ಬೆಂಗಳೂರು: ಐಸಿಸಿ ವಿಶ್ವಕಪ್ 2023ರ(ICC World Cup 2023) ಟೂರ್ನಿಯಲ್ಲಿ ಭಾರತ ತಂಡ ಅಮೋಘ ಪ್ರದರ್ಶನ ತೋರುವ ಮೂಲಕ ಫೈನಲ್ಗೆ ಪ್ರವೇಶಿಸಿದೆ. ಭಾರತದ ಈ ಸಾಧನೆಯಲ್ಲಿ ಎಲ್ಲ ಆಟಗಾರರು ಶ್ರೇಷ್ಠ ಕೊಡುಗೆ ಸಲ್ಲಿಸಿದ್ದಾರೆ. ಇಲ್ಲಿಯವರೆಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು(world cup 2023 man of the match) ಗೆದ್ದವರ ಪಟ್ಟಿ ಮತ್ತು ಸಾಧನೆಯ ವಿವರವೊಂದು ಇಲ್ಲಿದೆ.
ಕೆಎಲ್ ರಾಹುಲ್
ಭಾರತ ತಂಡ ಮೊದಲ ಲೀಗ್ ಪಂದ್ಯವನ್ನಾಡಿದ್ದು ಆಸ್ಟ್ರೇಲಿಯಾ ವಿರುದ್ಧ. ಈ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಅವರು ಅಜೇಯ 97 ರನ್ಗಳನ್ನು ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಅವರ ಈ ಸಾಧನೆಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದಿತ್ತು. ರಾಹುಲ್ 115 ಎಸೆತಗಳಿಂದ ಅಜೇಯ 97 ರನ್ ಬಾರಿಸಿದ್ದರು. ಭಾರತ 6 ವಿಕೆಟ್ಗಳಿಂದ ಗೆದ್ದಿತ್ತು.
ಶ್ರೇಯಸ್ ಅಯ್ಯರ್
ಆರಂಭಿಕ ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿದ್ದ ಶ್ರೇಯಸ್ ಅಯ್ಯರ್ ಅವರು ಕೊನೆಯ ನಾಲ್ಕು ಪಂದಗಳಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿ 2 ಶತಕ ಬಾರಿಸಿ ಮಿಂಚಿದರು. ನೆದರ್ಲೆಂಡ್ಸ್ ವಿರುದ್ಧ ಅಮೋಘ ಬ್ಯಾಟಿಂಗ್ ನಡೆಸಿದ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿದಿತ್ತು. ಸದ್ಯ ಫೈನಲ್ ಪಂದ್ಯದಲ್ಲಿಯೂ ಅವರ ಬ್ಯಾಟಿಂಗ್ ಮೇಲೆ ತಂಡ ಹೆಚ್ಚಿನ ಭರವಸೆ ಇರಿಸಿದೆ. ನೆದರ್ಲೆಂಡ್ಸ್ ಎದುರಿನ ಪಂದ್ಯದಲ್ಲಿ 94 ಎಸೆತಗಳಲ್ಲಿ ಅಜೇಯ 128 ರನ್ ಗಳಿಸಿ ಬಾರಿಸಿದ್ದರು. ಅವರು ಇಲ್ಲಿಯವರೆಗೆ 526 ರನ್ ಗಳಿಸಿದ್ದಾರೆ.
ಇದನ್ನೂ ಓದಿ ಕೊಹ್ಲಿ ಶತಕಗಳ ಅರ್ಧಶತಕ; ಇಲ್ಲಿದೆ ‘ಸೆಂಚುರಿ ಸರದಾರ’ ಸಾಗಿದ ಹಾದಿ…
ಜಸ್ಪ್ರೀತ್ ಬುಮ್ರಾ
ತೀವ್ರ ಸ್ವರೂಪದ ಬೆನ್ನು ನೋವಿನ ಗಾಯಕ್ಕೆ ತುತ್ತಾಗಿ 11 ತಿಂಗಳ ಬಳಿಕ ತಂಡ ಸೇರಿದ್ದ ಜಸ್ಪ್ರೀತ್ ಬುಮ್ರಾ ಅವರು ವಿಶ್ವಕಪ್ನಲ್ಲಿ ಇದುವರಗೆ ಘಾತಕ ಬೌಲಿಂಗ್ ದಾಳಿ ನಡೆಸಿ ಮಿಂಚಿದ್ದಾರೆ. ಪಾಕಿಸ್ತಾನ ವಿರುದ್ಧ ಅ.14ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಬುಮ್ರಾ 7 ಓವರ್‌ಗಳಲ್ಲಿ 19ಕ್ಕೆ 2 ವಿಕೆಟ್ ಪಡೆದರು. ಅವರ ಈ ಸಾಧನೆಗೆ ಪಂದ್ಯಶ್ರಷ್ಠ ಪ್ರಶಸ್ತಿ ಒಲಿದಿತ್ತು. ಬುಮ್ರಾ 18 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ World Cup Final: ಭಾರತ-ಆಸೀಸ್ ಫೈನಲ್ ಪಂದ್ಯಕ್ಕೆ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಹಾಜರ್!
ರೋಹಿತ್ ಶರ್ಮಾ
ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರು ಆಸೀಸ್ ವಿರುದ್ಧದ ಪಂದ್ಯವನ್ನು ಹೊರತುಪಡಿಸಿ ಉಳಿದ ಎಲ್ಲ ಪಂದ್ಯಗಳಲ್ಲಿಯೂ ಶ್ರೇಷ್ಠ ಮಟ್ಟದ ಬ್ಯಾಟಿಂಗ್ ಪ್ರದರ್ಶನ ತೋರಿದ್ದಾರೆ. ಅಫ್ಘಾನಿಸ್ತಾನ ಮತ್ತು ಇಂಗ್ಲೆಂಡ್ ವಿರುದ್ಧದ ಎರಡು ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದಕ್ಕೆ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದಿತ್ತು. ಸದ್ಯ ಅವರು 2 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಆಫ್ಘನ್ ವಿರುದ್ಧ ಸ್ಫೋಟಕ ಬ್ಯಾಟಿಂಗ್ ನಡೆಸಿ 84 ಎಸೆತಗಳಲ್ಲಿ 131 ರನ್ ಬಾರಿಸಿ ಶತಕ ಸಿಡಿಸಿದ್ದರು. ಇಂಗ್ಲೆಂಡ್ ವಿರುದ್ಧ 87 ರನ್ ಗಳಿಸಿದ್ದರು. ಸದ್ಯ 10 ಪಂದ್ಯ ಆಡಿ 550 ರನ್ ಬಾರಿಸಿದ್ದಾರೆ.
ವಿರಾಟ್ ಕೊಹ್ಲಿ
ಈ ಬಾರಿಯ ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ಮುಟ್ಟಿದೆಲ್ಲ ಚಿನ್ನ ಎಂಬಂತೆ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಕೊಹ್ಲಿ ದಾಖಲೆ ಮೇಲೆ ದಾಖಲೆಗಳನ್ನು ಬರೆಯುತ್ತಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ಕಿವೀಸ್ ವಿರುದ್ಧ ಶತಕ ಬಾರಿಸುವ ಮೂಲಕ ಸಚಿನ್ ಅವರ ಸಾರ್ವಕಾಲಿಕ ಏಕದಿನ ಶತಕದ ದಾಖಲೆಯನ್ನು ಮುರಿದಿದ್ದರು. ಕೊಹ್ಲಿ ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಕ್ಲಾಸ್ ಬ್ಯಾಟಿಂಗ್ ಪ್ರದರ್ಶಿಸಿದ ಕಾರಣ ಅವರಿಗೆ ಈ ಎರಡು ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದಿತ್ತು. ಸದ್ಯ 10 ಪಂದ್ಯಗಳಲ್ಲಿ 711 ರನ್ ಗಳಿಸಿ ಅತ್ಯಧಿಕ ರನ್ಗಳಿಸಿದ ಸಾಧಕರಲ್ಲಿ ಅಗ್ರಸ್ಥಾನ ಪಡದಿದ್ದಾರೆ.
ಇದನ್ನೂ ಓದಿ Virat kohli : ಸಚಿನ್ ದಾಖಲೆ ಭೇದಿಸು; ಕೊಹ್ಲಿಗೆ ಮಾಜಿ ಕೋಚ್ ಸಲಹೆ
ಮೊಹಮ್ಮದ್ ಶಮಿ
ಆರಂಭಿಕ ಮೂರು ಪಂದ್ಯಗಳಿಂದ ಹೊರಗುಳಿದ್ದ ಮೊಹಮ್ಮದ್ ಶಮಿ ಅವರು ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದ ಮೂಲಕ ಆಡುವ ಅವಕಾಶ ಪಡೆದರು. ಇಲ್ಲಿಂದ ಶುರುವಾದ ಇವರ ವಿಕೆಟ್ ಬೇಟೆಯನ್ನು ಯಾರಿಂದಲು ತಡೆದು ನಿಲ್ಲಿಸಲಾಗದ ಹಂತಕ್ಕೆ ಬೆಳೆದು ನಿಂತಿದೆ. ಪ್ರತಿ ಪಂದ್ಯದಲ್ಲಿಯೂ ಕನಿಷ್ಠ 5 ವಿಕೆಟ್ ಕಿತ್ತು ಎದುರಾಳಿ ತಂಡವನ್ನು ನಲುಗಿಸುತ್ತಿದ್ದಾರೆ. ಅವರಿಗೆ ಈ ಟೂರ್ನಿಯಲ್ಲಿ ಒಟ್ಟು ಮೂರು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದಿದೆ. ಅವರ ಬೌಲಿಂಗ್ ಸಾಧನೆ ಹೀಗಿದೆ. ಕಿವೀಸ್ ವಿರುದ್ಧ 54 ರನ್ಗೆ 5 ವಿಕೆಟ್. ಶ್ರೀಲಂಕಾ ಎದುರು ಕೇವಲ 18 ರನ್ಗೆ 5 ವಿಕೆಟ್. ನ್ಯೂಜಿಲ್ಯಾಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ 57 ರನ್ಗೆ 7 ವಿಕೆಟ್. ಈ ಬಾರಿಯ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಕಿತ್ತ ದಾಖಲೆಯೂ ಅವರ ಹೆಸರಿನಲ್ಲಿದೆ. ಸದ್ಯ ಅವರು ವಿಕೆಟ್ ಸಾಧಕರ ಯಾದಿಯಲ್ಲಿ ಅಗ್ರಸ್ಥಾನ ಪಡದಿದ್ದಾರೆ. ಇದುವರೆಗೆ ಒಟ್ಟು 23 ವಿಕೆಟ್ ಕೆಡವಿದ್ದಾರೆ.