ ರನ್‌ಗಳಿಗೆ ೨ ವಿಕೆಟ್‌), ದೀಪ್ತಿ ಶರ್ಮ (೧೮ ರನ್‌ಗಳಿಗೆ ೧ ವಿಕೆಟ್‌) ಭಾರತ ಪರ ಉತ್ತಮ ಪ್ರದರ್ಶನ ತೋರಿದರು.

ಇದನ್ನೂ ಓದಿ | CWG- 2022 | ಸ್ಟೀಪಲ್‌ಚೇಸ್‌ನಲ್ಲಿ ರಜತ ಪದಕ ಗೆದ್ದ ಅವಿನಾಶ್‌ ಸಾಬ್ಲೆ

Exit mobile version