ಹೈದರಾಬಾದ್ : ಸೂರ್ಯಕುಮಾರ್ ಯಾದವ್ ಅವರ ಸ್ಫೋಟಕ ೬೯ ರನ್ ಹಾಗೂ ವಿರಾಟ್ ಕೊಹ್ಲಿಯ (೬೩) ಸಮಯೋಚಿತ ಅರ್ಧ ಶತಕದ ನೆರವು ಪಡೆದ ಭಾರತ ತಂಡ, ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಟಿ೨೦ ಸರಣಿಯ ಮೂರನೇ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಜಯ ಸಾಧಿಸಿತು. ಇದರೊಂದಿಗೆ ಸರಣಿಯನ್ನು ೨-೧ ಅಂತರದಿಂದ ರೋಹಿತ್ ಶರ್ಮ ಬಳಗದ ಪಾಲಾಯಿತು.
ಇಲ್ಲಿನ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ನಿಗದಿತ ೨೦ ಓವರ್‌ಗಳಲ್ಲಿ ೧೮೬ ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಭಾರತ ತಂಡ 1 ಎಸೆತ ಬಾಕಿ ಇರುವಂತೆಯೇ 4 ವಿಕೆಟ್ ಕಳೆದುಕೊಂಡು 187 ರನ್ ಪೇರಿಸಿ ವೀರೋಚಿತ ಜಯ ಸಾಧಿಸಿತು.
ದೊಡ್ಡ ಮೊತ್ತದ ಗುರಿ ಬೆನ್ನಟ್ಟಿದ ಭಾರತ ತಂಡದ ಆರಂಭ ಉತ್ತಮವಾಗಿರಲಿಲ್ಲ. ಕೆ. ಎಲ್ ರಾಹುಲ್ ೧ ರನ್‌ಗೆ ಔಟಾದರೆ, ನಾಯಕ ರೋಹಿತ್ ಶರ್ಮ ೧೭ ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ೩೦ ರನ್‌ಗೆ ೨ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಬಿದ್ದ ಭಾರತ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ನೆರವಾದರು. ಈ ಜೋಡಿ ಮೂರನೇ ವಿಕೆಟ್‌ಗೆ ೧೦೪ ರನ್‌ಗಳ ಜತೆಯಾಟ ನೀಡಿತು. ಸಿಡಿಲಬ್ಬರದ ಪ್ರದರ್ಶನ ನೀಡಿದ ಸೂರ್ಯಕುಮಾರ್ ೩೬ ಎಸೆತಗಳಲ್ಲಿ ೬೯ ರನ್ ಬಾರಿಸಿ, ಹೇಜಲ್‌ವುಡ್ ಎಸೆತಕ್ಕೆ ಔಟಾದರು. ವಿರಾಟ್ ಕೊಹ್ಲಿ ಡ್ಯಾನಿಲ್ ಸ್ಯಾಮ್ಸ್‌ಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ೨೫ ರನ್ ಬಾರಿಸಿ ಫಿನಿಶರ್ ಎನಿಸಿಕೊಂಡರು.
ಗ್ರೀನ್, ಡೇವಿಡ್ ಶ್ರಮ ವ್ಯರ್ಥ
ಮೊದಲು ಬ್ಯಾಟ್ ಮಾಡಿದ ಪ್ರವಾಸಿ ಆಸ್ಟ್ರೇಲಿಯಾ ತಂಡ ಕ್ಯಾಮೆರಾನ್ ಗ್ರೀನ್ ಅವರ ಸ್ಫೋಟಕ ಬ್ಯಾಟಿಂಗ್ (೨೧ ಎಸೆತಗಳಲ್ಲಿ ೫೧ ರನ್) ನೆರವಿನಿಂದ ಬೃಹತ್ ಮೊತ್ತ ಪೇರಿಸುವ ಸೂಚನೆ ಕೊಟ್ಟರು. ಆದರೆ, ಆರೋನ್ ಫಿಂಚ್ (೭), ಸ್ಟೀವ್ ಸ್ಮಿತ್ (೯), ಗ್ಲೆನ್ ಮ್ಯಾಕ್‌ವೆಲ್ (೬) ಬೇಗ ವಿಕೆಟ್ ಒಪ್ಪಿಸಿದರು. ಸ್ಪಿನ್ನರ್‌ಗಳಾದ ಅಕ್ಷರ್ ಪಟೇಲ್ (೩೩ ರನ್‌ಗಳಿಗೆ ೩ ವಿಕೆಟ್ ) ಹಾಗೂ ಯಜ್ವೇಂದ್ರ ಚಹಲ್ (೨೨ ರನ್‌ಗಳಿಗೆ ೧ ವಿಕೆಟ್) ಆಸೀಸ್ ದಾಂಡಿಗರಿಗೆ ಕಡಿವಾಣ ಹಾಕಿದರು. ಕಳೆದೆರಡು ಪಂದ್ಯಗಳಲ್ಲಿ ಮಿಂಚಿದ್ದ ಮ್ಯಾಥ್ಯೂ ವೇಡ್ ೧ ರನ್‌ಗೆ ಔಟಾಗಿ ನಿರಾಸೆ ಎದುರಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಟಿಮ್ ಡೇವಿಡ್ (೫೪) ಅರ್ಧ ಶತಕ ಬಾರಿಸಿದರು. ಡ್ಯಾನಿಯಲ್ ಸ್ಯಾಮ್ಸ್ (೨೮) ಅವರಿಗೆ ಉತ್ತಮ ಸಾಥ್ ಕೊಟ್ಟರು. ಭಾರತ ಪರ ಮತ್ತೆ ಬೌಲಿಂಗ್‌ನಲ್ಲಿ ಮಿಂಚಿದ ಅಕ್ಷರ್ ಪಟೇಲ್ ೩೩ ರನ್‌ಗಳಿಗೆ ೩ ವಿಕೆಟ್ ಕಬಳಿಸಿದರು.
ಸ್ಕೋರ್ ವಿವರ
ಆಸ್ಟ್ರೇಲಿಯಾ : ೨೦ ಓವರ್‌ಗಳಲ್ಲಿ ೭ ವಿಕೆಟ್‌ಗೆ ೧೮೬ (ಟಿಮ್ ಡೇವಿಡ್ ೫೪, ಕ್ಯಾಮೆರಾನ್ ಗ್ರೀನ್ ೫೨; ಅಕ್ಷರ್ ಪಟೇಲ್ ೩೩ಕ್ಕೆ೩).
ಭಾರತ: ೧೯.೫ ಓವರ್‌ಗಳಲ್ಲಿ ೪ ವಿಕೆಟ್‌ಗೆ ೧೮೭ (ಸೂರ್ಯಕುಮಾರ್ ಯಾದವ್ ೬೯, ವಿರಾಟ್ ಕೊಹ್ಲಿ ೬೩, ಡ್ಯಾನಿಯಲ್ ಸ್ಯಾಮ್ಸ್ ೩೩ಕ್ಕೆ೨)
ಇದನ್ನೂ ಓದಿ | Rohit Sharma | ಟಿ20 ಸಿಕ್ಸರ್‌ಗಳ ವಿಶ್ವ ದಾಖಲೆ ಸೃಷ್ಟಿಸಿದ ರೋಹಿತ್ ಶರ್ಮ