Site icon Vistara News

CWG- 2022 | ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಬಂಗಾರದ ಪದಕಕ್ಕೆ ಗುರಿಯಿಟ್ಟ ಲಕ್ಷ್ಯ

CWG-2022

ಬರ್ಮಿಂಗ್ಹಮ್‌: ಭಾರತದ ಯುವ ಬ್ಯಾಡ್ಮಿಂಟನ್‌ ತಾರೆ ಲಕ್ಷ್ಯ ಸೇನ್‌ ಬರ್ಮಿಂಗ್ಹಮ್‌ ಕಾಮನ್ವೆಲ್ತ್ ಗೇಮ್ಸ್‌ನ (CWG- 2022) ಪುರುಷರ ಸಿಂಗಲ್ಸ್‌ನಲ್ಲಿ ಬಂಗಾರದ ಪದಕ ಗೆದ್ದುಕೊಂಡಿದ್ದಾರೆ. ಮಲೇ‍ಷ್ಯಾದ ಎನ್‌ ಯಂಗ್‌ ಟೆ ವಿರುದ್ಧ 19-21 21-9 21-16 ಗೇಮ್‌ಗಳಿಂದ ಜಯ ಸಾಧಿಸಿದ ಅವರು ಸ್ವರ್ಣ ಪದಕಕ್ಕೆ ಮುತ್ತಿಟ್ಟರು. ಇವರ ಬಂಗಾರದ ಪದಕದೊಂದಿಗೆ ಭಾರತದ ಒಟ್ಟು ಚಿನ್ನದ ಪದಕಗಳ ಸಂಖ್ಯೆ ೨೦ಕ್ಕೆ ಏರಿಕೆಯಾಯಿತು. ಅಂತೆಯೇ ಒಟ್ಟು ಪದಕಗಳು ೫೭ಕ್ಕೆ ಏರಿತು.

ಜಿದ್ದಾಜಿದ್ದಿನಿಂದ ಕೂಡಿದ್ದ ಮೊದಲ ಗೇಮ್‌ನಲ್ಲಿ ಭಾರತದ ಷಟ್ಲರ್‌ ೧೯-೨೧ ಅಂಕಗಳಿಂದ ಹಿನ್ನಡೆ ಅನುಭವಿಸಿದರು. ಆದರೆ, ಮುಂದಿನ ಗೇಮ್‌ನಲ್ಲಿ ತಿರುಗೇಟು ಕೊಟ್ಟ ಲಕ್ಷ್ಯ ಸೇನ್‌ ೨೧-೯ ಅಂಕಗಳಿಂದ ಗೆಲುವು ದಾಖಲಿಸಿದರು. ಹೀಗಾಗಿ ಪಂದ್ಯ ಮೂರನೇ ಹಾಗೂ ನಿರ್ಣಾಯಕ ಸುತ್ತಿಗೆ ಹೋಯಿತು. ಆ ಗೇಮ್‌ ಅನ್ನು ೨೧-೧೬ ಅಂತರದಿಂದ ವಶಪಡಿಸಿಕೊಂಡ ಲಕ್ಷ್ಯ ಸೇನ್‌ ಬಂಗಾರ ಪದಕ ತಮ್ಮದಾಗಿಸಿಕೊಂಡರು.

ಹಾಲಿ ಆವೃತ್ತಿಯ ಕಾಮನ್ವೆಲ್ತ್‌ ಗೇಮ್ಸ್‌ನ ಬ್ಯಾಡ್ಮಿಂಟ್‌ನ ಮಿಶ್ರ ತಂಡದ ಸದಸ್ಯರಾಗಿದ್ದ ಲಕ್ಷ್ಯ ಸೇನ್‌ ಅವರು ಬೆಳ್ಳಿಯ ಪದಕ ಗೆದ್ದುಕೊಂಡಿದ್ದರು. ಮಿಶ್ರ ತಂಡಗಳ ಫೈನಲ್ ಪಂದ್ಯದಲ್ಲಿ ಭಾರತ ತಂಡ ಮಲೇಷ್ಯಾ ವಿರುದ್ಧವೇ ಸೋಲು ಕಂಡಿತ್ತು. ಇದೀಗ ಅದೇ ತಂಡದ ಆಟಗಾರನನ್ನು ಸೋಲಿಸುವ ಮೂಲಕ ಲಕ್ಷ್ಯ ಸೇನ್‌ ತಿರುಗೇಟು ಕೊಟ್ಟಿದ್ದಾರೆ. ಅಂತೆಯೇ ಕಾಮನ್ವೆಲ್ತ್‌ ಗೇಮ್ಸ್‌ನ ಮೊದಲ ಪ್ರವೇಶದಲ್ಲಿಯೇ ಬಂಗಾರದ ಪದಕ ಗೆಲ್ಲುವ ಮೂಲಕ ಲಕ್ಷ್ಯ ಅವರು ಭಾರತ ಪರ ಹೊಸ ದಾಖಲೆ ಬರೆದರು.

ಇದು ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ ಲಭಿಸುತ್ತಿರುವ ಐದನೇ ಪದಕವಾಗಿದೆ. ಪಿ.ವಿ ಸಿಂಧೂ ಮಹಿಳೆಯರ ಸಿಂಗಲ್ಸ್‌ನಲ್ಲಿ ಬಂಗಾರದ ಪದಕ ಗೆದ್ದಿದ್ದರೆ, ಪುರುಷರ ಸಿಂಗಲ್ಸ್‌ನಲ್ಲಿ ಕಿಡಂಬಿ ಶ್ರೀಕಾಂತ್‌ ಕಂಚು ತಮ್ಮದಾಗಿಸಿಕೊಂಡಿದ್ದರು. ಮಹಿಳೆಯರ ಡಬಲ್ಸ್‌ನಲ್ಲಿ ತ್ರಿಸಾ ಜೊಲ್ಲಿ ಹಾಗೂ ಗಾಯತ್ರಿ ಗೋಪಿಚಂದ್‌ ಕಂಚಿನ ಪದಕ ಗೆದ್ದಿದ್ದರು. ಮಿಶ್ರ ತಂಡ ಬೆಳ್ಳಿಯ ಪದಕ ಗೆದ್ದಿತ್ತು. ಚಿರಾಗ್‌ ಶೆಟ್ಟಿ ಹಾಗೂ ಸಾತ್ವಿಕ್‌ಸಾಯಿರಾಜ್‌ ರಾಂಕಿ ರೆಡ್ಡಿ ಜೋಡಿ ಫೈನಲ್‌ನಲ್ಲಿ ಆಡಬೇಕಿದೆ.

ಭರ್ಜರಿ ಪೈಪೋಟಿ

ಚಿನ್ನದ ಪದಕದ ಪಂದ್ಯ ರೋಚಕವಾಗಿಯೇ ಆರಂಭಗೊಂಡಿತು. ಇಬ್ಬರೂ ಸಮಬಲದ ಅಂಕಗಳ ಹೋರಾಟ ಮುಂದುವರಿಸಿದರು. ಆದರೆ, ಕ್ರಾಸ್‌ ಕೋರ್ಟ್‌ ಶಾಟ್‌ ಮೂಲಕ ಭಾರತೀಯ ಬ್ಯಾಡ್ಮಿಂಟನ್‌ ಆಟಗಾರನಿಗೆ ಸುಸ್ತು ಹೊಡೆಸಿದ ಮಲೇಷ್ಯಾದ ಎನ್‌ ಯಂಗ್‌ ಟೆ ಮೊದಲ ಗೇಮ್‌ ತಮ್ಮದಾಗಿಸಿಕೊಂಡರು. ಆದರೆ, ಎರಡನೇ ಗೇಮ್‌ನಲ್ಲಿ ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದ ಭಾರತದ ಲಕ್ಷ್ಯ ಸೇನ್‌ ೨೧-೯ ಅಂಕಗಳ ಭರ್ಜರಿ ಗೆಲುವು ದಾಖಲಿಸಿದರು. ಅದೇ ವೇಗದಲ್ಲಿ ಮೂರನೇ ಗೇಮ್‌ನಲ್ಲೂ ಮುನ್ನಡೆ ಸಾಧಿಸಿಕೊಂಡು ಹೋದ ಲಕ್ಷ್ಯ ಸೇನ್‌ ಗೆಲುವಿನೊಂದಿಗೆ ಬಂಗಾರದ ಪದಕಕ್ಕೆ ಮುತ್ತಿಟ್ಟರು.

ಮಲೇಷ್ಯಾದ ಆಟಗಾರ ಎನ್‌ ಯಂಗ್‌ ಟೆ ಹಾಗೂ ಲಕ್ಷ್ಯ ಸೇನ್‌ ಫೈನಲ್‌ ಪಂದ್ಯಕ್ಕೆ ಇಳಿಯುವ ಮೊದಲು ಎರಡು ಬಾರಿ ಪರಸ್ಪರ ಮುಖಾಮುಖಿಯಾಗಿದ್ದರು. ಎರಡರಲ್ಲೂ ಗೆದ್ದಿದ್ದ ಲಕ್ಷ್ಯ ಅವರ ಆತ್ಮವಿಶ್ವಾಸ ಹೆಚ್ಚಿತುತ್ತು. ಅದನ್ನವರು ಸಾಬೀತುಮಾಡಿದ್ದು, ಮುಖಾಮುಖಿ ಮುನ್ನಡೆಯನ್ನು ೩-೦ಗೆ ವಿಸ್ತರಿಸಿಕೊಂಡರು.

ಭರ್ಜರಿ ಫಾರ್ಮ್‌ನಲ್ಲಿದ್ದ ಎನ್‌ ಯಂಗ್‌ ಟೆ

ಮಲೇಷ್ಯಾದ ಬ್ಯಾಡ್ಮಿಂಟನ್‌ ಆಟಗಾರನೂ ಹಾಲಿ ಕಾಮನ್ವೆಲ್ತ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಮಿಶ್ರ ತಂಡ ವಿಭಾಗದ ಸಿಂಗಲ್ಸ್‌ನಲ್ಲಿ ಮಾಜಿ ವಿಶ್ವ ನಂಬರ್‌ ಒನ್‌ ಆಟಗಾರ ಕಿಡಂಬಿ ಶ್ರೀಕಾಂತ್‌ ಅವರನ್ನು ಮಣಿಸಿದ್ದ ಅವರು ಭಾನುವಾರ ನಡೆದ ಸಿಂಗಲ್ಸ್‌ನ ಸೆಮಿಫೈನಲ್‌ ಪಂದ್ಯದಲ್ಲೂ ಲಕ್ಷ್ಯ ಅವರನ್ನು ಮಣಿಸಿದ್ದರು. ಅದೇ ರೀತಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ವಿಶ್ವ ಚಾಂಪಿಯನ್‌ ಸಿಂಗಾಪುರದ ಲೊ ಕೆನ್‌ ಯೆವ್‌ ವಿರುದ್ಧ ಜಯ ಸಾಧಿಸಿದ್ದರು. ಆದರೆ, ಚಾಂಪಿಯನ್‌ ಆಗುವ ಅವಕಾಶವನ್ನು ಲಕ್ಷ್ಯ ಸೇನ್‌ ನಿರಾಕರಿಸಿದರು.

ಇದನ್ನೂ ಓದಿ | CWG- 2022 | ಪಿ. ವಿ ಸಿಂಧೂ ಸುಂದರ ಆಟಕ್ಕೆ ಒಲಿದ ಬಂಗಾರ, ಬರ್ಮಿಂಗ್ಹಮ್‌ನಲ್ಲಿ ಭಾರತಕ್ಕೆ ಮತ್ತೊಂದು ಸ್ವರ್ಣ

Exit mobile version