ಬರ್ಮಿಂಗ್ಹಮ್ : ಕಾಮನ್ವೆಲ್ತ್ ಗೇಮ್ಸ್‌ನ (CWG – 2022) ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದಿರುವ ಭಾರತದ ಮಹಿಳೆಯರ ಫೋರ್ ಲಾನ್ ಬೌಲ್ ತಂಡ ಹೊಸ ಇತಿಹಾಸ ಸೃಷ್ಟಿಸಿದೆ. ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 17-10 ಅಂಕಗಳಿಂದ ಸೋಲಿರುವ ಭಾರತ ತಂಡದ ಸದಸ್ಯರಾದ ಲವ್ಲಿ ಚೌಬೆ, ಪಿಂಕಿ, ನಯೋನ್ಮಿನಿ ಸೈಕಿಯಾ ಹಾಗೂ ರೂಪಾ ರಾಣಿ ಅಮೋಘ ಸಾಧನೆ ಮಾಡಿದೆ.
ಲಾನ್ ಬೌಲ್ ತಂಡದ ಸಾಧನೆಯೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ ೧೦ಕ್ಕೆ ಏರಿದೆ. ಅದರಲ್ಲಿ ನಾಲ್ಕು ಬಂಗಾರ, ಮೂರು ಬೆಳ್ಳಿ ಹಾಗೂ ಮೂರು ಕಂಚಿನ ಪದಕಗಳಿವೆ.
ಭಾರತ ಲಾನ್‌ಬೌಲ್ ತಂಡವು ಇದುವರೆಗೆ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಬಂಗಾರದ ಪದಕ ಗೆದ್ದಿರಲಿಲ್ಲ. ಅಂತೆಯೇ ಈ ಕ್ರೀಡೆಯಲ್ಲಿ ಭಾರತ ಎಂದಿಗೂ ಜನಪ್ರಿಯತೆ ಗಳಿಸಿರಲಿಲ್ಲ. ಆದಾಗ್ಯೂ ೨೦೧೮ರ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್‌ನ ಚಿನ್ನದ ಪದಕ ವಿಜೇತ ತಂಡವಾಗಿರುವ ದಕ್ಷಿಣ ಆಫ್ರಿಕಾವನ್ನು ಫೈನಲ್‌ನಲ್ಲಿ ಸೋಲಿಸುವ ಮೂಲಕ ಭಾರತೀಯ ಕ್ರೀಡಾಭಿಮಾನಿಗಳ ಮನೆಮಾತಾಗಲು ಹೊರಟಿದಿದೆ. ಸೋಮವಾರ ನಡೆದ ಸೆಮಿಫೈನಲ್ ಹಂತದಲ್ಲಿ ಕಳೆದ ಬಾರಿಯ ಚಾಂಪಿಯನ್ ನ್ಯೂಜಿಲೆಂಡ್ ತಂಡವನ್ನೇ ಮಣಿಸುವ ಮೂಲಕ ಅಚ್ಚರಿ ಮೂಡಿಸಿದ್ದರು ಈ ನಾಲ್ವರು ಮಹಿಳೆಯರು.
ಆರಂಭದಲ್ಲಿ ದಕ್ಷಿಣ ಆಫ್ರಿಕಾ ಮಹಿಳೆಯರು ೩-೨ರ ಮುನ್ನಡೆ ಪಡೆದುಕೊಂಡಿತ್ತ. ಬಳಿಕ ನಾಯಕಿ ರೂಪಾರಾಣಿ ಅಂಕ ಗೆಲ್ಲುವ ಮೂಲಕ ಭಾರತ ೬-೩ ಮುನ್ನಡೆ ಪಡೆದುಕೊಂಡಿತು. ಏಳನೆ ಎಂಡ್‌ನಲ್ಲಿ ದಕ್ಷಿಣ ಆಫ್ರಿಕಾ ಮಹಿಳೆಯರು ೮-೮ ರ ಸಮಬಲದ ಸಾಧನೆ ಮಾಡಲು ಯಶಸ್ವಿಯಾದರು. ಅಲ್ಲದೆ, ಮತ್ತೆರಡು ಅಂಕಗಳನ್ನು ಪಡೆಯುವ ಮೂಲಕ ೧೦-೮ರ ಮನ್ನಡೆ ಪಡೆದುಕೊಂಡು ಗೆಲುವಿನೆಡೆಗೆ ಕಾಲಿಟ್ಟಿತು. ಆದರೆ, ಪಂದ್ಯ ಮುಕ್ತಾಯದ ವೇಳೆಗೆ ಭಾರತದ ಮಹಿಳೆಯರು ಮತ್ತೆ ೯ ಅಂಕಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ ೧-೭ರ ಮುನ್ನಡೆಯೊಂದಿಗೆ ಜಯ ಸಾಧಿಸಿತು.
ಏನಿದು ಆಟ, ಎಲ್ಲಿ ಫೇಮಸ್
ಲಾನ್‌ಬೌಲ್ ಈಜಿಪ್ಟ್ ಮೂಲದ ಕ್ರೀಡೆಯಾಗಿದೆ. ಇದೊಂದು ಹೊರಾಂಗಣ ಕ್ರೀಡೆಯಾಗಿದ್ದು, ರಬ್ಬರ್ ಚೆಂಡನ್ನು ನಿಗದಿ ಗುರಿಯಡೆಗೆ ಎಸೆಯುವ ಮೂಲಕ ಅಂಕಗಳನ್ನು ಗಳಿಸುವುದೇ ಆಟದ ನಿಯಮ. ೧೯೩೦ರಿಂದ ಈ ಕ್ರೀಡೆ ಕಾಮನ್ವೆಲ್ತ್ ಗೇಮ್ಸ್‌ನ ಕ್ರೀಡಾಕೂಟದ ಪಟ್ಟಿಯಲ್ಲಿದೆ. ಇಂಗ್ಲೆಂಡ್‌ನಲ್ಲಿ ಇದು ಜನಪ್ರಿಯ ಆಟ. ಕಾಮನ್ವೆಲ್ತ್ ಇತಿಹಾಸದಲ್ಲಿ ಇಂಗ್ಲೆಂಡ್ ೨೦ ಚಿನ್ನ, ೯ ಬೆಳ್ಳಿ ಹಾಗೂ ೨೨ ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದೆ.
ಆಡುವುದು ಹೇಗೆ?
ಕಾಮನ್ವೆಲ್ತ್‌ನಲ್ಲಿ ಒಬ್ಬರು, ಇಬ್ಬರು, ಮೂವರು ಹಾಗೂ ನಾಲ್ಕು ಮಂದಿಯ ತಂಡಗಳು ಆಡಲಾಗುತ್ತದೆ. ಒಂದೂವರೆ ಕೆ.ಜಿ ಭಾರದ ರಬ್ಬರ್ ಚೆಂಡುಗಳನ್ನು ಸಣ್ಣ ಚೆಂಡು ಇರುವ ಗುರಿಯೆಡೆಗೆ ನೆಲದಲ್ಲಿ ಉರುಳಿಸುವ ಮೂಲಕ ಅಂಕಗಳನ್ನು ಸಂಪಾದಿಸಲಾಗುತ್ತದೆ. ಸಣ್ಣ ಚೆಂಡನ್ನು ಜ್ಯಾಕ್ ಎಂದು ಕರೆಯಲಾಗುತ್ತದೆ. ಜ್ಯಾಕ್‌ನಿಂದ ೨೩ ಮೀಟರ್ ದೂರದ ೧೮ ತುದಿಗಳಿಂದ ಚೆಂಡನ್ನು ಉರುಳಿಸಲಾಗುತ್ತದೆ. ಜ್ಯಾಕ್ ಚೆಂಡು ತಾಗಿಸಿದವರಿಗೆ ಅಂಕಗಳನ್ನು ನೀಡಲಾಗುತ್ತದೆ. ಜತೆಗೆ ಜ್ಯಾಕ್‌ನ ಸಮೀಪಕ್ಕೆ ಚೆಂಡು ಎಸೆದವರಿಗೆ ಅಂಕಗಳನ್ನು ಲೆಕ್ಕ ಹಾಕಲಾಗುತ್ತದೆ.
ಅಭಿನಂದನೆಗಳ ಮಹಾಪೂರ
ಮಹಿಳೆಯರ ಫೋರ್ ತಂಡ ಬಂಗಾರದ ಪದಕ ಗೆಲ್ಲುವ ಮೂಲಕ ಭಾರತೀಯರ ಪ್ರೀತಿಗೆ ಪಾತ್ರವಾಗಿದೆ. ಗಣ್ಯರು ಸೇರಿದಂತೆ ಕ್ರೀಡಾಸಕ್ತರೆಲ್ಲರೂ ಐವರು ಮಹಿಳೆಯರ ಇರುವ ಬಳಗಕ್ಕೆ ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ಸ್ಪರ್ಧಿಗಳಿಗೆ ಶುಭಾಶಯ ತಿಳಿಸಿದ್ದಾರೆ.
ಇದನ್ನೂ ಓದಿ | CWG- 2022 | ಕಂಚಿನ ಪದಕಕ್ಕೆ ಕೊರಳೊಡ್ಡಿದ ವಿಜಯಕುಮಾರ್ ಯಾದವ್, ಜುಡೋದಲ್ಲಿ ಮತ್ತೊಂದು ಪದಕ