ಗುವಾಹಟಿ : ಶ್ರೀಲಂಕಾ ವಿರುದ್ಧದ ಏಕ ದಿನ ಸರಣಿಯ (INDvsSL ODI) ಮೊದಲ ಪಂದ್ಯದಲ್ಲಿ ಆತಿಥೇಯ ಭಾರತ ತಂಡ 67 ರನ್ಗಳ ಭರ್ಜರಿ ದಾಖಲಿಸಿದೆ. ಇದರೊಂದಿಗೆ ಸರಣಿಯಲ್ಲಿ ಭಾರತ ತಂಡಕ್ಕೆ 1-0 ಮುನ್ನಡೆ ಸಿಕ್ಕಿತು. ಶತಕ ವೀರ ವಿರಾಟ್ ಕೊಹ್ಲಿ (113) ಹಾಗೂ ಬೌಲರ್ಗಳಾದ ಉಮ್ರಾನ್ ಮಲಿಕ್ (57ಕ್ಕೆ3), ಮೊಹಮ್ಮದ್ ಸಿರಾಜ್ (30ಕ್ಕೆ2) ವಿಜಯದ ರೂವಾರಿಗಳೆನಿಸಿಕೊಂಡರು. ಲಂಕಾ ತಂಡದ ನಾಯಕ ದಸುನ್ ಶನಕ ಸ್ಫೋಟಕ ಬ್ಯಾಟಿಂಗ್ನೊಂದಿಗೆ ಶತಕ ಬಾರಿಸಿದರೂ ತಂಡಕ್ಕೆ ಗೆಲುವು ತಂದುಕೊಡಲು ಅವರಿಗೆ ಸಾಧ್ಯವಾಗಲಿಲ್ಲ.
ಇಲ್ಲಿನ ಬಾರಸ್ಪಾರಾ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಆಹ್ವಾನ ಪಡೆದ ಭಾರತ ತಂಡ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 373 ರನ್ಗಳ ಬೃಹತ್ ಮೊತ್ತ ಪೇರಿಸಿತು. ಇದು ಗುವಾಹಟಿ ಸ್ಟೇಡಿಯಮ್ನಲ್ಲಿ ಭಾರತ ತಂಡ ಪೇರಿಸಿದ ಗರಿಷ್ಠ ರನ್ ಮೊತ್ತ. ಗುರಿ ಬೆನ್ನಟ್ಟಿದ ಪ್ರವಾಸಿ ಶ್ರೀಲಂಕಾ ಬಳಗ ತನ್ನ ಪಾಲಿನ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 306 ರನ್ ಬಾರಿಸಿ ಸೋಲೊಪ್ಪಿಕೊಂಡಿತು.
ದೊಡ್ಡ ಗುರಿ ಬೆನ್ನಟ್ಟಲು ಅರಂಭಿಸಿದ ಲಂಕಾ ತಂಡದ ಬ್ಯಾಟರ್ಗಳಿಗೆ ಭಾರತದ ಬೌಲರ್ಗಳು ಸತತವಾಗಿ ಕಾಡಿದರು. ಹೀಗಾಗಿ ಶ್ರೀಲಂಕಾ ತಂಡದ ಆಟಗಾರ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ಆರಂಭಿಕ ಬ್ಯಾಟರ್ ಪಾಥುಮ್ ನಿಸ್ಸಾಂಕ (72) ಅರ್ಧ ಶತಕ ಬಾರಿಸಿ ಉತ್ತಮ ಆರಂಭ ತಂದುಕೊಟ್ಟರು. ಕೊನೆಯಲ್ಲಿ ನಾಯಕ ದಸುನ್ ಶನಕ ಸ್ಫೋಟಕ ಬ್ಯಾಟಿಂಗ್ ನಡೆಸಿ 88 ಎಸೆತಗಳಲ್ಲಿ 108 ರನ್ ಬಾರಿಸಿ ಸೋಲಿನ ಅಂತರ ಕುಗ್ಗಿಸಿದರು. ಅಂತೆಯೇಮಧ್ಯಮ ಕ್ರಮಾಂಕದಲ್ಲಿ ಧನಂಜಯ ಡಿ ಸಿಲ್ವಾ 47 ರನ್ಗಳ ಕೊಡುಗೆ ಕೊಟ್ಟರು.
ಅದಕ್ಕೂ ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಪರ ಶುಬ್ಮನ್ ಗಿಲ್ (70) ಹಾಗೂ ರೋಹಿತ್ ಶರ್ಮ (83) ಮೊದಲ ವಿಕೆಟ್ಗೆ 143 ರನ್ಗಳ ಜತೆಯಾಟ ಆಡಿದರು. ಬಳಿಕ ಬಂದ ವಿರಾಟ್ ಕೊಹ್ಲಿ (113) ಅಮೋಘ ಶತಕ ಬಾರಿಸಿ ದೊಡ್ಡ ಮೊತ್ತ ಪೇರಿಸಲು ನೆರವಾದರು. ಶ್ರೇಯಸ್ ಅಯ್ಯರ್ (28), ಕೆ. ಎಲ್ ರಾಹುಲ್ (39) ತಮ್ಮ ಕೊಡುಗೆ ಕೊಟ್ಟರು.
ವಿರಾಟ್ ಕೊಹ್ಲಿ 87 ಎಸೆತಗಳಲ್ಲಿ 113 ರನ್ ಬಾರಿಸಿ 73ನೇ ಅಂತಾರಾಷ್ಟ್ರೀಯ ಶತಕ ಬಾರಿಸಿದ ಸಾಧನೆ ಮಾಡಿದರು. ಅದು ಏಕ ದಿನ ಮಾದರಿಯಲ್ಲಿ 45ನೇ ಶತಕ.
ಇದನ್ನೂ ಓದಿ | Virat kohli | ಎರಡು ಜೀವದಾನ ಪಡೆದಿದ್ದಕ್ಕೆ ದೇವರಿಗೆ ಥ್ಯಾಂಕ್ಸ್ ಹೇಳಿದ ವಿರಾಟ್ ಕೊಹ್ಲಿ