ಬರ್ಮಿಂಗ್ಹಮ್ : ಭಾರತದ ಯುವ ಬಾಕ್ಸರ್ ಮೊಹಮ್ಮದ್ ಹಸಮುದ್ದೀನ್ ಕಾಮನ್ವೆಲ್ತ್ ಗೇಮ್ಸ್ (CWG-2022) ಕ್ರೀಡಾಕೂಟದಲ್ಲಿ ಕಂಚಿನ ಪದಕಕ್ಕೆ ಭಾಜನರಾಗಿದ್ದಾರೆ. ೫೪ರಿಂದ ೫೭ ಕೆ.ಜಿ ವಿಭಾಗದಲ್ಲಿನ ಸ್ಪರ್ಧೆಯ ಸೆಮಿಫೈನಲ್ ಪಂದ್ಯದಲ್ಲಿ ಸೋಲು ಕಂಡ ಅವರು ಭಾರತಕ್ಕೆ ಕಂಚು ತಂದುಕೊಟ್ಟರು.
ಕಾಮನ್ವೆಲ್ತ್ ಗೇಮ್ಸ್‌ನ ಬಾಕ್ಸಿಂಗ್‌ನಲ್ಲಿ ಸೆಮಿಫೈನಲ್‌ನಲ್ಲಿ ಸೋತ ಇಬ್ಬರಿಗೂ ಕಂಚಿನ ಪದಕಗಳನ್ನು ನೀಡಲಾಗುತ್ತದೆ. ಅಂತೆಯೇ ಹಸಮುದ್ದೀನ್ ಅವರಿಗೂ ಕಂಚಿನ ಪದಕ ದೊರೆತಿದೆ. ಇದು ಭಾರತಕ್ಕೆ ಬಾಕ್ಸಿಂಗ್‌ನಲ್ಲಿ ಲಭಿಸಿದ ಇದುವರೆಗಿನ ಎರಡನೇ ಪದಕವಾಗಿದೆ. ಇದಕ್ಕಿಂತ ಹಿಂದೆ ಮಹಿಳಾ ಬಾಕ್ಸರ್ ಜಾಸ್ಮಿನ್ ೫೭ರಿಂದ ೬೦ ಕೆ.ಜಿ ವಿಭಾಗದಲ್ಲಿ ಕಂಚು ಗೆದ್ದಿದ್ದರು.
ಹಸಮುದ್ದೀನ್ ಅವರ ಕಂಚಿನ ಪದಕದ ಸೇರ್ಪಡೆಯೊಂದಿಗೆ ಭಾರತದ ಒಟ್ಟಾರೆ ಪದಕಗಳ ಸಂಖ್ಯೆ ೩೬ಕ್ಕೆ ಏರಿಕೆಯಾಗಿದೆ. ಇದರಲ್ಲಿ ೧೨ ಚಿನ್ನದ ಪದಕಗಳಾದರೆ, ೧೧ ಬೆಳ್ಳಿ ಹಾಗೂ ೧೩ ಕಂಚಿನ ಪದಕಗಳು ಸೇರಿಕೊಂಡಿವೆ. ಭಾರತ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದು, ೫೭ ಚಿನ್ನ ಗೆದ್ದಿರುವ ಆಸ್ಟ್ರೇಲಿಯಾ ಮೊದಲ ಸ್ಥಾನ, ೫೦ ಚಿನ್ನ ಗೆದ್ದಿರುವ ಇಂಗ್ಲೆಂಡ್ ಎರಡನೇ ಸ್ಥಾನ, ೨೦ ಚಿನ್ನ ಗೆದ್ದಿರುವ ಕೆನಡಾ ಮೂರನೇ ಸ್ಥಾನ ಹಾಗೂ ೧೭ ಚಿನ್ನ ಗೆದ್ದಿರುವ ನ್ಯೂಜಿಲೆಂಡ್ ನಾಲ್ಕನೇ ಸ್ಥಾನದಲ್ಲಿದೆ.
ಇದನ್ನೂ ಓದಿ | CWG-2022 | ಕಂಚಿನ ಪದಕ ಗೆದ್ದ ಭಾರತದ ಮಹಿಳಾ ಕುಸ್ತಿ ಪಟು ಪೂಜಾ ಸಿಹಾಗ್