ವಿಸ್ತಾರನ್ಯೂಸ್ ಬೆಂಗಳೂರು: ಟೋಕಿಯೊ ಒಲಿಂಪಿಕ್ಸ್ನಲ್ಲಿ ನಾಲ್ಕನೇ ಸ್ಥಾನ ಪಡೆದ ಭಾರತೀಯ ಮಹಿಳಾ ಹಾಕಿ ತಂಡವು ಮುಂದಿನ ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆಯನ್ನೇ ಪಡೆಯದಿರುವುದು ವಿಪರ್ಯಾಸ. ಶುಕ್ರವಾರ ನಡೆದ ಎಫ್ಐಎಚ್ ಕ್ಯಾಲಿಫೈಯರ್ ಸುತ್ತಿನ ಮೂರನೇ ಸ್ಥಾನದ ಪಂದ್ಯದಲ್ಲಿ ಜಪಾನ್ ವಿರುದ್ಧ 1-0 ಅಂತರದಿಂದ ಸೋತ ವನಿತೆಯರ ಪಡೆ ನಿರಾಸೆ ಎದುರಿಸಿದೆ. ಪಂದ್ಯದಲ್ಲಿ ಜಪಾನ್ ಕರಣ್ ಉರಾಟಾ ಆರನೇ ನಿಮಿಷದಲ್ಲಿ ಗೋಲು ಗಳಿಸಿ ಭಾರತವನ್ನು ಜಾಗತಿಕ ಕ್ರೀಡಾಕೂಟದಿಂದ ಹೊರಗಿಟ್ಟರು. 2012ರ ಬಳಿಕ ಇದೇ ಮೊದಲ ಬಾರಿಗೆ ಭಾರತ ಮಹಿಳಾ ಹಾಕಿ ತಂಡ ಒಲಿಂಪಿಕ್ಸ್ನಲ್ಲಿ ಅವಕಾಶ ಪಡೆಯಲು ವಿಫಲಗೊಂಡಿತು.
ಜಾರ್ಖಂಡ್ನ ರಾಂಚಿಯಲ್ಲಿ ನಡೆದ ಅರ್ಹತಾ ಪಂದ್ಯಗಳಲ್ಲಿ ಜಪಾನ್ ಮೂರನೇ ಸ್ಥಾನ ಪಡೆಯಿತು. ಈ ಮೂಲಕ ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿತು. ಫೈನಲ್ ಆಡಲಿರುವ ಜರ್ಮನಿ ಮತ್ತು ಯುಎಸ್ಎ ತಮ್ಮ ಸ್ಥಾನಗಳನ್ನು ಕಾಯ್ದಿರಿಸಿದ ಇತರ ಎರಡು ತಂಡಗಳಾಗಿವೆ.
1980ರ ಮಾಸ್ಕೋದಲ್ಲಿ ಮಹಿಳಾ ಹಾಕಿ ಸೇರ್ಪಡೆಯಾದ ಬಳಿಕ ಭಾರತ ಮಹಿಳಾ ತಂಡ ಒಲಿಂಪಿಕ್ಸ್ನಲ್ಲಿ ಕೇವಲ ಮೂರು ಬಾರಿ ಆಡಿದೆ. ಮೊದಲ ನಾಲ್ಕು ಆವೃತ್ತಿಯಲ್ಲಿ ಅರ್ಹತೆ ಪಡೆಯದ ಭಾರತ ರಿಯೋ 2016ರಲ್ಲಿ ಅವಕಾಶ ಗಿಟ್ಟಿಸಿತು. ಆ ಸಮಯದಲ್ಲಿ 12ನೇ ಸ್ಥಾನ ಪಡೆದುಕೊಂಡಿತ್ತು. ನಂತರ ಟೋಕಿಯೊ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯಿತು.
ಇದನ್ನೂ ಓದಿ : Ram Mandir: ‘ಪ್ರಾಣ ಪ್ರತಿಷ್ಠಾ’ ಆಹ್ವಾನ ಪಡೆದ ಆರ್.ಅಶ್ವಿನ್, ಮಿಥಾಲಿ ರಾಜ್
ಪಂದ್ಯದ 6ನೇ ನಿಮಿಷದಲ್ಲಿ ಸಿಕ್ಕಿದ ಪೆನಾಲ್ಟಿ ಕಾರ್ನರ್ನಲ್ಲಿ ಜಪಾನ್ ಗೋಲ್ ಆಗಿ ಪರಿವರ್ತಿಸಿತು. ಹೀಗಾಗಿ ಭಾರತಕ್ಕೆ ಒತ್ತಡ ಬಿತ್ತು. ಅಲ್ಲಿಂದ ರಕ್ಷಣಾತ್ಮಕ ಆಟವಾಡಿ ಪಂದ್ಯವನ್ನು ಉಳಿಸಲು ಪ್ರಯತ್ನಪಟ್ಟರು. 12ನೇ ನಿಮಿಷದಲ್ಲಿ ಭಾರತಕ್ಕೆ ಮೊದಲ ಗೋಲು ಗಳಿಸುವ ಅವಕಾಶ ಸಿಕ್ಕಿತು. ಮೋನಿಕಾ ಉತ್ತಮ ಕ್ರಾಸ್ ಕೊಟ್ಟರೂ ಲಾಲ್ರೆಮ್ಸಿಯಾಮಿ ಅವರಿಗೆ ಗೋಲ್ ಗಳಿಸಲು ಸಾಧ್ಯವಾಗಲಿಲ್ಲ.
ತಪ್ಪು ಲೆಕ್ಕಾಚಾರ
ಪಂದ್ಯದಲ್ಲಿ ಭಾರತ ಬಲಪಾರ್ಶ್ವದ ಮೂಲಕ ಆಡಲು ಯತ್ನಿಸಿತು. ಜಪಾನ್ ಆಟಗಾರ್ತಿಯರಿಗೆ ಭಾರತದ ಚಲನೆಯನ್ನು ಪತ್ತೆ ಹಚ್ಚಲು ಇದರಿಂದ ಸಾಧ್ಯವಾಯಿತು. ಮೊದಲಾರ್ಧದ ಬಹುಪಾಲು ಹೊತ್ತು ಜಪಾನ್ ನ ನಿರಂತರ ಒತ್ತಡದಿಂದಾಗಿ ಭಾರತವು ತಮ್ಮ ಆದ್ಯತೆಯ ಆಕ್ರಮಣಕಾರಿ ಶೈಲಿಯಿಂದ ದೂರ ಸರಿಯಬೇಕಾಯಿತು. ಅದೇ ರೀತಿ ಎರಡು ಬಾರಿ ಸಿಕ್ಕಿದ್ದ ಪೆನಾಲ್ಟಿ ಕಾರ್ನರ್ ಅವಕಾಶವನ್ನೂ ಬಳಸಿಕೊಳ್ಳಲು ವಿಫಲವಾಯಿತು. ಭಾರತೀಯ ಮಹಿಳೆಯರು ಕೊನೆಯಲ್ಲಿ ಆಕ್ರಮಣಕಾರಿ ಆಟಕ್ಕೆ ಇಳಿದರು. ಆದರೆ ಗೋಲುಗಳು ಅವರಿಗೆ ಸಿಗಲಿಲ್ಲ.
ಮೂರನೇ ಕ್ವಾರ್ಟರ್ನ ಆರು ನಿಮಿಷಗಳಲ್ಲಿ ಭಾರತ ಮತ್ತೊಂದು ಪೆನಾಲ್ಟಿ ಕಾರ್ನರ್ ಅವಕಾಶ ಪಡೆದುಕೊಂಡಿತು ಆದರೆ ದೀಪಿಕಾ ಜಪಾನ್ ಗೋಲ್ ನಕಮುರಾ ಮುಂದೆ ಭಾರತದ ಆಟ ನಡೆಯಲಿಲ್ಲ.