Site icon Vistara News

ಭಾರತ ಮಹಿಳೆಯರ ತಂಡ (India Women Team) ಶುಭಾರಂಭ

India Women

ಬೆಂಗಳೂರು: ಶ್ರೀಲಂಕಾ ಪ್ರವಾಸದಲ್ಲಿರುವ ಭಾರತ ಮಹಿಳೆಯರ ತಂಡ (India Women tour of Sri Lanka 2022) ತನ್ನ ಮೊದಲ ಪಂಧ್ಯದಲ್ಲಿ ಆತಿಥೇಯ ತಂಡವನ್ನು ೩೪ ರನ್‌ಗಳಿಂದ ಸೋಲಿಸುವ ಮೂಲಕ ಶುಭಾರಂಭ ಮಾಡಿದೆ. ಇದು ೩ ಪಂದ್ಯಗಳ ಟಿ೨೦ ಸರಣಿಯಾಗಿದ್ದು, ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ ಪ್ರವಾಸಿ ಬಳಗ ೧-೦ ಮುನ್ನಡೆ ಪಡೆದುಕೊಂಡಿದೆ.

ರಣಗಿರಿ ದಂಬುಲಾ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಹಣಾಹಣಿಯಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಭಾರತ ಮಹಿಳೆಯರ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 138 ರನ್‌ಗಳನ್ನು ಪೇರಿಸಿತು. ಎಡಗೈ ಸ್ಪಿನ್ನರ್‌ ಇನೋಕ ರಣವೀರ 30ಕ್ಕೆ 3 ವಿಕೆಟ್‌ ಪಡೆಯುವ ಮೂಲಕ ಪ್ರವಾಸಿ ತಂಡದ ರನ್ ಗಳಿಕೆಗೆ ಕಡಿವಾಣ ಹಾಕಿದರು.

ಭಾರತ ಪರ ಶಫಾಲಿ ವರ್ಮಾ (31), ನಾಯಕಿ ಹರ್ಮನ್‌ಪ್ರೀತ್‌ ಕೌರ್‌ (22) ಮತ್ತು ಜೆಮಿಮಾ ರೋಡ್ರಿಗಸ್‌ (36) ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. ಆಲ್‌ರೌಂಡರ್‌ಗಳಾದ ಪೂಜಾ ವಸ್ತ್ರಕಾರ್‌ (14) ಮತ್ತು ದೀಪ್ತಿ ಶರ್ಮಾ (17) ತಂಡಕ್ಕೆ ಕೊಡುಗೆ ಕೊಟ್ಟರು.

104 ರನ್‌ಗಳಿಗೆ ಲಂಕಾ ಆಲ್‌ಔಟ್‌
ಸಾಧಾರಣ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಆತಿಥೇಯ ಶ್ರೀಲಂಕಾ ಮಹಿಳೆಯರ ತಂಡ ಆರಂಭದಲ್ಲೇ ಮುಗ್ಗರಿಸಿದರು. 7 ಓವರ್‌ಗಳ ಮುಕ್ತಾಯಕ್ಕೆ 3 ವಿಕೆಟ್‌ ಕಳೆದುಕೊಂಡು ಕೇವಲ 27 ರನ್‌ ಮಾತ್ರವೇ ಗಳಿಸಿತು. ಈ ಹಿನ್ನೆಯಿಂದ ಚೇತರಿಸಿಕೊಳ್ಳುವುದಕ್ಕೆ ಸಾಧ್ಯವಾಗದೇ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಯಿತು. ಹೀಗಾಗಿ ತನ್ನ ಪಾಲಿನ 20 ಓವರ್‌ಗಳು ಮಕ್ತಾಯಗೊಂಡಾಗ 5 ವಿಕೆಟ್‌ಗೆ ಕಳೆದುಕೊಂಡು 104 ರನ್‌ಗಳನ್ನು ಮಾತ್ರವೇ ಪೇರಿಸಲು ಶಕ್ತವಾಯಿತು. ರಾಧಾ ಯಾದವ್ 22ಕ್ಕೆ 2, ದೀಪ್ತಿ ಶರ್ಮಾ (9 ರನ್‌ಗಳ ವೆಚ್ಚದಲ್ಲಿ 1 ವಿಕೆಟ್) ಮತ್ತು ಪೂಜಾ ವಸ್ತ್ರಕಾರ್‌ (13 ರನ್‌ಗಳಿಗೆ ೧ ವಿಕೆಟ್‌) ಎದುರಾಳಿ ತಂಡ ಹೆಚ್ಚು ಮೊತ್ತ ಗಳಿಸಿದಂತೆ ನೋಡಿಕೊಂಡರು.

ಆತಿಥೇಯ ಶ್ರೀಲಂಕಾ ತಂಡದ ಪರ ಮಧ್ಯಮ ಕ್ರಮಾಂಕದ ಬ್ಯಾಟರ್‌ ಕವಿಶಾ ದಿಲ್ಹಾರಿ, ಕ್ರೀಸ್‌ನಲ್ಲಿ ಭದ್ರವಾಗಿ ನೆಲೆನಿಂತು ಆಡಿದರು. ಆದರೆ ಅವರಿಗೂ 49 ಎಸೆತಗಳಲ್ಲಿ 4 ಫೋರ್‌ಗಳೊಂದಿಗೆ ಅಜೇಯ 47 ರನ್‌ ಬಾರಿಸಲು ಸಾಧ್ಯವಾಯಿತು.

ಪಂದ್ಯ ಮುಕ್ತಾಯದ ಬಳಿಕ ಜೆಮಿಮಾ ರೋಡ್ರಿಗಸ್ ಹಾಗೂ ದೀಪ್ತಿ ಶರ್ಮ ಚಿಟ್‌ಚಾಟ್‌

ಸಂಕ್ಷಿಪ್ತ ಸ್ಕೋರ್‌
ಭಾರತ ಮಹಿಳೆಯರು: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 138 ರನ್‌ (ಶೆಫಾಲಿ ವರ್ಮಾ 31, ಹರ್ಮನ್‌ಪ್ರೀತ್‌ ಕೌರ್‌ 22, ಜೆಮಿಮಾ ರೋಡ್ರಿಗಸ್‌ 36, ದೀಪ್ತಿ ಶರ್ಮಾ 17; ಒಶಾದಿ ರಣಸಿಂಘೆ 22ಕ್ಕೆ 2, ರಣವೀರ 30ಕ್ಕೆ 3, ಚಾಮರಿ ಅಟ್ಟಪಟ್ಟು 7ಕ್ಕೆ 1).
ಶ್ರೀಲಂಕಾ ಮಹಿಳೆಯರು: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 104 ರನ್‌ (ಚಾಮರಿ ಅಟ್ಟಪಟ್ಟು 16, ಕವಿಶಾ ದಿಲ್ಹಾರಿ 47*; ರಾಧಾ ಯಾದವ್ 22ಕ್ಕೆ 2, ಶಫಾಲಿ ವರ್ಮಾ 10ಕ್ಕೆ 1, ಪೂಜಾ ವಸ್ತ್ರಕಾರ್‌ 13ಕ್ಕೆ 1).

ಇನ್ನೂ ಓದಿ| Team India ಹಿಟ್ಟರ್‌ ರೋಹಿತ್‌ ಶರ್ಮಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷ: ಇಲ್ಲಿದೆ ನೋಡಿ ಅಭಿಮಾನಿಗಳಿಗೆ ವಿಶೇಷ ಸಂದೇಶ

Exit mobile version