Site icon Vistara News

CWG- 2022 | ಪಾಕಿಸ್ತಾನವನ್ನು ಕ್ಲೀನ್‌ ಸ್ವೀಪ್ ಮಾಡಿದ ಭಾರತದ ಷಟ್ಲರ್‌ಗಳು

CWG-2022

ಬರ್ಮಿಂಗ್‌ಹ್ಯಾಮ್‌: ನೆರೆಯ ರಾಷ್ಟ್ರ ಪಾಕಿಸ್ತಾನದ ವಿರುದ್ಧ ೫-೦ ಅಂತರದ ಜಯ ಸಾಧಿಸಿದ ಭಾರತ ತಂಡ ಬರ್ಮಿಂಗ್‌ಹ್ಯಾಮ್ ಕಾಮನ್ವೆಲ್ತ್‌ ಗೇಮ್ಸ್‌ನ (CWG- 2022) ಮಿಶ್ರ ತಂಡ ಸ್ಪರ್ಧೆಯ ಮೊದಲ ಸುತ್ತಿನಲ್ಲಿ ಭರ್ಜರಿ ಮುನ್ನುಡಿ ಬರೆದಿದೆ. ಕಳೆದ ಬಾರಿಯ ಚಾಂಪಿಯನ್‌ ಭಾರತ ತಂಡದ ಸ್ಪರ್ಧಿಗಳಿಗೆ ಕೊಂಚ ಪ್ರತಿರೋಧ ಒಡ್ಡಲೂ ಪಾಕಿಸ್ತಾನದ ಷಟ್ಲರ್‌ಗಳಿಗೆ ಸಾಧ್ಯವಾಗಲಿಲ್ಲ.

ಮೊದಲ ಸ್ಪರ್ಧೆ ಮಿಶ್ರ ತಂಡಗಳ ನಡುವೆ ನಡೆಯಿತು. ಭಾರತದ ಬಿ. ಸುಮೀತ್‌ ರೆಡ್ಡಿ ಹಾಗೂ ಅಶ್ವಿನಿ ಪೊನ್ನಪ್ಪ ಜೋಡಿ ಪಾಕ್‌ನ ಮುಹಮ್ಮದ್‌ ಸೈಯದ್ ಭಟ್ಟಿ ಹಾಗೂ ಘಜಲಾ ಸಿದ್ದಿಕ್ಕಿ ವಿರುದ್ಧ ಮೊದಲ ಗೇಮ್‌ನಲ್ಲಿ ೨೧-೯ ಅಂತರದ ಜಯ ದಾಖಲಿಸಿದರೆ, ಎರಡನೇ ಗೇಮ್‌ನಲ್ಲಿ ೨೧-೧೨ ಅಂಕಗಳಿಂದ ಗೆಲುವು ತಮ್ಮದಾಗಿಸಿಕೊಂಡರು.

ಎರಡನೇ ಪಂದ್ಯ ಪುರುಷರ ಸಿಂಗಲ್ಸ್‌. ಈ ಪಂದ್ಯದಲ್ಲಿ ಕೋರ್ಟ್‌ಗಿಳಿದ ಮಾಜಿ ವಿಶ್ವ ನಂಬರ್‌ ಒನ್‌ ಕಿಡಂಬಿ ಶ್ರೀಕಾಂತ್‌ ೨೧-೭, ೨೧-೧೨ ಅಂತರದಿಂದ ಪಾಕಿಸ್ತಾನದ ಎದುರಾಳಿ ವಿರುದ್ಧ ವಿಜೃಂಭಿಸಿದರು.

ಮೂರನೇ ಪಂದ್ಯ ಮಹಿಳೆಯರ ಸಿಂಗಲ್ಸ್‌. ವಿಶ್ವದ ನಂಬರ್‌ ಏಳನೇ ಆಟಗಾರ್ತಿ ಪಿ. ವಿ. ಸಿಂಧೂ ಎದುರು ಪಾಕಿಸ್ತಾನದ ಮಹೂರ್‌ ಶಹಜಾದ್‌ ಸಂಪೂರ್ಣವಾಗಿ ಕಳೆಗುಂದಿದರು. ೨೧-೭, ೨೧-೬ ಗೇಮ್‌ಗಳಿಂದ ಜಯ ಸಾಧಿಸಿದ ಸಿಂಧೂ ಪಾಕ್‌ ಆಟಗಾರ್ತಿ ವಿರುದ್ಧ ಸಂಪೂರ್ಣ ಪಾರಮ್ಯ ಮೆರೆದರು.

ನಾಲ್ಕನೇ ಪಂದ್ಯ ಪುರುಷರ ಡಬಲ್ಸ್‌. ಭಾರತದ ಸಾತ್ವಿಕ್‌ಸಾಯಿರಾಜ್‌ ರಾಂಕಿರೆಡ್ಡಿ ಹಾಗೂ ಚಿರಾಗ್‌ ಶೆಟ್ಟಿ ಜೋಡಿ ಪಾಕಿಸ್ತಾನದ ಮುರಾದ್ ಅಲಿ ಹಾಗೂ ಮುಹಮ್ಮದ್ ಇರ್ಪಾನ್‌ ವಿರುದ್ಧ ೨೧-೧೨, ೨೧-೯ ಗೇಮ್‌ಗಳಿಂದ ಜಯ ಸಾಧಿಸಿದರು.

ಐದನೇ ಪಂದ್ಯ ಮಹಿಳೆಯರ ಡಬಲ್ಸ್‌. ತ್ರಿಸಾ ಜೊಲ್ಲಿ ಹಾಗೂ ಗಾಯತ್ರಿ ಗೋಪಿ ಚಂದ್‌ ಜೋಡಿ ೨೧-೪, ೨೧-೫ ಅಂಕಗಳಿಂದ ಪಾಕಿಸ್ತಾನದ ಮಹಿಳೆಯರನ್ನು ಮಣಿಸಿದರು.

Exit mobile version