ಪೂಚೆಫ್ಸ್ಟ್ರೂಮ್ (ದಕ್ಷಿಣ ಆಫ್ರಿಕಾ): ಭಾರತ 19ರ ವಯೋಮಿತಿಯ ವನಿತೆಯರ ತಂಡ ಉದ್ಘಾಟನಾ ಆವೃತ್ತಿಯ ವಿಶ್ವ ಕಪ್ (U19 T20 World Cup) ತನ್ನದಾಗಿಸಿಕೊಳ್ಳುವ ಮೂಲಕ ಇತಿಹಾಸ ಬರೆದಿದೆ. ಈ ಮೂಲಕ ಹಿರಿಯರ ತಂಡಕ್ಕೆ ಸಾಧ್ಯವಾಗದ ಸಾಧನೆಯನ್ನು ಕಿರಿಯರ ತಂಡ ಮಾಡಿದೆ. ಶಫಾಲಿ ವರ್ಮಾ ನೇತೃತ್ವದ ಭಾರತ ತಂಡ ಇಲ್ಲಿ ನಡೆದ (ಜನವರಿ 29ರಂದು) ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 7 ವಿಕೆಟ್ಗಳಿಂದ ಮಣಿಸಿ ಟ್ರೋಫಿ ಎತ್ತಿ ಹಿಡಿಯಿತು.
19 ವರ್ಷದೊಳಗಿನ ಮಹಿಳೆಯರ ಟಿ20 ವಿಶ್ವ ಕಪ್ ಇದೇ ಮೊದಲ ಬಾರಿಗೆ ಅಯೋಜನೆಗೊಂಡಿತ್ತು. ಹೀಗಾಗಿ ಭಾರತ ತಂಡದ ಪಾಲಿಗೆ ಇದು ವಿಶೇಷ ಸಾಧನೆ ಎನಿಸಿದೆ. ಟೂರ್ನಿಯುದ್ದಕ್ಕೂ ಅಜೇಯ ಓಟ ನಡೆಸಿದ ಯುವತಿಯರ ಬಳಗ ಫೈನಲ್ನಲ್ಲೂ ಪಾರಮ್ಯ ಮುಂದುವರಿಸಿ ಗೆಲುವು ಸಾಧಿಸಿತು.
ಸೆನ್ವೆಸ್ ಪಾರ್ಕ್ ಸ್ಟೇಡಿಯಮ್ನಲ್ಲಿ ನಡೆದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಟಾಸ್ ಗೆದ್ದ ಶಫಾಲಿ ವರ್ಮಾ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಆಂಗ್ಲರ ಬಳಗ 17.1 ಓವರ್ಗಳಲ್ಲಿ 68 ರನ್ಗಳಿಗೆ ಆಲ್ಔಟ್ ಆಯಿತು. ಗುರಿ ಬೆನ್ನಟ್ಟಿದ ಭಾರತ ವನಿತೆಯರ ತಂಡ 14 ಓವರ್ಗಳಲ್ಲಿ ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 69 ರನ್ ಪೇರಿಸಿ ಸಂಭ್ರಮಾಚರಣೆ ಮಾಡಿತು.
ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡಕ್ಕೆ ಭಾರತ ತಂಡದ ಬೌಲರ್ಗಳು ನಿರಂತರವಾಗಿ ಕಾಡಿದರು. ಟಿಟಸ್ ಸಧು, ಅರ್ಚನಾ ದೇವಿ, ಪಾರ್ಶವಿ ಚೋಪ್ರಾ ತಲಾ ಎರಡು ವಿಕೆಟ್ ಕಬಳಿಸಿದರೆ ಮನ್ನತ್ ಕಶ್ಯಪ್, ಶಫಾಲಿ ವರ್ಮಾ, ಸೋನಮ್ ಯಾದವ್ ತಲಾ ಒಂದು ವಿಕೆಟ್ ಕಬಳಿಸಿದರು.
ಇದನ್ನೂ ಓದಿ : Shweta Sehrawat: 19ರ ವಯೋಮಿತಿಯ ಮಹಿಳೆಯರ ವಿಶ್ವ ಕಪ್ನಲ್ಲಿ ಶ್ವೇತಾ ಸೆಹ್ರಾವತ್ ಸಾಧನೆಗಳು
ಸಣ್ಣ ಮೊತ್ತವನ್ನು ಬೆನ್ನಟ್ಟಲು ಹೊರಟ ಭಾರತ ತಂಡವೂ ಆರಂಭಿಕ ಆಘಾತ ಎದುರಿಸಿತು. ಶಫಾಲಿ ವರ್ಮಾ ಬಿರುಸಿನ 15 ರನ್ಗಳನ್ನು ಬಾರಿಸಿ ಔಟಾದರೆ, ಭರವಸೆಯ ಆಟಗಾರ್ತಿ ಶ್ವೇತಾ ಸೆಹ್ರಾವತ್ 5 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಬಳಿಕ ಸೌಮ್ಯ ತಿವಾರಿ (24) ಹಾಗೂ ಗೊಂಗಾಡಿ ತ್ರಿಶಾ (24) ನಿಧಾನಗತಿಯಲ್ಲಿ ಆಡಿ ತಂಡವನ್ನು ಗೆಲ್ಲಿಸಿದರು.