ಲಖನೌ : ಬೌಲರ್ಗಳ ನಿಖರ ದಾಳಿ ಹಾಗೂ ಬ್ಯಾಟರ್ಗಳ ಸಮಯೋಚಿತ ಪ್ರದರ್ಶನದ ನೆರವು ಪಡೆದ ಭಾರತ ತಂಡ ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿಯ (INDvsNZ T20) ಎರಡನೇ ಪಂದ್ಯದಲ್ಲಿ 6 ವಿಕೆಟ್ ವಿಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಇತ್ತಂಡಗಳು 1-1 ಸಮಬಲದ ಸಾಧನೆ ಮಾಡಿದವು. ರಾಂಚಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮಿಚೆಲ್ ಸ್ಯಾಂಟ್ನರ್ ಬಳಗ 21 ರನ್ಗಳಿಂದ ಗೆಲುವು ಸಾಧಿಸಿತು. ಫೆಬ್ರವರಿ 1ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ನಡೆಯುವ ಮೂರನೇ ಪಂದ್ಯದಲ್ಲಿ ಸರಣಿ ವಿಜೇತರ ನಿರ್ಣಯವಾಗಲಿದ್ದು, ಆ ಹಣಾಹಣಿಯ ಬಗ್ಗೆ ಕೌತುಕ ಹೆಚ್ಚಾಗಿದೆ.
ಇಲ್ಲಿನ ಭಾರತರತ್ನ ಶ್ರೀ ಅಟಲ್ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಭಾನುವಾರ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪ್ರವಾಸಿ ಬಳಗ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 99 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಭಾರತ ತಂಡ 19.5 ಓವರ್ಗಳಲ್ಲಿ 4 ವಿಕೆಟ್ಗೆ 101 ರನ್ ಬಾರಿಸಿ ಜಯಶಾಲಿಯಾಯಿತು.
ಸಣ್ಣ ಮೊತ್ತವನ್ನು ಬೆನ್ನಟ್ಟಲ ಹೊರಟ ಭಾರತ ತಂಡದ ಆರಂಭವೂ ಉತ್ತಮವಾಗಿರಲಿಲ್ಲ. ಶುಬ್ಮನ್ ಗಿಲ್ 11 ರನ್ಗಳಿಗೆ ಔಟಾದರೆ ಇಶಾನ್ ಕಿಶನ್ 19 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ರಾಹುಲ್ ತ್ರಿಪಾಠಿ 13 ರನ್ ಬಾರಿಸಿ ನಿರ್ಗಮಿಸಿದರು. ಕೊನೆಯಲ್ಲಿ ಸೂರ್ಯಕುಮಾರ್ ಯಾದವ್ 26 ಬಾರಿಸಿದರೆ, ಹಾರ್ದಿಕ್ ಪಾಂಡ್ಯ 10 ರನ್ ಗಳಿಸಿದರು.
ಇದನ್ನೂ ಓದಿ : U19 World Cup : ವಿಶ್ವ ಕಪ್ ಗೆದ್ದ ಭಾರತ ವನಿತೆಯರ ತಂಡಕ್ಕೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ
ಅದಕ್ಕಿಂತ ಮೊದಲು ಬ್ಯಾಟ್ ಮಾಡಿದ ನ್ಯೂಜಿಲ್ಯಾಂಡ್ ತಂಡ ಭಾರತದ ಬೌಲರ್ಗಳ ಪ್ರಖರ ದಾಳಿಗೆ ತತ್ತರಿಸಿದರು. ತಿರುವು ಪಡೆಯುತ್ತಿದ್ದ ಪಿಚ್ನಲ್ಲಿ ಪ್ರವಾಸಿ ತಂಡದ ಬ್ಯಾಟರ್ಗಳು ರನ್ ಗಳಿಸಲು ತಿಣುಕಾಡಿದರು. ಆರಂಭಿಕರಾದ ಫಿನ್ ಅಲೆನ್ ಹಾಗೂ ಡೆವೋನ್ ಕಾನ್ವೆ ತಲಾ 11 ರನ್ ಬಾರಿಸಿದರೆ, ಮಾರ್ಕ್ ಚಾಪ್ಮನ್ 14 ರನ್ ಬಾರಿಸಿ ವಿಶ್ವಾಸ ಮೂಡಿಸಿದರೂ 14 ರನ್ ಬಾರಿಸಿ ರನ್ಔಟ್ ಆದರು. ಭಾರತದ ಸ್ಪಿನ್ ಬೌಲರ್ಗಳಾದ ಯಜ್ವೇಂದ್ರ ಚಹಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್ ಹಾಗೂ ದೀಪಕ್ ಹೂಡ ನಿಯಂತ್ರಿತ ಬೌಲಿಂಗ್ ದಾಳಿ ಸಂಘಟಿಸಿ ಎದುರಾಳಿ ತಂಡದ ಬ್ಯಾಟರ್ಗಳನ್ನು ಕಟ್ಟಿ ಹಾಕಿದರು. ಕೊನೆಯಲ್ಲಿ ಅರ್ಶ್ದೀಪ್ ಸಿಂಗ್ 2 ವಿಕೆಟ್ ಕಬಳಿಸಿದರು.