Site icon Vistara News

India vs WI ODI| ವೆಸ್ಟ್‌ ಇಂಡೀಸ್‌ ವಿರುದ್ಧ ಭಾರತಕ್ಕೆ 3 ರನ್‌ಗಳ ರೋಚಕ ಗೆಲುವು

india west indies

ಟ್ರಿನಿಡಾಡ್: (ವೆಸ್ಟ್‌ ಇಂಡೀಸ್)‌ ವೆಸ್ಟ್‌ ಇಂಡೀಸ್‌ ವಿರುದ್ಧದ (India vs West Indies ODI) ಮೂರು ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ೩ ರನ್‌ಗಳ ರೋಚಕ ವಿಜಯ ಸಾಧಿಸಿದೆ. ಇದರೊಂದಿಗೆ ಸರಣಿಯಲ್ಲಿ ೧-೦ ಮುನ್ನಡೆ ಸಾಧಿಸಿದೆ.

ಕ್ವೀನ್ಸ್‌ ಪಾರ್ಕ್‌ ಓವಲ್‌ ಸ್ಟೇಡಿಯಮ್‌ನಲ್ಲಿ ಶುಕ್ರವಾರ ಸಂಜೆ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ ಆಹ್ವಾನ ಪಡೆದ ಭಾರತ ತಂಡ ನಿಗದಿತ ೫೦ ಓವರ್‌ಗಳಲ್ಲಿ ೭ ವಿಕೆಟ್‌ ನಷ್ಟಕ್ಕೆ ೩೦೮ ರನ್‌ ಬಾರಿಸಿತು. ಗುರಿ ಬೆನ್ನಟ್ಟಿದ ಆತಿಥೇಯ ವಿಂಡೀಸ್‌ ಬಳಗ ತಮ್ಮ ಪಾಲಿನ ಓವರ್‌ಗಳು ಮುಕ್ತಾಯಗೊಂಡಾಗ ೬ ವಿಕೆಟ್‌ ನಷ್ಟಕ್ಕೆ ೩೦೫ ರನ್‌ ಬಾರಿಸಲು ಶಕ್ತಗೊಂಡು ಸೋಲೊಪ್ಪಿಕೊಂಡಿತು. ಭಾರತದ ವೇಗದ ಬೌಲರ್‌ ಮೊಹಮ್ಮದ್‌ ಸಿರಾಜ್‌ ಕೊನೇ ಓವರ್‌ನಲ್ಲಿ ಎದುರಾಳಿ ತಂಡಕ್ಕೆ ಬೇಕಾದ ೧೫ ರನ್‌ಗಳನ್ನು ಕಾಪಾಡಿಕೊಂಡು ತಂಡಕ್ಕೆ ಜಯ ತಂದುಕೊಟ್ಟರು.

ಧವನ್‌, ಗಿಲ್‌ ಭದ್ರ ಬುನಾದಿ

ಮೊದಲು ಬ್ಯಾಟ್‌ ಮಾಡಿದ ಭಾರತ ತಂಡಕ್ಕೆ ನಾಯಕ ಶಿಖರ್‌ ಧವನ್‌ (97) ಹಾಗೂ ಶುಬ್ಮನ್ ಗಿಲ್‌ (೬೪) ಉತ್ತಮ ಆರಂಭ ತಂದುಕೊಟ್ಟರು. ಈ ಜೋಡಿ ಮೊದಲ ವಿಕೆಟ್‌ಗೆ ೧೧೯ ರನ್‌ಗಳ ಜತೆಯಾಟ ನೀಡಿತು. ಮೂರನೇ ಕ್ರಮಾಂಕದಲ್ಲಿ ಆಡಲು ಇಳಿದ ಶ್ರೇಯಸ್‌ ಅಯ್ಯರ್‌ ೫೪ ರನ್‌ ಬಾರಿಸಿ ದೊಡ್ಡ ಮೊತ್ತದ ಗುರಿಯನ್ನು ಸಾಧಿಸುವಲ್ಲಿ ತಮ್ಮ ಕೊಡುಗೆ ನೀಡಿದರು. ಅದಾದ ಬಳಿಕ ಇವರ ಅಮೋಘ ಆಟದ ನೆರವಿನಿಂದ ಭಾರತ ತಂಡ ೩೫.೫ ಓವರ್‌ಗಳಲ್ಲಿ ೨೩೦ ರನ್‌ ಬಾರಿಸಿ ಬೃಹತ್‌ ಮೊತ್ತ ಪೇರಿಸುವ ಸೂಚನೆ ನೀಡಿತು.

ಮೂರು ವಿಕೆಟ್‌ ನಷ್ಟವಾಗುತ್ತಿದ್ದಂತೆ ಭಾರತ ತಂಡದ ರನ್‌ ಗತಿ ಕುಂಠಿತಗೊಂಡಿತು. ಭರವಸೆಯ ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ ೧೩ ರನ್‌ ಬಾರಿಸಿದರೆ, ಸಂಜು ಸ್ಯಾಮ್ಸನ್‌ ೧೨ ರನ್‌ಗಳಿಗೆ ಔಟಾದರು. ಹೀಗಾಗಿ ೨೫೨ ರನ್‌ಗಳಿಗೆ ೫ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ದೀಪಕ್‌ ಹೂಡ ೨೭ ರನ್‌ ಬಾರಿಸಿದರೆ, ಅಕ್ಷರ್‌ ಪಟೇಲ್‌ ೨೧ ರನ್‌ ಕೊಡುಗೆ ಕೊಟ್ಟರು. ಶಾರ್ದುಲ್ ಠಾಕೂರ್‌ ೭ ರನ್‌ ಗಳಿಸಿ ಹಾಗೂ ಮೊಹಮ್ಮದ್‌ ಶಮಿ ೧ ರನ್‌ ಗಳಿಸಿ ಅಜೇಯರಾಗಿ ಉಳಿದರು.

ವಿಂಡೀಸ್‌ ಬೌಲಿಂಗ್ ಪರ ಅಲ್ಜಾರಿ ಜೋಸೆಫ್‌, ಗುಡ್ಕೇಶ್‌ ಮೋತಿ ತಲಾ ೨ ವಿಕೆಟ್ ಕಬಳಿಸಿದರೆ, ರೊಮಾರಿಯೊ ಶಫರ್ಡ್‌ ಹಾಗೂ ಅಕೇಲ್‌ ಹೊಸೈನ್‌ ಒಂದೊಂದು ವಿಕೆಟ್‌ ತಮ್ಮದಾಗಿಸಿಕೊಂಡರು.

ಆತಿಥೇಯರ ಸವಾಲು

ಭಾರತದ ೩೦೮ ರನ್‌ಗಳ ಸವಾಲನ್ನು ಬೆನ್ನಟ್ಟಿದ ವೆಸ್ಟ್‌ ಇಂಡೀಸ್‌ ಪರ ಕೈಲ್‌ ಮೇಯರ್ಸ್‌ ೬೮ ಎಸೆತಗಳಿಗೆ ೭೫ ರನ್‌ ಗಳಿಸಿದರು. ಶಮ್ರಾಹ್‌ ಬ್ರೂಕ್ಸ್‌ ೬೧ ಎಸೆತಕ್ಕೆ ೪೬ ರನ್‌ ಪೇರಿಸಿದರು. ಬ್ರೆಂಡನ್‌ ಕಿಂಗ್‌ ಕೂಡ ೫೪ ರನ್‌ ಬಾರಿಸಿದರು. ಕೊನೆಯ ಹಂತದಲ್ಲಿ ಅಕೇಲ್‌ ಹೊಸೈನ್‌ ೩೨ ಮತ್ತು ರೊಮಾರಿಯೊ ಶೆಫರ್ಡ್‌ ೩೯ ರನ್‌ ಸಿಡಿಸಿ ಭಾರತದ ಗೆಲುವು ಕಸಿಯುವ ಪ್ರಯತ್ನ ಮಾಡಿದರು. ಆದಾಗ್ಯೂ ಭಾರತ ನೀಡಿದ ಗುರಿಯನ್ನು ಮೀರಲು ಸಾಧ್ಯವಾಗದೇ ೩ ರನ್‌ಗಳಿಂದ ಸೋಲೊಪ್ಪಿಕೊಂಡಿತು.

ಭಾರತದ ಪರ ಮಹಮ್ಮದ್‌ ಸಿರಾಜ್‌ , ಶಾರ್ದುಲ್‌ ಠಾಕೂರ್‌ ಮತ್ತು ಯಜ್ವೇಂದ್ರ ಚಹಲ್‌ ತಲಾ ೨ ವಿಕೆಟ್‌ ಗಳಿಸಿದರು.

ಇತ್ತಂಡಗಳ ನಡುವಿನ ಎರಡನೇ ಪಂದ್ಯ ಭಾನುವಾರ ಇದೇ ಸ್ಟೇಡಿಯಮ್‌ನಲ್ಲಿ ನಡೆಯಲಿದೆ.

ಇದನ್ನೂ ಓದಿ | IND vs ENG ODI | ಭಾರತಕ್ಕೆ ಐದು ವಿಕೆಟ್‌ ಭರ್ಜರಿ ಜಯ, 2-1 ಅಂತರದಲ್ಲಿ ಸರಣಿ ಕೈವಶ

Exit mobile version