Site icon Vistara News

Asian Games 2023: ಚಿನ್ನಕ್ಕೆ ಗುರಿಯಿಟ್ಟ ಮಹಿಳಾ ಆರ್ಚರಿ ತಂಡ

Jyothi, Aditi and Parneet

ಹ್ಯಾಂಗ್ಝೌ: ಏಷ್ಯನ್​ ಗೇಮ್ಸ್​ನ 12ನೇ ದಿನವಾದ ಗುರುವಾರ ಭಾರತ ಚಿನ್ನದ ಪದಕ ಗೆಲ್ಲುವ ಮೂಲಕ ಶುಭಾರಂಭ ಮಾಡಿದೆ. ಮಹಿಳೆಯರ ಕಾಂಪೌಂಡ್ ಆರ್ಚರಿ ತಂಡ ಫೈನಲ್‌ನಲ್ಲಿ ಚಿನ್ನದ ಪದಕ್ಕೆ ಗುರಿಯಿರಿಸುವಲ್ಲಿ ಯಶಸ್ವಿಯಾಗಿದೆ. ಜ್ಯೋತಿ ವೆನ್ನಮ್, ಅದಿತಿ ಸ್ವಾಮಿ, ಪರ್ನೀತ್ ಕೌರ್ ಚಿನ್ನ ಗೆದ್ದ ಆರ್ಚರಿ ಪಟುಗಳು.

ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿದ ಫೈನಲ್​ನ ಅಂತಿಮ ಮೂರು ಹೊಡೆತದಲ್ಲಿ ಭಾರತೀಯ ಸ್ಪರ್ಧಿಗಳು ಪರಿಪೂರ್ಣ ಹೊಡೆತಗಳಿಂದ 30 ಅಂಕ ಪಡೆದು ಎದುರಾಳಿ ಚೈನೀಸ್ ತೈಪೆಯನ್ನು ಹೊಡೆದುರುಳಿಸಿದರು. ಒಟ್ಟು 230 ಅಂಕ ಪಡೆದು ಚಿನ್ನದ ಪದಕ ತಮ್ಮದಾಗಿಸಿಕೊಂಡರು. 229 ಅಂಕ ಪಡೆದ ಚೈನೀಸ್ ತೈಪೆ ಬೆಳ್ಳಿಗೆ ತೃಪ್ತಿಪಟ್ಟಿತು.

ಭಾರತ ಸದ್ಯ 19 ಚಿನ್ನ, 31 ಬೆಳ್ಳಿ, 32 ಕಂಚಿನ ಪದಕಗೊಂದಿಗೆ ಒಟ್ಟು 82 ಪದಕ ಗೆದ್ದು ನಾಲ್ಕನೇ ಸ್ಥಾನದಲ್ಲಿದೆ. ಇನ್ನು ಕೆಲ ಸ್ಪರ್ಧೆಯಲ್ಲಿ ಭಾರತೀಯ ಕ್ರೀಡಾಪಟುಗಳು ಫೈನಲ್​ ತಲುಪಿದ್ದು ಶತಕದ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ಪಿ.ವಿ.ಸಿಂಧುಗೆ ಸೋಲು

ಅವಳಿ ಒಲಿಂಪಿಕ್ಸ್​ ಪದಕ ವಿಜೇತೆ ಪಿ.ವಿ. ಸುಂಧು ಅವರ ಕಳಪೆ ಪ್ರದರ್ಶನ ಏಷ್ಯನ್ ಗೇಮ್ಸ್‌ನಲ್ಲಿಯೂ ಮುಂದುವರಿದಿದೆ. ಮಹಿಳಾ ಸಿಂಗಲ್ಸ್​ನ ಕ್ವಾಟರ್​ಫೈನಲ್​ನಲ್ಲಿ ಸೋಲು ಕಂಡು ನಿರಾಸೆ ಮೂಡಿಸಿದ್ದಾರೆ. ಪುರುಷರ ಕಬಡ್ಡಿ ತಂಡ ‘ಎ’ ಗುಂಪಿನ ಪಂದ್ಯದಲ್ಲಿ ಚೈನೀಸ್ ತೈಪೆ ವಿರುದ್ಧ 50-27 ಅಂಕದಿಂದ ಗೆದ್ದು ಮುಂದಿನ ಹಂತಕ್ಕೇರಿದೆ.

ಭಾರತದ ಅಥ್ಲೀಟ್​ಗಳಿಗೆ ಮೋಸ ಮಾಡುತ್ತಿದೆ ಚೀನಾ

ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್​ನಲ್ಲಿ (Asian Games) ಸ್ವಜನ ಪಕ್ಷಪಾತ ಹಾಗೂ ವಿವಾದಗಳು ನಿರಂತರವಾಗಿ ನಡೆಯುತ್ತಿವೆ. ಬೇರೆ ದೇಶಗಳ ಅದರಲ್ಲೂ ಭಾರತೀಯ ಅಥ್ಲೀಟ್​ಗಳ ವಿಚಾರದಲ್ಲಿ ಅಲ್ಲಿನ ಅಧಿಕಾರಿಗಳು ಉದ್ದೇಶಪೂರ್ವಕ ತಪ್ಪುಗಳನ್ನು ಮಾಡುತ್ತಿದ್ದಾರೆ. ಈ ಮೂಲಕ ಭಾರತದ ಅಥ್ಲೀಟ್​ಗಳ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವ ಕೆಲಸ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಈ ಆರೋಪಗಳಿಗೆ ಸಾಕಷ್ಟು ಉದಾಹರಣೆಗಳೂ ಲಭಿಸುತ್ತಿವೆ. ಈ ಎಲ್ಲ ವಿಚಾರಗಳನ್ನು ಮುಂದಿಟ್ಟುಕೊಂಡು ಮಾತನಾಡಿದ ಭಾರತದ ಮಾಜಿ ಅಥ್ಲೀಟ್​ (2003ರ ವಿಶ್ವ ಚಾಂಪಿಯನ್​ಷಿಪ್​ನ ಲಾಂಗ್​ ಜಂಪ್​ ಕಂಚಿನ ಪದಕ ವಿಜೇತೆ) ಅಂಜು ಬಾಬಿ ಜಾರ್ಜ್ ಅವರು, ಚೀನಾದವರು ಕ್ರೀಡಾಕೂಟದಲ್ಲಿ ತಮ್ಮ ಕುತಂತ್ರ ಬುದ್ಧಿಯನ್ನು ತೋರಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ Asian Games 2023: ಬೆಳ್ಳಿ ಗೆದ್ದ ಟೋಕಿಯೊ ಸ್ಟಾರ್‌ ಲವ್ಲಿನಾ ಬೋರ್ಗಹೈನ್‌

ಉದ್ದೇಶಪೂರ್ವಕ ಕೃತ್ಯ

ಮಾಧ್ಯಮದವರ ಜತೆ ಮಾತನಾಡಿದ ಅಂಜು ಬಾಬಿ, ನಮ್ಮವರು ಚೀನಾದಲ್ಲಿ ನಡೆಯುತ್ತಿರುವ ಹಾಲಿ ಆವೃತ್ತಿಯ ಏಷ್ಯನ್ ಗೇಮ್ಸ್​ನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. 100 ಪದಕಗಳ ಸಾಧನೆ ಮಾಡುವ ಹಾದಿಯಲ್ಲಿದ್ದಾರೆ. ಅದರೆ, ಚೀನಾದಲ್ಲಿ ಪದಕ ಗೆಲ್ಲುವುದು ನಮ್ಮ ಅಥ್ಲೀಟ್​ಗಳ ಪಾಲಿಗೆ ಸವಾಲಿನ ಸಂಗತಿಯಾಗಿತ್ತು. ಕ್ರೀಡಾ ಕೂಟದ ಅಧಿಕಾರಿಗಳು ಭಾರತದ ಅಥ್ಲೀಟ್​ಗಳಿಗೆ ಮೋಸ ಮಾಡಲು ಯತ್ನಿಸಿದ್ದಾರೆ. ಹರ್ಡಲ್ಸ್​ ವೇಳೆ ಜ್ಯೋತಿ ಯರ್ರಾಜಿ, ಮಹಿಳೆಯರ ಜಾವೆಲಿನ್ ಎಸೆತದ ವೇಳೆ ಅನ್ನುರಾಣಿ, ಪುರುಷರ ಜಾವೆಲಿನ್ ಎಸೆತದ ವೇಳೆ ನೀರಜ್ ಚೋಪ್ರಾ ಹಾಗೂ ಕಿಶೋರ್ ಕುಮಾರ್​ ಜೆನಾ ಅವರ ಮಾನಸಿಕ ಸ್ಥೈಯವನ್ನು ಕುಗ್ಗಿಸುವ ಕೆಲಸ ಮಾಡಿದ್ದಾರೆ. ಇವೆಲ್ಲವೂ ಉದ್ದೇಶಪೂರ್ವಕ ಕೃತ್ಯ. ಈ ಕುರಿತು ದೂರು ದಾಖಲಿಸುತ್ತೇವೆ ಎಂದು ಹೇಳಿದ್ದಾರೆ.

ನೀರಜ್ ಚೋಪ್ರಾ ಅವರ ಮೊದಲ ಎಸೆತವು ಸ್ಪಷ್ಟವಾಗಿ 85 ಮೀಟರ್ ಗಡಿಯನ್ನು ದಾಟಿತ್ತು. ಈ ವೇಳೆ ಕೆಲವು ತಾಂತ್ರಿಕ ಸಮಸ್ಯೆ ಇದೆ ಎಂದು ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಎಸೆತವನ್ನು ದಾಖಲು ಮಾಡಲಿಲ್ಲ. ಆದರೂ ಚಾಂಪಿಯನ್ ಥ್ರೋವರ್ ಚಿನ್ನದ ಪದಕ ಗೆದ್ದರು. ನಂತರ ಅದೇ ಸ್ಪರ್ಧೆಯಲ್ಲಿ, ಕಿಶೋರ್ ಜೆನಾ ಅವರ ಎರಡನೇ ಎಸೆತವನ್ನು ಫೌಲ್ ಎಂದು ​ ಪರಿಗಣಿಸಿದ್ದರು. ಅದು ಸ್ಪಷ್ಟವಾಗಿ ಕಾನೂನುಬದ್ಧ ಎಸೆತವಾಗಿತ್ತು.

Exit mobile version