ಬರ್ಮಿಂಗ್ಹಮ್ : ಭಾರತದ ಕುಸ್ತಿ ಪಟು ದೀಪಕ್ ನೆಹ್ರಾ ಕಾಮನ್ವೆಲ್ತ್ ಗೇಮ್ಸ್‌ನ (CWG-2022) ಪುರುಷರ ೯೭ ಕೆ.ಜಿ ಕುಸ್ತಿ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಪಾಕಿಸ್ತಾನದ ತೈಯಬ್ ರಾಜಾ ಅವರನ್ನು ಮಣಿಸಿದ ಭಾರತದ ಬಲಿಷ್ಠ ಕುಸ್ತಿ ಪಟು ಕಂಚಿನ ಹಾರಕ್ಕೆ ಕೊರಳೊಡ್ಡಿದರು. ಇದರೊಂದಿಗೆ ಕಾಮನ್ವೆಲ್ತ್ ಗೇಮ್ಸ್‌ನ ೯ನೇ ದಿನ ಕಣದಲ್ಲಿದ್ದ ಅರಕ್ಕೆ ಆರು ಕುಸ್ತಿಪಟುಗಳೂ ಪದಕಗಳನ್ನು ಗೆದ್ದಂತಾಗಿದೆ.
ದೀಪಕ್ ಅವರ ಪದಕದೊಂದಿಗೆ ಭಾರತದ ಒಟ್ಟಾರೆ ಪದಕಗಳ ಸಂಖ್ಯೆ ೩೭ಕ್ಕೆ ಏರಿಕೆಯಾಗಿದೆ. ಅದರಲ್ಲಿ ೧೨ ಬಂಗಾರದ ಪದಕವಾದರೆ, ೧೪ ಕಂಚು ಹಾಗೂ ೧೧ ಬೆಳ್ಳಿಯ ಪದಕಗಳು ಸೇರಿಕೊಂಡಿವೆ.
ಆರಂಭದಿಂದಲೇ ದೀಪಕ್ ಅವರು ಕೆಚ್ಚಿನ ಪ್ರದರ್ಶನ ತೋರಿದರು. ಆದರೆ, ಪಾಕಿಸ್ತಾನದ ಸ್ಪರ್ಧಿ ತಿರುಗೇಟು ನೀಡಲು ಆರಂಭಿಸಿದರು. ಹೀಗಾಗಿ ಮೊದಲ ಸುತ್ತಿನ ಸ್ಪರ್ಧೆ ಮುಗಿದಾಗ ದೀಪಕ್ ೩-೨ ಮುನ್ನಡೆ ಪಡೆದುಕೊಂಡಿದ್ದರು. ಅಂತೆಯೇ ಕೊನೆಯ ಮೂರು ನಿಮಿಷಗಳಲ್ಲಿ ಆಕ್ರಮಣಕಾರಿ ಆಟ ಆಡಿದ ನೆಹ್ರಾ, ಎದುರಾಳಿ ರಾಜಾ ಅವರನ್ನು ನೆಲಕ್ಕುರುಳುವಂತೆ ಮಾಡಿ ಸತತ ಅಂಕಗಳನ್ನು ಪಡೆದು ೧೦-೨ ಅಂಕಗಳೊಂದಿಗೆ ಕಂಚಿನ ಪದಕ ಬಾಚಿಕೊಂಡರು.
ಇದನ್ನೂ ಓದಿ | CWG-2022 | ಭಾರತಕ್ಕೆ 10ನೇ ಚಿನ್ನದ ಪದಕ ಗೆದ್ದುಕೊಟ್ಟ ಕುಸ್ತಿಪಟು ರವಿ ದಹಿಯಾ