ರಾಯ್‌ಪುರ : ಸಚಿನ್ ತೆಂಡೂಲ್ಕರ್ ನೇತೃತ್ವದ ಭಾರತ ತಂಡ ವಿಶ್ವ ರಸ್ತೆ ಸುರಕ್ಷತಾ ಸರಣಿ (Road Safety World Series) ಕ್ರಿಕೆಟ್ ಟೂರ್ನಿಯ ಎರಡನೇ ಆವೃತ್ತಿಯಲ್ಲೂ ಚಾಂಪಿಯನ್‌ಪಟ್ಟ ಅಲಂಕರಿಸಿದೆ. ಶನಿವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಲೆಜೆಂಡ್ಸ್ ತಂಡವನ್ನು ೩೩ ರನ್‌ಗಳಿಂದ ಮಣಿಸಿದ ಇಂಡಿಯಾ ಲೆಜೆಂಡ್ಸ್ ತಂಡ ಟ್ರೋಫಿ ತನ್ನದಾಗಿಸಿಕೊಂಡಿತು. ಅದರಲ್ಲೂ ಟೂರ್ನಿಯ ಎಲ್ಲ ಪಂದ್ಯಗಳನ್ನು ಗೆಲ್ಲುವ ಮೂಲಕ ಅಜೇಯವಾಗಿ ಪ್ರಶಸ್ತಿ ಗೆದ್ದುಕೊಂಡಿತು. ಫೈನಲ್ ಹಣಾಹಣಿಯಲ್ಲಿ ಭಾರತದ ಆರಂಭಿಕ ಬ್ಯಾಟರ್ ನಮನ್ ಓಜಾ ಅಜೇಯ ಶತಕ (೧೦೮) ಬಾರಿಸುವ ಮೂಲಕ ಗೆಲುವಿನ ರೂವಾರಿ ಎನಿಸಿಕೊಂಡರು. ಅಂತೆಯೇ ವಿನಯ್ ಕುಮಾರ್ ಅವರು ಬ್ಯಾಟಿಂಗ್‌ನಲ್ಲಿ ೩೬ ರನ್ ಬಾರಿಸುವ ಜತೆಗೆ ಬೌಲಿಂಗ್‌ನಲ್ಲಿ ೩ ವಿಕೆಟ್ ಕಬಳಿಸಿದರು.
ರಾಯ್ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಇಂಟರ್‌ನ್ಯಾಷನಲ್ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದ್ಲಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಡಿಯಾ ಲೆಜೆಂಡ್ಸ್ ತಂಡ ನಿಗದಿತ ೨೦ ಓವರ್‌ಗಳಲ್ಲಿ ೫ ವಿಕೆಟ್‌ಗೆ ೧೯೫ ರನ್ ಬಾರಿಸಿತು. ಇದಕ್ಕೆ ಪ್ರತಿಯಾಗಿ ಬ್ಯಾಟ್ ಮಾಡಿದ ಶ್ರೀಲಂಕಾ ಲೆಜೆಂಡ್ಸ್ ಬಳಗ ೧೮.೫ ಓವರ್‌ಗಳಲ್ಲಿ ೧೬೨ ರನ್‌ಗಳಿಗೆ ಸರ್ವಪತನಗೊಂಡು ಸೋಲೊಪ್ಪಿಕೊಂಡಿತು.
ಅಬ್ಬರದ ಪ್ರದರ್ಶನ
ಸಚಿನ್ ತೆಂಡೂಲ್ಕರ್ ನೇತೃತ್ವದ ಇಂಡಿಯಾ ಲೆಜೆಂಡ್ಸ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕ ಬ್ಯಾಟರ್ ನಮನ್ ಶತಕ ಬಾರಿಸಿದ ಹೊರತಾಗಿಯೂ ಇನ್ನೊಬ್ಬ ಆರಂಭಿಕ ಆಟಗಾರ ಹಾಗೂ ನಾಯಕ ಸಚಿನ್ ತೆಂಡೂಲ್ಕರ್ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಸುರೇಶ್ ರೈನಾ ಕೂಡ ೪ ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ಆದರೆ, ವಿನಯ್ ಕುಮಾರ್ (೩೬), ಯುವರಾಜ್ ಸಿಂಗ್ (೧೯) ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ನೆರವಾದರು. ಹೀಗಾಗಿ ಇಂಡಿಯಾ ಲೆಜೆಂಡ್ಸ್ ಬಳಗ ೧೯೫ ರನ್‌ಗಳ ಬೃಹತ್ ಮೊತ್ತ ಪೇರಿಸಿತು.
ಗುರಿ ಬೆನ್ನಟ್ಟಿದ ಶ್ರೀಲಂಕಾ ಲೆಜೆಂಡ್ಸ್ ತಂಡಕ್ಕೆ ಭಾರತದ ಬೌಲರ್‌ಗಳು ನಿರಂತರವಾಗಿ ಕಾಡಿದರು. ವಿನಯ್ ಕುಮಾರ್ (೩ ವಿಕೆಟ್), ಅಭಿಮನ್ಯು ಮಿಥುನ್ (೨ ವಿಕೆಟ್) ಎದುರಾಳಿ ತಂಡದ ಆಟಗಾರರು ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ಉಳಿದುಕೊಳ್ಳಂತೆ ನೋಡಿಕೊಂಡರು. ಲಂಕಾ ಪರ ಇಶಾನ್ ಜಯರತ್ನೆ ೫೧ ರನ್ ಬಾರಿಸುವ ಮೂಲಕ ಸ್ವಲ್ಪ ಮಟ್ಟಿಗೆ ಪ್ರತಿರೋಧ ತೋರಿದರು.
ಸ್ಕೋರ್ ವಿವರ
ಇಂಡಿಯಾ ಲೆಜೆಂಡ್ಸ್ : ೨೦ ಓವರ್‌ಗಳಲ್ಲಿ ೫ ವಿಕೆಟ್‌ಗೆ ೧೯೫ (ನಮನ್ ಓಜಾ ೧೦೮*, ವಿನಯ್ ಕುಮಾರ್ ೩೬; ನುವಾನ್ ಕುಲಶೇಖರ ೨೯ಕ್ಕೆ೩).
ಶ್ರೀಲಂಕಾ ಲೆಜೆಂಡ್ಸ್ : ೧೮.೫ ಓವರ್‌ಗಳಲ್ಲಿ ೧೬೨ (ಇಶಾನ್ ಜಯರತ್ನೆ ೫೧, ಮಹೇಲಾ ಉದವಟ್ಟೆ ೨೬; ವಿನಯ್ ಕುಮಾರ್ ೩೮ಕ್ಕೆ೩, ಅಭಿಮನ್ಯು ಮಿಥುನ್ ೨೭ಕ್ಕೆ೨).
ಇದನ್ನೂ ಓದಿ | Sachin Tendulkar | ಗ್ರಿಪ್‌ಗಾಗಿ ಸಚಿನ್ ಕ್ರಿಕೆಟ್ ಬ್ಯಾಟ್ ಕ್ಲೀನ್ ಮಾಡಿದ್ದು ಟ್ರೋಲ್ ಆಗಿದ್ದೇಕೆ?