ಬರ್ಮಿಂಗ್ಹಮ್: ಭಾರತದ ಕುಸ್ತಿಪಟು ಬಜರಂಗ್ ಪೂನಿಯಾ ಕಾಮನ್ವೆಲ್ತ್ ಗೇಮ್ಸ್‌ನ ಪುರುಷರ ಕುಸ್ತಿಯ ೬೫ ಕೆ. ಜಿ ವಿಭಾಗದಲ್ಲಿ ಬಂಗಾರದ ಪದಕ ಗೆದಿದ್ದಾರೆ. ಈ ಮೂಲಕ ಸತತವಾಗಿ ಎರಡು ಬಾರಿ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದರು. ಕಳೆದ ಬಾರಿಯ ಕಾಮನ್ವೆಲ್ತ್‌ನಲ್ಲೂ ಅವರು ಸ್ವರ್ಣ ಪದಕ ಗೆದ್ದಿದ್ದರು.
ಶುಕ್ರವಾರ ರಾತ್ರಿ ನಡೆದ ೬೭ ಕೆ.ಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಕೆನಡಾದ ಲಾಕ್ಲೆನ್ ಮೆಕ್‌ನೀಲ್ ಅವರನ್ನು ಮಣಿಸಿದ ಬಜರಂಗ್ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಇವರ ಪದಕದೊಂದಿಗೆ ಭಾರತ ಹಾಲಿ ಆವೃತ್ತಿಯಲ್ಲಿ 7 ಚಿನ್ನ ತನ್ನದಾಗಿಸಿಕೊಂಡಿದ್ದು, ಒಟ್ಟು ಪದಕಗಳ ಸಂಖ್ಯೆ ೨೨ಕ್ಕೇರಿದೆ.
ಮೊದಲ ಸುತ್ತಿನಲ್ಲಿ ೪-೦ ಮುನ್ನಡೆ ಸಾಧಿಸಿದ ಬಜರಂಗ್ ಪೂನಿಯಾ, ಎರನೇ ಸುತ್ತಿನಲ್ಲಿ ಎದುರಾಳಿಗೆ ೨ ಅಂಕಗಳನ್ನು ಬಿಟ್ಟುಕೊಟ್ಟರು. ಅದರೆ, ಮೂರನೇ ಸುತ್ತಿನ ಅಂತ್ಯಕ್ಕೆ ೯-೨ ಅಂತರದ ಅಧಿಕಾರಯುತ ಜಯ ಸಾಧಿಸಿದರು.
ಬಜರಂಗ್ ಹಾಲಿ ಆವೃತ್ತಿಯ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಅದ್ಧೂರಿ ಪ್ರದರ್ಶನ ನೀಡಿದ್ದಾರೆ. ಸೆಮಿಫೈನಲ್‌ನಲ್ಲಿ ಅವರು ಇಂಗ್ಲೆಂಡ್‌ನ ಜಾರ್ಜ್ ರಾಮ್ ವಿರುದ್ಧ ೧೦-೦ ಅಂತರದ ಭರ್ಜರಿ ವಿಜಯ ಸಾಧಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದುಕೊಂಡಿದ್ದರು. ಅಂತೆಯೇ ಕ್ವಾರ್ಟರ್‌ಫೈನಲ್ಸ್‌ನಲ್ಲಿ ಅವರು ಮಾರಿಷಸ್‌ನ ಜೀನ್ ಗಯಾಲಿಯಾನೆ ಜೋರಿಜ್ ಬಂಡೊವು ವಿರುದ್ಧ ಜಯ ಸಾಧಿಸಿದ್ದರು. ಈ ಪಂದ್ಯವನ್ನು ಅವರು ಕೇವಲ ಒಂದು ನಿಮಿಷಗಳ ಒಳಗೆ ತಮ್ಮದಾಗಿಸಿಕೊಂಡಿದ್ದರು.