ಜೊಹಾನ್ಸ್ಬರ್ಗ್: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯನ್ನು 1-1 ಅಂತರದಿಂದ ಸಮಬಲ ಸಾಧಿಸಿದ ಟೀಮ್ ಇಂಡಿಯಾ ಇದೀಗ ಏಕದಿನ ಕ್ರಿಕೆಟ್(South Africa vs India, 1st ODI) ಆಡಲು ಮುಂದಾಗಿದೆ. ಇತ್ತಂಡಗಳ ನಡುವಣ ಮೊದಲ ಏಕದಿನ ಪಂದ್ಯ ನಾಳೆ(ಭಾನುವಾರ) ಜೊಹಾನ್ಸ್ಬರ್ಗ್ನಲ್ಲಿ ನಡೆಯಲಿದೆ.
ಟಿ20 ಸರಣಿಯಂತೆ ಇಲ್ಲಿಯೂ ಭಾರತ ಯುವ ಆಟಗಾರರನ್ನೆ ನಚ್ಚಿಕೊಂಡಿದೆ. ಅನುಭವಿ ಆಟಗಾರ, ಕನ್ನಡಿಗ ಕೆ.ಎಲ್ ರಾಹುಲ್ ಅವರು ತಂಡವನ್ನು ಮುನ್ನಡೆಸಲಿದ್ದಾರೆ. ಹೆಚ್ಚಾಗಿ ಏಕದಿನ ಕ್ರಿಕೆಟ್ ಆಡಿದ ಅನುಭವ ಹೊಂದಿರದ ಯುವ ಪಡೆಯನ್ನು ರಾಹುಲ್ ಹೇಗೆ ಮುನ್ನಡೆಸಲಿದ್ದಾರೆ ಎನ್ನುವುದು ಸರಣಿಯ ಕೌತುಕ. ಒಂದೊಮ್ಮೆ ರಾಹುಲ್ ಅವರು ಈ ತಂಡವನ್ನು ಕಟ್ಟಿಕೊಂಡು ಸರಣಿ ಗೆದ್ದರೆ ಅವರಿಗೆ ಏಕದಿನ ತಂಡದ ನಾಯಕತ್ವ ಸಿಗುವುದು ಖಚಿತ. ರೋಹಿತ್ ಸಾರಥ್ಯದಲ್ಲಿ ವಿಶ್ವಕಪ್ ಸೋಲು ಕಂಡಿತ್ತು. ಮುಂದಿನ ವಿಶ್ವಕಪ್ಗೆ ರೋಹಿತ್ ಆಡುವುದು ಅಸಾಧ್ಯ. ಹೀಗಾಗಿ ಬಿಸಿಸಿಐ ನಾಯಕನ ಹುಡುಕಾಟದಲ್ಲಿರುವುದು ನಿಜ. ಹೀಗಾಗಿ ರಾಹುಲ್ಗೆ ದಕ್ಷಿಣ ಆಫ್ರಿಕಾ ಸರಣಿ ಮುಖ್ಯವಾಗಿದೆ.
Our ODI group has arrived in Johannesburg! 🙌🏽
— BCCI (@BCCI) December 15, 2023
Preparations have begun. 1st one-day on Sunday.#TeamIndia #SAvIND pic.twitter.com/82ho3o8qQK
ಸೇಡಿನ ಸರಣಿ
ಕಳೆದ ವರ್ಷ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಮಾಡಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಿತ್ತು. ಈ ಸರಣಿಯಲ್ಲಿ ರಾಹುಲ್ ತಂಡದ ನಾಯಕರಾಗಿದ್ದರು. ಆದರೆ ಇದರಲ್ಲಿ ಭಾರತ ಸೋಲನುಭವಿಸಿತ್ತು. ಇದೀಗ ಮತ್ತೆ ರಾಹುಲ್ ಸಾರಥ್ಯದಲ್ಲಿ ಒಂದು ವರ್ಷಗಳ ಬಳಿಕ ಭಾರತ ದಕ್ಷಿಣ ಆಫ್ರಿಕಾ ನೆಲದಲ್ಲಿ ಏಕದಿನ ಆಡಲಿದೆ. ಹೀಗಾಗಿ ರಾಹುಲ್ ಅವರು ಅಂದಿನ ಸೋಲಿಗೆ ಈ ಬಾರಿ ಸೇಡು ತೀರಿಸಿಕೊಳ್ಳಬೇಕಿದೆ.
ಇದನ್ನೂ ಓದಿ IND vs SA: ಪಂದ್ಯ ಗೆದ್ದು ದಕ್ಷಿಣ ಆಫ್ರಿಕಾ ವಿರುದ್ಧ ದಾಖಲೆ ಬರೆದ ಟೀಮ್ ಇಂಡಿಯಾ
5ನೇ ಸ್ಥಾನದಲ್ಲೇ ಕಣಕ್ಕೆ
ಇತ್ತೀಚೆಗೆ ಮುಕ್ತಾಯ ಕಂಡಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕೆ.ಎಲ್ ರಾಹುಲ್ ಅವರು ಕೀಪಿಂಗ್ ಜತೆಗೆ 5ನೇ ಕ್ರಮಾಂಕದಲ್ಲಿ ಆಡಿದ್ದರು. ಇದೀಗ ರಾಹುಲ್ ಇದೇ ಕ್ರಮಾಂಕದಲ್ಲಿ ತಮ್ಮ ಆಟ ಮುಂದುವರಿಸಲಿದ್ದಾರೆ. ಆರಂಭಿಕ ಸ್ಥಾನ ಕಾಲಿ ಇದ್ದರೂ ಕೂಡ ಅವರು ಮಧ್ಯಮ ಕ್ರಮಾಂಕದಲ್ಲೇ ಆಡಲಿದ್ದಾರೆ ಎಂದು ತಿಳಿದುಬಂದಿದೆ. ಜತೆಗೆ ಕೀಪಿಂಗ್ ಕೂಡ ಮಾಡಲಿದ್ದಾರೆ.
ಸಂಜುಗೆ ಆರಂಭಿಕ ಸ್ಥಾನ
ಸರಿಯಾದ ಅವಕಾಶ ಸಿಗದೆ ಬೆಂಚ್ ಕಾಯುತ್ತಿದ್ದ ಕೇರಳದ ಸ್ಟಂಪರ್ ಸಂಜು ಸ್ಯಾಮ್ಸನ್ ಅವರು ಈ ಪಂದ್ಯದಲ್ಲಿ ಭಾರತದ ಇನಿಂಗ್ಸ್ ಆರಂಭಿಸಲಿದ್ದಾರೆ ಎಂದು ಟೀಮ್ ಮೂಲಗಳು ತಿಳಿಸಿವೆ. ಇವರ ಜತೆ ಗಾಯಕ್ವಾಡ್ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ. ಸ್ಪಿನ್ನರ್ ಯಜುವಂದ್ರ ಚಹಲ್ ತಂಡದಲ್ಲಿದ್ದರೂ ಅವರಿಗೆ ಆಡುವ ಬಳಗದಲ್ಲಿ ಅವಕಾಶ ಅನುಮಾನ ಎನ್ನಲಾಗಿದೆ.
ಭಾರತ ಸಂಭಾವ್ಯ ಆಡುವ ಬಳಗ
ಸಂಜು ಸ್ಯಾಮ್ಸನ್, ಋತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ತಿಲಕ್ ವರ್ಮ, ರಿಂಕು ಸಿಂಗ್, ಕೆ.ಎಲ್ ರಾಹುಲ್, ಅಕ್ಷರ್ ಪಟೇಲ್, ಮುಕೇಶ್ ಕುಮಾರ್, ಕುಲ್ದೀಪ್ ಯಾದವ್, ಅರ್ಶದೀಪ್ ಸಿಂಗ್, ಅವೇಶ್ ಖಾನ್.