ಮುಂಬಯಿ: ಬೆಂಗಳೂರು ಎಫ್‌ಸಿ ವಿರುದ್ಧ ಶುಕ್ರವಾರ(ಮಾರ್ಚ್ 3) ನಡೆದ ಇಂಡಿಯನ್ ಸೂಪರ್ ಲೀಗ್(Indian Super League) ಫುಟ್ಬಾಲ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ, ಸುನೀಲ್ ಚೆಟ್ರಿ(sunil chhetri) ಬಾರಿಸಿದ ವಿವಾದಾತ್ಮಕ ಗೋಲಿಗೆ ತಗಾದೆ ತೆಗೆದು ಮೈದಾನ ತೊರೆದ ಕೇರಳ ಬ್ಲಾಸ್ಟರ್ಸ್(kerala blasters) ತಂಡಕ್ಕೆ ನಿಷೇಧ ಭೀತಿ ಎದುರಾಗಿದೆ.
ನಿಯಮದ ಪ್ರಕಾರ ರೆಫ್ರಿ ತೀರ್ಪಿನ ಬಗ್ಗೆ ಆಕ್ಷೇಪವಿದ್ದರೂ ಯಾವುದೇ ಕಾರಣಕ್ಕೂ ಆಟ ಸ್ಥಗಿತಗೊಳಿಸಿ ಮೈದಾನ ತೊರೆಯುವಂತಿಲ್ಲ. ಆದರೆ ರೆಫ್ರಿ ಅವರ ತೀರ್ಪನ್ನು ಭಹಿಷ್ಕರಿಸಿ ಅಶಿಸ್ತು ತೋರುವ ಮೂಲಕ ಮೈದಾನ ತೊರೆದ ತಪ್ಪಿಗೆ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್(ಎಐಎಫ್‌ಎಫ್) ಕೇರಳ ಬ್ಲಾಸ್ಟರ್ ತಂಡಕ್ಕೆ ಕನಿಷ್ಠ 2 ವರ್ಷಗಳ ನಿಷೇಧ ಮತ್ತು ದಂಡ ವಿಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ವಿವಾದಕ್ಕೆ ಕಾರಣವೇನು?
ಹೆಚ್ಚುವರಿ ಸಮಯದಲ್ಲಿ ಬೆಂಗಳೂರು ತಂಡದ ಸುನೀಲ್ ಚೆಟ್ರಿ(sunil chhetri) ಫ್ರಿ ಕಿಕ್ ಮೂಲಕ ಗೋಲು ಗಳಿಸಿದರು. ಆದರೆ ರೆಫ್ರಿ ವಿಸಿಲ್ ಹೊಡೆಯುವ ಮೊದಲೇ ಸುನೀಲ್ ಚೆಟ್ರಿ ಫ್ರಿ ಕಿಕ್ ತೆಗೆದುಕೊಂಡು ಗೋಲು ಗಳಿಸಿದರು ಎಂದು ಬ್ಲಾಸ್ಟರ್ಸ್ ತಂಡದ ಆಟಗಾರರು ವಿರೋಧ ವ್ಯಕ್ತಪಡಿಸಿದರು. ಇದೇ ವೇಳೆ ಬ್ಲಾಸ್ಟರ್ಸ್ ತಂಡದ ನಾಯಕ ಏಡ್ರಿಯನ್ ಲುನಾ ರೆಫ್ರಿ ಕ್ರಿಸ್ಟಲ್ ಜಾನ್ ಜತೆ ಮೈದಾನದಲ್ಲೇ ಜಗಳಕ್ಕೇ ಇಳಿದರು. ಆದರೆ ರೆಫ್ರಿ ಬೆಂಗಳೂರು ತಂಡಕ್ಕೆ ಗೋಲು ನೀಡಿದರು.
ಇದನ್ನೂ ಓದಿ Indian Super League: ವಿವಾದಾತ್ಮಕ ಗೋಲು; ಮೈದಾನ ತೊರೆದ ಕೇರಳ ತಂಡ
ಇದರಿಂದ ಕೋಪಗೊಂಡ ಬ್ಲಾಸ್ಟರ್ಸ್ ತರಬೇತುದಾರ ಇವಾನ್ ವುಕೊಮಾನೋವಿಕ್ ತನ್ನ ತಂಡವನ್ನು ಮೈದಾನದಿಂದ ಹೊರಗೆ ಕರೆದರು. ಸುಮಾರು 20 ನಿಮಿಷಗಳ ಬಳಿಕವೂ ಕೇರಳ ತಂಡ ಮೈದಾನಕ್ಕೆ ಬಾರದ ಕಾರಣ ಬೆಂಗಳೂರು ತಂಡವು ಪಂದ್ಯ ಗೆದ್ದಿತು ಎಂದು ರೆಫ್ರಿ ಘೋಷಿಸಿದರು.