Site icon Vistara News

ind vs wi : ವೆಸ್ಟ್​ ಇಂಡೀಸ್ ವಿರುದ್ಧದ ಟಿ20ಯಲ್ಲಿ ಭಾರತ ತಂಡಕ್ಕೆ ಸತತ ಎರಡನೇ ಸೋಲು

Nicolas Pooran

ಗಯಾನ: ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ವೈಫಲ್ಯ ಕಂಡ ಭಾರತ ತಂಡ ವೆಸ್ಟ್ ಇಂಡೀಸ್ ಪ್ರವಾಸದ ಟಿ20 ಸರಣಿಯ ಎರಡನೇ ಪಂದ್ಯದಲ್ಲೂ ಸೋಲು ಕಂಡಿದೆ. ಈ ಮೂಲಕ ವೆಸ್ಟ್​ ಇಂಡೀಸ್​ ತಂಡ ತನ್ನ ನೆಚ್ಚಿನ ಚುಟುಕು ಕ್ರಿಕೆಟ್​ ಮಾದರಿಯಲ್ಲಿ ಪಾರಮ್ಯ ತೋರಿದರೆ ಭಾರತ ತಂಡ ಮತ್ತೊಂದು ಸಲ ಅನಿಶ್ಚಿತ ಪ್ರದರ್ಶನ ನೀಡಿ ಅಭಿಮಾನಿಗಳಿಗೆ ಬೇಸರ ಮೂಡಿಸಿತು. ಈ ಸೋಲಿನೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಭಾರತ ತಂಡ 0-2 ಹಿನ್ನಡೆಗೆ ಒಳಗಾಯಿತು. ವಿಂಡೀಸ್​ ಪರ ವಿಕೆಟ್​ಕೀಪರ್ ಬ್ಯಾಟರ್​ ನಿಕೋಲಸ್​ ಪೂರನ್​ 40 ಎಸೆತಗಳಲ್ಲಿ 67 ರನ್ ಬಾರಿಸಿ ಗೆಲುವಿನ ರೂವಾರಿ ಎನಿಸಿಕೊಂಡರು. ಇದೇ ವೇಳೆ ಭಾರತ ಪರ ತಿಲಕ್ ವರ್ಮಾ (51) ಬಾರಿಸಿದ್ದ ಚೊಚ್ಚಲ ಅಂತಾರಾಷ್ಟ್ರೀಯ ಟಿ20 ಶತಕ ವ್ಯರ್ಥಗೊಂಡಿತು.

ಇಲ್ಲಿನ ಪ್ರಾವಿಡೆನ್ಸ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯೇ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 152 ರನ್​ ಬಾರಿಸಿತು ಟೀಮ್ ಇಂಡಿಯಾ. ಪ್ರತಿಯಾಗಿ ಬ್ಯಾಟ್ ಮಾಡಿದ ಆತಿಥೇಯ ವೆಸ್ಟ್​ ಇಂಡೀಸ್ ಬಳಗ ಇನ್ನೂ ಏಳು ಎಸೆತಗಳು ಬಾಕಿ ಇರುವಾಗಲೇ 8 ವಿಕೆಟ್​ ಕಳೆದುಕೊಂಡು 155 ರನ್ ಬಾರಿಸಿ ಗೆಲುವು ಸಾಧಿಸಿತು.

ಭಾರತ ತಂಡದ ಆರಂಭ ಈ ಬಾರಿಯೂ ಉತ್ತಮವಾಗಿರಲಿಲ್ಲ. ಒಂದು ಸಿಕ್ಸರ್ ಬಾರಿಸಿ ಸ್ಫೋಟಕ ಬ್ಯಾಟಿಂಗ್ ಸುಳಿವು ಕೊಟ್ಟ ಶುಭ್​ಮನ್​ ಗಿಲ್​ 7 ರನ್​ಗೆ ಸೀಮಿತಗೊಂಡರು. ಬಳಿಕ ಬಂದ ಸೂರ್ಯಕುಮಾರ್ ಯಾದವ್​ 1 ರನ್ ಬಾರಿಸಿ ರನ್​ಔಟ್ ಆದರು. ಈ ಮೂಲಕ ಈ ಇಬ್ಬರೂ ಭಾರತೀಯ ದಾಂಡಿಗರು ತಮ್ಮ ಕಳಪೆ ಫಾರ್ಮ್​ ಮುಂದುವರಿಸಿದರು. ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ತಿಲಕ್ ವರ್ಮಾ ಸ್ವಲ್ಪ ಅರ್ಧ ಶತಕ ಬಾರಿಸಿ ಮಿಂಚಿದರು. ಆದರೆ, ಅದಕ್ಕಿಂತ ಮೊದಲು ಆರಂಭಿಕ ಬ್ಯಾಟರ್​ ಇಶಾನ್​ ಕಿಶನ್​ (27) ವಿಕೆಟ್​ ಒಪ್ಪಿಸಿದರು.

ಟಿ20 ಮಾದರಿಯಲ್ಲಿ ಅವಕಾಶ ಪಡೆದಿರುವ ಸಂಜು ಸ್ಯಾಮ್ಸನ್ ಮತ್ತೊಮ್ಮೆ ವಿಫಲ ಪ್ರದರ್ಶನ ನೀಡಿ 7 ರನ್​ಗಳಿಗೆ ಔಟಾದರು. ನಾಯಕ ಹಾರ್ದಿಕ್ ಪಾಂಡ್ಯ 24 ರನ್​ ಬಾರಿಸಿದರ ಅಕ್ಷರ್​ ಪಟೇಲ್​ 14 ರನ್ ಕೊಡುಗೆ ಕೊಟ್ಟರು.

ಗೆಲುವು ಕಸಿದ ನಿಕೋಲಸ್​ ಪೂರನ್​

ಗುರಿ ಬೆನ್ನಟ್ಟಲು ಆರಂಭಿಸಿದ ವೆಸ್ಟ್​ ಇಂಡೀಸ್ ತಂಡದ ಆರಂಭಿಕ ವಿಕೆಟ್​ಗಳನ್ನು ಭಾರತ ತಂಡ ಬೇಗನೆ ಪಡೆಯಿತು. 2 ರನ್​ಗಳಿಗೆ ವಿಕೆಟ್​ ಪಡೆಯುವ ಮೂಲಕ ಮಿಂಚಿತು. ನಾಯಕ ಹಾರ್ದಿಕ್ ಪಾಂಡ್ಯ ಆ ಎರಡು ವಿಕೆಟ್​ಗಳನ್ನು ತಮ್ಮದಾಗಿಸಿಕೊಂಡರು. ಆದರೆ, ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ನಿಕೋಲಸ್​ ಪೂರ್​ 67 ರನ್ ಬಾರಿಸಿ ಭಾರತದ ಗೆಲುವು ಕಸಿದರು. ನಾಯಕ ರೋವ್ಮನ್ ಪೊವೆಲ್ 21 ರನ್ ಗಳಿಸಿ ನಿಕೋಲಸ್​ ಪೂರನ್​ಗೆ ಉತ್ತಮ ಜತೆಯಾಟ ಕೊಟ್ಟರು. ಈ ವೇಳೆ ಭಾರತ ತಂಡದ ಸೋಲು ನಿಶ್ಚಯಗೊಂಡಿತು.

ಇದನ್ನೂ ಓದಿ : ICC World Cup: ಏಕದಿನ ವಿಶ್ವಕಪ್​ಗೆ ತಂಡಗಳ ಪ್ರಕಟಕ್ಕೆ ದಿನಾಂಕ ನಿಗದಿ; ಭಾರತಕ್ಕೆ ಗಾಯದ ಚಿಂತೆ

ಆ ಬಳಿಕ ನಾಟಕೀಯ ಕುಸಿತ ಕಂಡ ವೆಸ್ಟ್​ ಇಂಡೀಸ್​ ಸತತವಾಗಿ ವಿಕೆಟ್​ ಕಳೆದುಕೊಂಡಿತು. ಹೆಟ್ಮಾಯರ್​ 22 ರನ್​ಗಳಿಗೆ ಔಟಾದರೆ ರೊಮಾರಿಯೊ ಶಫರ್ಡ್ ಹಾಗೂ ಜೇಸನ್ ಹೋಲ್ಡರ್​ ಶೂನ್ಯಕ್ಕೆ ಮರಳಿದರು. ಈ ವೇಳೆ ಭಾರತಕ್ಕೆ ಗೆಲವು ಸಿಗಬಹುದು ಎಂದು ಅಂದಾಜಿಸಲಾಯಿತು. ಆದರೆ, ಅಕೇಲಾ ಹೊಸೈನ್ (16) ಹಾಗೂ ಅಲ್ಜಾರಿ ಜೋಸೆಫ್​ (10) ಭಾರತದ ಬೌಲರ್​ಗಳಿಗೆ ತಿರುಗುತ್ತರ ಕೊಟ್ಟು ತಮ್ಮ ತಂಡಕ್ಕೆ ಜಯ ತಂದುಕೊಟ್ಟರು.

Exit mobile version