Site icon Vistara News

IND VS ZIM | ಜಿಂಬಾಬ್ವೆ ವಿರುದ್ಧ 71 ರನ್​ ಭರ್ಜರಿ ಗೆಲುವು ದಾಖಲಿಸಿದ ಟೀಮ್​ ಇಂಡಿಯಾ

ind

ಮೆಲ್ಬೋರ್ನ್​: ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಉತ್ಕೃಷ್ಟ ಮಟ್ಟದ ಪ್ರದರ್ಶನ ತೋರಿದ ಟೀಮ್​ ಇಂಡಿಯಾ ಐಸಿಸಿ ಟಿ20 ವಿಶ್ವ ಕಪ್​ನ ಅಂತಿಮ ಸೂಪರ್​-12 ಪಂದ್ಯದಲ್ಲಿ ಜಿಂಬಾಬ್ವೆ (IND VS ZIM) ವಿರುದ್ಧ 71 ರನ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಮೊದಲೇ ಭಾರತ ಸೆಮಿಫೈನಲ್​ ಪ್ರವೇಶಿಸಿದ್ದರಿಂದ ಇದೊಂದು ಭಾರತದ ಪಾಲಿಗೆ ಔಪಚಾರಿಕ ಪಂದ್ಯದಂತಿತ್ತು. ಇದರಲ್ಲಿಯೂ ಮೇಲುಗೈ ಸಾಧಿಸಿದ ರೋಹಿತ್​ ಪಡೆ ಬಿ ಗ್ರೂಪ್​ನ ಅಗ್ರ ಸ್ಥಾನಿಯಾಗಿ ತನ್ನ ಲೀಗ್​ ಪಂದ್ಯಕ್ಕೆ ಅಂತ್ಯ ಹಾಡಿತು. ಅದರಂತೆ ಭಾರತ ಸೆಮಿಫೈನಲ್​ನಲ್ಲಿ ಎ ಗ್ರೂಪ್​ನ ದ್ವಿತೀಯ ಸ್ಥಾನಿ ಇಂಗ್ಲೆಂಡ್ ವಿರುದ್ಧ ಸೆಣಸಾಟ ನಡೆಸಲಿದೆ. ಈ ಮುಖಾಮುಖಿ ನವೆಂಬರ್​ 10ರಂದು ಅಡಿಲೇಡ್​ ಓವಲ್​ ಮೈದಾನದಲ್ಲಿ ನಡೆಯಲಿದೆ.

ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಈ ಮುಖಾಮುಖಿಯಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಭಾರತ ತಂಡ ರಾಹುಲ್(51)​ ಮತ್ತು ಸೂರ್ಯಕುಮಾರ್​(ಅಜೇಯ61) ಅವರ ಅರ್ಧಶತಕದ ಬ್ಯಾಟಿಂಗ್​ ಸಾಹಸದಿಂದ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 186 ರನ್​ ಪೇರಿಸಿತು. ಬಳಿಕ ಬೃಹತ್​ ಮೊತ್ತ ಬೆನ್ನಟ್ಟಿದ ಜಿಂಬಾಬ್ವೆ ತಂಡ 17.2 ಓವರ್​ಗಳಲ್ಲಿ 115 ರನ್​ ಗಳಿಸಿ ಶರಣಾಯಿತು.

ಗುರಿ ಬೆನ್ನಟ್ಟಿದ ಜಿಂಬಾಬ್ವೆ ಬೃಹತ್​ ಮೊತ್ತವನ್ನು ಕಂಡು ಆರಂಭದಲ್ಲೆ ಮಂಕಾಯಿತು. ತಂಡದ ಖಾತೆ ತೆರೆಯುವ ಮುನ್ನವೇ ವೆಸ್ಲಿ ಮಾಧೆವೆರೆ(0) ವಿಕೆಟ್​ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಭುವನೇಶ್ವರ್​ ಕುಮಾರ್​ ಮೊದಲ ಓವರ್​ನಲ್ಲಿಯೇ ಮೇಡನ್​ ಸಹಿತ ಈ ವಿಕೆಟ್​ ಕಿತ್ತು ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಇದರ ಬೆನ್ನಲ್ಲೆ ಮುಂದಿನ ಓವರ್​ ಎಸೆಯಲು ಬಂದ ಎಡಗೈ ವೇಗಿ ಅರ್ಶ್​ದೀಪ್​ ಸಿಂಗ್​ ಕೂಡ ರೆಗಿಸ್ ಚಕಬ್ವಾ(0) ವಿಕೆಟ್​ ಉರುಳಿಸಿದರು. ಜಿಂಬಾಬ್ವೆ ತಂಡ 30 ರನ್​ ಗಡಿದಾಡುವ ವೇಳೆ ಪ್ರಮುಖ ನಾಲ್ಕು ವಿಕೆಟ್​ ಕಳೆದುಕೊಂಡು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿತು. ಇನ್ನೇನು 50 ರನ್​ ಒಳಗಡೆ ಗಂಟು ಮೂಟೆ ಕಟ್ಟಲಿದೆ ಎನ್ನುವಾಗ ಮಧ್ಯಮ ಕ್ರಮಾಂಕದಲ್ಲಿ ಆಡಲಿಳಿದ ಸಿಕಂದರ್​ ರಾಜಾ ಮತ್ತು ರಿಯಾನ್ ಬರ್ಲ್ ಜತೆಗೂಡಿ ಸಣ್ಣ ಮಟ್ಟದ ಹೊರಟವೊಂದನ್ನು ನಡೆಸಿದರು. ಈ ಉಭಯ ಆಟಗಾರರ ನೆರವಿನಿಂದ ಜಿಂಬಾಬ್ವೆ ನೂರರ ಗಡಿದಾಟಿತು. ಜತೆಗೆ ಸೋಲಿನ ಅಂತರವನ್ನು ತಗ್ಗಿಸಿತು. ರಿಯಾನ್ ಬರ್ಲ್ 35 ರನ್​ ಸಿಡಿಸಿ ಅಶ್ವಿನ್​ಗೆ ವಿಕೆಟ್​ ಒಪ್ಪಿಸಿದರು. ಸಿಕಂದರ್​ ರಾಜಾ 24 ಎಸೆತದಿಂದ 34 ರನ್​ ಕಲೆಹಾಕಿದರು.

ಸೂರ್ಯಕುಮಾರ್​ ಬ್ಯಾಟಿಂಗ್ ಆರ್ಭಟ

ವಿರಾಟ್​ ಕೊಹ್ಲಿ ಮತ್ತು ರಾಹುಲ್​ ವಿಕೆಟ್​ ಪತನಗೊಂಡಾಗ ಒಂದು ಹಂತದಲ್ಲಿ ಭಾರತ ತಂಡದ ಸ್ಕೋರ್‌ 160ರ ಗಡಿ ದಾಟುವುದು ಕಷ್ಟ ಎಂಬಂತಿತ್ತು. ಇದೇ ವೇಳೆ ಬ್ಯಾಟಿಂಗ್​ಗೆ ಇಳಿದ ಸೂರ್ಯಕುಮಾರ್​ ಯಾದವ್,​ ಪತ್ರಿ ಪಂದ್ಯದಂತೆ ಈ ಪಂದ್ಯದಲ್ಲಿಯೂ ಸ್ಫೋಟಕ ಬ್ಯಾಟಿಂಗ್​ ನಡೆಸಿದರು. ಆರಂಭದಿಂದಲೇ ಸಿಕ್ಸರ್​ ಮತ್ತು ಬೌಂಡರಿ ಮೂಲಕ ಜಿಂಬಾಬ್ಬೆ ಬೌಲರ್​ಗಳನ್ನು ಮನಬಂದಂತೆ ಡಂಡಿಸಿದರು. ಅವರ ಈ ಬ್ಯಾಟಿಂಗ್​ ಆರ್ಭಟದಿಂದ ಕೊನೇ 5 ಓವರ್‌ಗಳಲ್ಲಿ 79 ರನ್​ ಹರಿದು ಬಂದು ತಂಡ ಬೃಹತ್​ ಮೊತ್ತ ದಾಖಲಿಸಿತು. ಒಟ್ಟು 25 ಎಸೆತ ಎದುರಿಸಿ ಸೂರ್ಯಕುಮಾರ್​ ಅಜೇಯ 61 ರನ್​ ಬಾರಿಸಿದರು. ಈ ಸೊಗಸಾದ ಇನಿಂಗ್ಸ್​ ವೇಳೆ 6 ಬೌಂಡರಿ ಮತ್ತು 4 ಸಿಕ್ಸರ್​ ಸಿಡಿಯಿತು. ಉಳಿದಂತೆ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ 18 ರನ್​ ಗಳಿಸಿದರು. ಜಿಂಬಾಬ್ವೆ ಪರ ಸೇನ್​ ವಿಲಿಯಮ್ಸನ್​ 9 ರನ್​ಗೆ 2 ವಿಕೆಟ್​ ಕಿತ್ತು ಮಿಂಚಿದರು.

ರಾಹುಲ್​ ಅರ್ಧಶತಕ

ಬಾಂಗ್ಲಾದೇಶದ ವಿರುದ್ಧ ಅರ್ಧಶತಕ ಸಿಡಿಸಿ ಮಿಂಚಿದ್ದ ಕೆ.ಎಲ್​. ರಾಹುಲ್​ ಬ್ಯಾಟಿಂಗ್​ ಪ್ರದರ್ಶನ ಈ ಪಂದ್ಯದಲ್ಲಿಯೂ ಮುಂದುವರಿಯಿತು. ಆರಂಭಿಕ ವಿಕೆಟ್​ಗೆ ನಾಯಕ ರೋಹಿತ್​ ಜತೆಗೂಡಿ ತಂಡಕ್ಕೆ 27 ರನ್​ ಒಟ್ಟುಗೂಡಿಸಿದ ಅವರು ಬಳಿಕ ವಿರಾಟ್​ ಕೊಹ್ಲಿ ಜತೆ ದ್ವಿತೀಯ ವಿಕೆಟ್​ಗೆ 60 ರನ್​ ಜತೆಯಾಟ ನಡೆಸಿ ತಂಡಕ್ಕೆ ನೆರವಾದರು. ಆರಂಭದಲ್ಲಿ ಕೊಂಚ ನಿಧಾನಗತಿಯ ಬ್ಯಾಟಿಂಗ್​ಗೆ ಮುಂದಾದ ರಾಹುಲ್​ ನಾಲ್ಕು ಎಸೆತದ ಬಳಿಕ ರನ್​ ಖಾತೆ ತೆರೆದರು. ಬಳಿಕ ಬಿರುಸಿನ ಆಟಕ್ಕೆ ಮುಂದಾಗಿ 35 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಮೂರು ಸಿಕ್ಸರ್​ ನೆರವಿನಿಂದ 51 ರನ್​ ಗಳಿಸಿದರು. ಉಳಿದಂತೆ ವಿರಾಟ್​ ಕೊಹ್ಲಿ 25 ಎಸೆತದಿಂದ 26 ರನ್​ ಬಾರಿಸಿದರು. ಕಳೆದ ಪಂದ್ಯಕ್ಕೆ ಹೋಲಿಕೆ ಮಾಡಿದರೆ ವಿರಾಟ್​ ಕೊಹ್ಲಿ ಈ ಪಂದ್ಯದಲ್ಲಿ ನಿಧಾನ ಗತಿಯ ಆಟವಾಡಿದಂತೆ ಕಂಡುಬಂತು. ಎಸೆತಕ್ಕೆ ಒಂದರಂತೆ ರನ್​ ಗಳಿಸಿದರು. ಒಟ್ಟಾರೆ ಕೊಹ್ಲಿ ಈ ಪಂದ್ಯದಲ್ಲಿ 2 ಬೌಂಡರಿ ಮಾತ್ರ ಸಿಡಿಸಿದರು.

ರೋಹಿತ್​ ಮತ್ತೆ ವಿಫಲ

ಭಾರತ ತಂಡದ ನಾಯಕ ರೋಹಿತ್​ ಶರ್ಮ ಈ ಪಂದ್ಯದಲ್ಲಿಯೂ ಮತ್ತೆ ಬ್ಯಾಟಿಂಗ್​ ವೈಫಲ್ಯ ಅನುಭವಿಸಿದರು. 13 ಎಸೆತದಲ್ಲಿ 15 ರನ್​ಗೆ ವಿಕೆಟ್​ ಒಪ್ಪಿಸಿದರು. ಈ ವಿಕೆಟ್​ ಬ್ಲೆಸಿಂಗ್ ಮುಜರಬಾನಿ ಪಾಲಾಯಿತು. ದಿನೇಶ್​ ಕಾರ್ತಿಕ್​ ಬದಲು ಆಡಲಿಳಿದ ರಿಷಭ್​ ಪಂತ್​ ಕೇವಲ ಮೂರು ರನ್​ಗೆ ಔಟಾದರು. ಈ ಮೂಲಕ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ವಿಫಲರಾದರು.

ಸಂಕ್ಷಿಪ್ತ ಸ್ಕೋರ್​:

ಭಾರತ: 20 ಓವರ್​ಗಳಲ್ಲಿ 5 ವಿಕೆಟ್​ಗೆ 186 (ರಾಹುಲ್​ 51, ಸೂರ್ಯಕುಮಾರ್​ ಅಜೇಯ 61, ವಿರಾಟ್​ ಕೊಹ್ಲಿ 26, ಸೇನ್​ ವಿಲಿಯಮ್ಸನ್​ 9ಕ್ಕೆ 2).

ಜಿಂಬಾಬ್ವೆ: 17.2 ಓವರ್​ಗಳಲ್ಲಿ 115ಕ್ಕೆ​ ಆಲೌಟ್​ (ರಿಯಾನ್ ಬರ್ಲ್ 35, ಸಿಕಂದರ್​ ರಾಜಾ 24, ಅಶ್ವಿನ್​ 22ಕ್ಕೆ 3, ಮೊಹಮ್ಮದ್​​ ಶಮಿ 14ಕ್ಕೆ2, ಹಾರ್ದಿಕ್​ ಪಾಂಡ್ಯ 16ಕ್ಕೆ2) ಪಂದ್ಯಶ್ರೇಷ್ಠ: ಸೂರ್ಯಕುಮಾರ್​ ಯಾದವ್​

ಇದನ್ನೂ ಓದಿ |PAK VS BANGLA | ಬಾಂಗ್ಲಾದೇಶದ ವಿರುದ್ಧ ಗೆದ್ದು ಸೆಮಿಫೈನಲ್​ ಪ್ರವೇಶಿಸಿದ ಪಾಕಿಸ್ತಾನ

Exit mobile version