ಧರ್ಮಶಾಲಾ: ಇಂಗ್ಲೆಂಡ್(IND vs ENG) ವಿರುದ್ಧದ ಅಂತಿಮ ಟೆಸ್ಟ್(India vs England 5th Test) ಪಂದ್ಯದಲ್ಲಿ ಆತಿಥೇಯ ಭಾರತ ಇನಿಂಗ್ಸ್ ಮತ್ತು 64 ರನ್ಗಳ ಅಂತರದ ಗೆಲುವು ಸಾಧಿಸುವ ಮೂಲಕ ಸರಣಿಯನ್ನು 4-1 ರೊಂದಿಗೆ ಮುಕ್ತಾಯಗೊಳಿಸಿದೆ. ಗುರುವಾರ ಆರಂಭಗೊಂಡ ಈ ಟೆಸ್ಟ್ ಪಂದ್ಯ ಕೇವಲ ಮೂರು ದಿನಕ್ಕೆ ಅಂತ್ಯಕಂಡಿತು.
ದಾಖಲೆ ಬರೆದ ಭಾರತ
ಭಾರತ ಈ ಗೆಲುವಿನ ಮೂಲಕ 112 ವರ್ಷದಲ್ಲೇ ಮೊದಲ ಪಂದ್ಯದ ಸೋಲಿನ ಬಳಿಕ 5 ಪಂದ್ಯದ ಸರಣಿಯಲ್ಲಿ 4-1 ರಿಂದ ಗೆದ್ದ ಏಕೈಕ ತಂಡ ಎಂಬ ಇತಿಹಾಸ ನಿರ್ಮಿಸಿತು. 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯ ಸೋತು ಬಳಿಕ ಸರಣಿಯನ್ನು 4-1ರಿಂದ ಗೆದ್ದಿದ್ದು ಈ ವರೆಗೆ ಕೇವಲ 2 ತಂಡಗಳು ಮಾತ್ರ. 1897-98 ಮತ್ತು 1901-02ರಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ, 1912ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಈ ಸಾಧನೆ ಮಾಡಿತ್ತು. ಇದೀಗ ಈ ಸಾಧನೆ ಕೂಡ ಈ ಸಾಧನೆ ಮಾಡಿದೆ.
That series winning feeling 😃#TeamIndia 🇮🇳 complete a 4⃣-1⃣ series victory with a remarkable win 👏👏
— BCCI (@BCCI) March 9, 2024
Scorecard ▶️ https://t.co/OwZ4YNua1o#INDvENG | @IDFCFIRSTBank pic.twitter.com/vkfQz5A2hy
ಮೂರನೇ ದಿನವಾದ ಶನಿವಾರ 8 ವಿಕೆಟ್ಗೆ 473 ರನ್ ಗಳಿಸಿದ್ದಲ್ಲಿಂದ ಬ್ಯಾಟಿಂಗ್ ಮುಂದುವರಿಸಿ ಭಾರತ ಕೇವಲ ನಾಲ್ಕು ರನ್ ಗಳಿಸಲಷ್ಟೇ ಶಕ್ತವಾಗಿ 477ರನ್ಗೆ ಆಲೌಟ್ ಆಯಿತು. 259 ರನ್ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ಗೆ 100ನೇ ಟೆಸ್ಟ್ ಆಡಿದ ಆರ್.ಅಶ್ವಿನ್ ಅವಳಿ ಆಘಾತವಿಕ್ಕಿದರು. ಜಾಕ್ ಕ್ರಾಲಿ ಅವರನ್ನು ಶೂನ್ಯಕ್ಕೆ ಮತ್ತು ಬೆನ್ ಡಕೆಟ್ ಅವರನ್ನು ಕೇವಲ 2 ರನ್ಗೆ ಔಟ್ ಮಾಡಿ ಪೆವಿಲಿಯನ್ಗೆ ಅಟ್ಟಿದರು. ಆ ಬಳಿಕ ಕುಲ್ದೀಪ್ ಯಾದವ್ ಕೂಡ ತಮ್ಮ ಸ್ಪಿನ್ ಜಾದು ಮೂಲಕ ವಿಕೆಟ್ ಕಿತ್ತು ಆಂಗ್ಲರನ್ನು ಹಡೆಮುರಿ ಕಟ್ಟಿದರು.
ರೂಟ್ ಏಕಾಂಗಿ ಹೋರಾಟ
ಒಂದೆಡೆ ಸಹ ಆಟಗಾರರ ವಿಕೆಟ್ ಬಡಬಡನೆ ಬೀಳುತ್ತಿದ್ದರೂ ಮತ್ತೊಂದು ಕಡೆ ಕ್ರೀಸ್ನಲ್ಲಿ ಬೇರೂರಿ ನಿಂತ ಜೋ ರೂಟ್ ಏಕಾಂಗಿ ಹೋರಾಟದ ಮೂಲಕ ಕೆಲ ಕಾಲ ಭಾರತೀಯ ಬೌಲರ್ಗಳನ್ನು ಕಾಡಿದರು. ಜತೆಗೆ ತಂಡವನ್ನು ಪಾರು ಮಾಡುವ ಪ್ರಯತ್ನ ಮುಂದುವರಿಸಿದರು. ಆದರೆ, 84 ರನ್ ಗಳಿಸಿದ ವೇಳೆ ಇವರ ವಿಕೆಟ್ ಕೂಡ ಪತನಗೊಂಡಿತು. ಈ ವಿಕೆಟ್ ಬೀಳುತ್ತಿದ್ದಂತೆ ಇಂಗ್ಲೆಂಡ್ ಇನಿಂಗ್ಸ್ ಕೂಡ ಮುಕ್ತಾಯಕಂಡಿತು. ಆರ್.ಅಶ್ವಿನ್ ದ್ವಿತೀಯ ಇನಿಂಗ್ಸ್ನಲ್ಲಿ 5 ವಿಕೆಟ್ ಕಿತ್ತು ತಮ್ಮ 100ನೇ ಟೆಸ್ಟ್ ಪಂದ್ಯವನ್ನು ಸ್ಮರಣೀಯಗೊಳಿಸಿದರು. ಕುಲ್ದೀಪ್ ಮತ್ತು ಜಸ್ಪ್ರೀತ್ ಬುಮ್ರಾ ತಲಾ 2 ವಿಕೆಟ್ ಕಿತ್ತರು. ಅಂತಿಮವಾಗಿ ಇಂಗ್ಲೆಂಡ್ 195 ರನ್ಗೆ ಆಲೌಟ್ ಆಯಿತು.
700 ವಿಕೆಟ್ ಪೂರ್ತಿಗೊಳಿಸಿದ ಆ್ಯಂಡರ್ಸನ್
ಜೇಮ್ಸ್ ಆ್ಯಂಡರ್ಸನ್ ಅವರು ಕುಲ್ದೀಪ್ ಯಾದವ್ ಅವರ ವಿಕೆಟ್ ಕೀಳುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 700 ವಿಕೆಟ್ಗಳನ್ನು ಪೂರ್ತಿಗೊಳಿಸಿದರು. ಈ ಸಾಧನೆಗೈದ ವಿಶ್ವದ ಮೂರನೇ ಹಾಗೂ ಮೊದಲ ವೇಗಿ ಎಂಬ ಹಿರಿಮೆಗೆ ಪಾತ್ರರಾದರು. ರೋಹಿತ್ ಶರ್ಮ ಅವರು ಬೆನ್ನು ಮೂಳೆಯ ನೋವಿನಿಂದಾಗಿ ಮೂರನೇ ದಿನದಾಟದಿಂದ ಹೊರಗುಳಿದರು. ಹೀಗಾಗಿ ಉಪನಾಯಕ ಜಸ್ಪ್ರೀತ್ ಬುಮ್ರಾ ತಂಡವನ್ನು ಮುನ್ನಡೆಸಿದರು.