ಕೆಬೆಹಾ (ದಕ್ಷಿಣ ಆಫ್ರಿಕಾ) : ಸ್ಮೃತಿ ಮಂಧಾನಾ (52) ಬಾರಿಸಿದ ಅರ್ಧ ಶತಕ ಹಾಗೂ ವಿಕೆಟ್ಕೀಪರ್ ಬ್ಯಾಟರ್ ರಿಚಾ ಘೋಷ್ (47) ಕೊನೇ ಕ್ಷಣದಲ್ಲಿ ಭರ್ಜರಿ ಪ್ರತಿರೋಧ ಒಡ್ಡಿದ ಹೊರತಾಗಿಯೂ ಮಹಿಳೆಯರ ಟಿ20 ವಿಶ್ವ ಕಪ್ನಲ್ಲಿ (ICC Women’s T20 World Cup) ಭಾರತ ವನಿತೆಯರ ತಂಡ ಇಂಗ್ಲೆಂಡ್ ವಿರುದ್ಧ 11 ರನ್ಗಳ ಸೋಲಿಗೆ ಒಳಗಾಯಿತು. ಟೂರ್ನಿಯ 2ನೇ ಗುಂಪಿನಲ್ಲಿರುವ ಭಾರತ ತಂಡಕ್ಕೆ ಇದು ಮೊದಲ ಸೋಲಾಗಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನಿ ಇಂಗ್ಲೆಂಡ್ಗಿಂತ ನಂತರದ ಸ್ಥಾನ ಪಡೆದುಕೊಂಡಿದೆ.
ಇಲ್ಲಿನ ಸೇಂಟ್ ಜಾರ್ಜಿಯಾ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆದ ಹಣಾಹಣಯಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಬಳಗ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 151 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಭಾರತ ತಂಡ ಸ್ಮೃತಿ ಮಂಧಾನಾ ಅವರ ಉಪಯುಕ್ತ ಶತಕದ ಹೊರತಾಗಿಯೂ ತನ್ನ ಪಾಲಿನ ಓವರ್ಗಳು ಮುಕ್ತಾಯಗೊಂಡಾಗ 5 ವಿಕೆಟ್ ನಷ್ಟಕ್ಕೆ 140 ರನ್ ಮಾತ್ರ ಗಳಿಸಲು ಶಕ್ತಗೊಂಡು ಸೋಲೊಪ್ಪಿಕೊಂಡಿತು.
ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಭಾರತ ತಂಡ ಸ್ಮೃತಿ ಹಾಗೂ ಶಫಾಲಿ ವರ್ಮಾ (8) ಮೂಲಕ ಉತ್ತಮ ಅರಂಭ ಪಡೆದುಕೊಂಡ ಹೊರತಾಗಿಯೂ ಮಧ್ಯಮ ಕ್ರಮಾಂಕದಲ್ಲಿ ಕುಸಿತ ಕಂಡಿತು. ಜೆಮಿಮಾ ರೋಡ್ರಿಗಸ್ (13) ಹಾಗೂ ನಾಯಕಿ ಹರ್ಮನ್ಪ್ರಿತ್ಕೌರ್ (4) ಕಡಿಮೆ ಮೊತ್ತಕ್ಕೆ ಪೆವಿಲಿಯನ್ಗೆ ಮರಳಿದ ಕಾರಣ ಭಾರತ ಸಂಕಷ್ಟಕ್ಕೆ ಬಿತ್ತು. ಈ ವೇಳೆ ಕ್ರಿಸ್ಗೆ ಇಳಿದ ರಿಚಾ ಘೋಷ್ ಮತ್ತೊಂದು ಬಾರಿ ಸ್ಫೋಟಕ ಬ್ಯಾಟಿಂಗ್ ನಡೆಸಿ 34 ಎಸೆತಗಳಲ್ಲಿ 47 ರನ್ ಬಾರಿಸಿ ತಂಡವನ್ನು ಗೆಲುವಿನ ಸನಿಹ ತೆಗೆದುಕೊಂಡು ಹೋದರು. ಆದರೆ, ಉಳಿದ ಆಟಗಾರ್ತಿಯರ ಬೆಂಬಲ ದೊರಕಲಿಲ್ಲ.
ಅದಕ್ಕೆ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡದ ಆರಂಭಿಕ ಬ್ಯಾಟರ್ಗಳು ಭಾರತದ ವೇಗಿ ರೇಣುಕಾ ಸಿಂಗ್ ದಾಳಿಗೆ ನಲುಗಿದರು. 29 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಏತನ್ಮಧ್ಯೆ, ಮಧ್ಮಮ ಕ್ರಮಾಂಕದಲ್ಲಿ ನ್ಯಾಟ್ ಸ್ಕೀವರ್ (50), ನಾಯಕ ಹೇದರ್ ನೈಟ್ (28) ಹಾಗೂ ಆಮಿ ಜೋನ್ಸ್ (40) ಅವರ ಬಿರುಸಿನ ಬ್ಯಾಟಿಂಗ್ ಬಲದಿಂದ 151 ರನ್ ಬಾರಿಸಿತು.