ಲಖನೌ: ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿಯ (INDvsNZ T20) ಎರಡನೇ ಪಂದ್ಯದಲ್ಲಿ ಭಾರತ ತಂಡದ ಬೌಲರ್ಗಳು ಪಾರಮ್ಯ ಸಾಧಿಸಿ ಎದುರಾಳಿ ತಂಡವನ್ನು ಕಡಿಮೆ ಮೊತ್ತಕ್ಕೆ ಸೀಮಿತಗೊಳಿಸಿದ್ದಾರೆ. ಹೀಗಾಗಿ ಭಾರತ ತಂಡಕ್ಕೆ 100 ರನ್ಗಳ ಸಾಧಾರಣ ಮೊತ್ತದ ಗೆಲುವಿಗೆ ಗುರಿ ಎದುರಾಗಿದೆ.
ಇಲ್ಲಿನ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಜನವರಿ 29ರಂದು ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲ ಬ್ಯಾಟ್ ಮಾಡಿದ ನ್ಯೂಜಿಲ್ಯಾಂಡ್ ಬಳಗ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 99 ರನ್ ಗಳಿಸಲು ಶಕ್ತಗೊಂಡಿತು.
ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲ್ಯಾಂಡ್ ಬಳಗ ಮೊದಲ ವಿಕೆಟ್ಗೆ 21 ರನ್ ಬಾರಿಸಿತು. ಆರಂಭಿಕರಾದ ಫಿನ್ ಅಲೆನ್ ಹಾಗೂ ಡೆವೋನ್ ಕಾನ್ವೆ ತಲಾ 11 ರನ್ ಬಾರಿಸಿದರು. ಬಳಿಕ ಮಾರ್ಕ್ ಚಾಪ್ಮನ್ 14 ರನ್ ಬಾರಿಸಿ ವಿಶ್ವಾಸ ಮೂಡಿಸಿದರೂ 14 ರನ್ ಬಾರಿಸಿ ರನ್ಔಟ್ ಆದರು. ಭಾರತದ ಸ್ಪಿನ್ ಬೌಲರ್ಗಳಾದ ಯಜ್ವೇಂದ್ರ ಚಹಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್ ಹಾಗೂ ದೀಪಕ್ ಹೂಡ ನಿಯಂತ್ರಿತ ಬೌಲಿಂಗ್ ದಾಳಿ ಸಂಘಟಿಸಿ ಎದುರಾಳಿ ತಂಡದ ಬ್ಯಾಟರ್ಗಳನ್ನು ಕಟ್ಟಿ ಹಾಕಿದರು. ಕೊನೆಯಲ್ಲಿ ಅರ್ಶ್ದೀಪ್ ಸಿಂಗ್ 2 ವಿಕೆಟ್ ಕಬಳಿಸಿದರು.