Site icon Vistara News

Ind vs eng : ಪಾಕ್ ದಾಖಲೆಯನ್ನು ಅಳಿಸಿ ಹಾಕಿದ ಭಾರತ ಟೆಸ್ಟ್​ ತಂಡ

team india

ಬೆಂಗಳೂರು : ಹೈದಾರಾಬಾದ್​ನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದಲ್ಲಿ ಸೋತಾಗ ಇಂಗ್ಲೆಂಡ್​ ತಂಡ ಭಾರತ ತಂಡದ ತವರಿನ ಸರಣಿ (Ind vs eng) ಗೆಲುವಿನ ದಾಖಲೆಯನ್ನು ಮುರಿದು ಹಾಕುತ್ತದೆ ಎಂದು ನಂಬಲಾಗಿತ್ತು. ಆದರೆ, ಆ ಲೆಕ್ಕಾಚಾರ ಸುಳ್ಳಾಗಿದೆ. ಭಾರತವೇ ಸರಣಿ ಗೆದ್ದಿದೆ. ಇನ್ನೂ ಒಂದು ಬಾಕಿ ಇರುವಂತೆಯೇ ಸರಣಿಯನ್ನು 3-1 ಅಂತರದಿಂದ ತನ್ನದಾಗಿಸಿಕೊಂಡಿದೆ.

ಮೊದಲ ಸೋಲಿನ ಬಳಿಕವೂ ಆತ್ಮವಿಶ್ವಾಸ ಕಳೆದುಕೊಳ್ಳದ ಭಾರತ, ಮುಂದಿನ 3 ಪಂದ್ಯಗಳನ್ನೂ ತನ್ನದಾಗಿಸಿಕೊಂಡು ಸ್ಮರಣೀಯ ದಾಖಲೆ ಬರೆದಿದೆ. ಈ ವೇಳೆ ಪಾಕಿಸ್ತಾನ ತಂಡದ ದಾಖಲೆಯೊಂದನ್ನು ಮುರಿದು ಹಾಕಿದೆ. ಈ ಮೂಲಕ ರಾಂಚಿಯಲ್ಲಿ ನಡೆದ ನಾಲ್ಕನೇ ಟೆಸ್ಟ್‌ ಪಂದ್ಯದ ಗೆಲುವು ಇನ್ನಷ್ಟು ವಿಶೇಷವಾಗಿದೆ. ಭಾರತ 2013ರ ನಂತರ ಮೊದಲ ಬಾರಿಗೆ ತವರಿನಲ್ಲಿ 150+ ಸ್ಕೋರ್ ಅನ್ನು ಬೆನ್ನಟ್ಟಿದೆ ಎಂಬುದು ಕೂಡ ವಿಶೇಷವಾಗಿದೆ. ಐದು ವಿಕೆಟ್‌ಗಳ ಗೆಲುವು ತವರಿನಲ್ಲಿ ಭಾರತದ ಗೆಲುವಿನ ಸರಣಿಯನ್ನು 17ಕ್ಕೆ ವಿಸ್ತರಿಸಿತು. ಅಲ್ಲದೆ, ವಿಶ್ವಮಟ್ಟದಲ್ಲಿ ಪಾಕಿಸ್ತಾನ ತಂಡದ ದಾಖಲೆಯನ್ನು ಮುರಿದಿದೆ.

ತವರಿನಲ್ಲಿ ಸತತ ಅತ್ಯಧಿಕ ಸರಣಿಗಳನ್ನು ಗೆದ್ದಿರುವ ದಾಖಲೆಯಲ್ಲಿ ಪಾಕ್ ತಂಡದ ಹೆಸರಲ್ಲಿತ್ತು. ಮಾರ್ಚ್ 1982 ರಿಂದ ನವೆಂಬರ್ 1994 ರವರೆಗೆ ತವರಿನಲ್ಲಿ ಸತತ 16 ಟೆಸ್ಟ್ ಸರಣಿಗಳು ಪಾಕ್​ ಕೈವಶವಾಗಿದ್ದವು. ಇದೀಗ ಭಾರತ ತವರಿನಲ್ಲಿ 2013ರಿಂದ ಈವರೆಗೂ ಸತತ 17ನೇ ಸರಣಿ ಗೆದ್ದು ಪಾಕ್​ ತಂಡವನ್ನು ಹಿಂದಿಕ್ಕಿದೆ. ಆ ಮೂಲಕ 30 ವರ್ಷಗಳ ದಾಖಲೆಯನ್ನು ಅಳಿಸಿ ಹಾಕಿದೆ. ಅಲ್ಲದೆ, ವೆಸ್ಟ್​​ ಇಂಡೀಸ್​ ದಾಖಲೆಗೂ ಬ್ರೇಕ್ ಬಿದ್ದಿದೆ.

ತವರು ನೆಲದಲ್ಲಿ ಸತತ 28 ಟೆಸ್ಟ್ ಸರಣಿಗಳನ್ನು ಗೆದ್ದಿರುವ ಆಸ್ಟ್ರೇಲಿಯಾ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದನ್ನು ಮುರಿಯಲು ಭಾರತ ಇನ್ನಷ್ಟು ಕಾಯಬೇಕು. ಆಸೀಸ್ ನವೆಂಬರ್ 1993 ರಿಂದ ನವೆಂಬರ್ 2008 ರವರೆಗೆ ಟೆಸ್ಟ್​ ಸರಣಿಗಳನ್ನು ಗೆದ್ದಿತ್ತು. ಭಾರತ 1987 ರಿಂದ 1999 ರವರೆಗೆ 14 ಸರಣಿ ಗೆದ್ದಿತ್ತು. 2004 ರಿಂದ 2012 ರವರೆಗೆ ತವರಿನಲ್ಲಿ ಸತತ 14 ಟೆಸ್ಟ್ ಸರಣಿಗಳನ್ನು ಗೆದ್ದಿದೆ. ಭಾರತವು ಈ ಪಟ್ಟಿಯಲ್ಲಿ 3 ಬಾರಿ ಕಾಣಿಸಿಕೊಂಡಿದೆ.

ತವರಿನಲ್ಲಿ ಸತತ ಹೆಚ್ಚು ಸರಣಿ ಗೆದ್ದ ತಂಡಗಳು

ಸರಣಿ ಗೆದ್ದ ಭಾರತ ತಂಡದ ಡಬ್ಲ್ಯುಟಿಸಿ ರ್ಯಾಂಕ್ ಎಷ್ಟು?

ರಾಂಚಿ: ಜೆಎಸ್​​ಸಿಎ ಇಂಟರ್​​ನ್ಯಾಷನಲ್ ಸ್ಟೇಡಿಯಂ ಕಾಂಪ್ಲೆಕ್ಸ್​ನಲ್ಲಿ ನಡೆದ ನಾಲ್ಕನೇ ಟೆಸ್ಟ್​​ನಲ್ಲಿ ಭಾರತವು ಇಂಗ್ಲೆಂಡ್ (ind vs eng) ತಂಡವನ್ನು ಐದು ವಿಕೆಟ್​​ಗಳಿಂದ ಸೋಲಿಸಿ ಐದು ಪಂದ್ಯಗಳ ಸರಣಿಯಲ್ಲಿ 3-1 ಮುನ್ನಡೆ ಸಾಧಿಸಿದೆ. ನಾಲ್ಕನೇ ಇನ್ನಿಂಗ್ಸ್​​ನಲ್ಲಿ ಗೆಲ್ಲಲು 192 ರನ್​ಗಳ ಗುರಿಯನ್ನು ಬೆನ್ನಟ್ಟಿದ ರೋಹಿತ್ ಶರ್ಮಾ ಪಡೆ ಗೆಲುವು ಸಾಧಿಸಿದೆ. ಇದರೊಂದಿಗೆ ಒಂದೂ ಪಂದ್ಯ ಬಾಕಿ ಇರುವಂತೆಯೇ ಸರಣಿ ಗೆದ್ದಿದೆ.

ಇದನ್ನು ಓದಿ : Rohit Sharma : ಹಾರ್ದಿಕ್​ ಪಾಂಡ್ಯ ಬ್ಯಾನರ್​ ಹರಿದು ಹಾಕಿದ ರೋಹಿತ್​ ಶರ್ಮಾ ಅಭಿಮಾನಿಗಳು

ಶುಬ್ಮನ್ ಗಿಲ್ (124 ಎಸೆತಗಳಲ್ಲಿ 52* ರನ್) ಮತ್ತು ಧ್ರುವ್ ಜುರೆಲ್ (77 ಎಸೆತಗಳಲ್ಲಿ 39* ರನ್) ಅಜೇಯ 72 ರನ್​​ಗಳ ಜೊತೆಯಾಟದ ಮೂಲಕ ತಂಡವನ್ನು ಸಂಕಷ್ಟದ ಪರಿಸ್ಥಿತಿಯಿಂದ ಪಾರು ಮಾಡಿದರು. ಈ ಗೆಲುವಿನ ನಂತರ ಭಾರತವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ಡಬ್ಲ್ಯುಟಿಸಿ) ಪಾಯಿಂಟ್ಸ್ ಟೇಬಲ್​ನಲ್ಲಿ ಎಂಟು ಪಂದ್ಯಗಳಿಂದ ಐದು ಗೆಲುವುಗಳೊಂದಿಗೆ 64.58% ಅಂಕಗಳೊಂದಿಗೆ ಎರಡನೇ ಸ್ಥಾನ ಉಳಿಸಿಕೊಂಡಿದೆ.

ಮತ್ತೊಂದೆಡೆ, ಇಂಗ್ಲೆಂಡ್ ಒಂಬತ್ತು ಪಂದ್ಯಗಳಲ್ಲಿ ಮೂರು ಗೆಲುವುಗಳೊಂದಿಗೆ 19.44 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ. ಡಬ್ಲ್ಯುಟಿಸಿಯ ಉದ್ಘಾಟನಾ ಚಾಂಪಿಯನ್ ನ್ಯೂಜಿಲೆಂಡ್ ನಾಲ್ಕು ಪಂದ್ಯಗಳಲ್ಲಿ ಮೂರು ಗೆಲುವುಗಳೊಂದಿಗೆ ಶೇಕಡಾ 75 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.

ಡಬ್ಲ್ಯುಟಿಸಿಯ ಮೊದಲ ಎರಡು ಆವೃತ್ತಿಗಳ ಫೈನಲ್​​ಗೆ ಅರ್ಹತೆ ಪಡೆದ ಭಾರತ, ಫೈನಲ್​​ನಲ್ಲಿ ಕ್ರಮವಾಗಿ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಸೋತು ಟ್ರೋಫಿಯನ್ನು ಎತ್ತಿಹಿಡಿಯುವಲ್ಲಿ ವಿಫಲವಾಯಿತು. ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಸತತ ಮೂರನೇ ಬಾರಿಗೆ ಫೈನಲ್​​ಗೆ ಅರ್ಹತೆ ಪಡೆಯಲು ಮತ್ತು ಅಂತಿಮ ಪಂದ್ಯವನ್ನು ಕೊನೆಗೊಳಿಸಲು ಉತ್ಸುಕವಾಗಿದೆ.

Exit mobile version