ಚೆನ್ನೈ: ಸ್ಟಾರ್ ಬ್ಯಾಟರ್ಗಳಾದ ವಿರಾಟ್ ಕೊಹ್ಲಿ (85) ಹಾಗೂ ಕೆ. ಎಲ್ ರಾಹುಲ್ (ಅಜೇಯ 97) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಮಿಂಚಿದ ಭಾರತ ತಂಡ ವಿಶ್ವ ಕಪ್ನ ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ (Ind vs Aus) ವಿರುದ್ಧ 6 ವಿಕೆಟ್ಗಳ ಸುಲಭ ಜಯ ದಾಖಲಿಸಿತು. ಈ ಮೂಲಕ ತನ್ನ ಆತಿಥ್ಯದಲ್ಲಿ ನಡೆಯುತ್ತಿರುವ ವಿಶ್ವ ಕಪ್ನಲ್ಲಿ ಶುಭಾರಂಭ ಮಾಡಿತು. ಬಲಿಷ್ಠ ತಂಡವನ್ನೇ ಮಣಿಸಿ ಪ್ರಶಸ್ತಿ ಕಡೆಗೆ ಮೊದಲ ಹೆಜ್ಜೆಯನ್ನಿಟ್ಟಿತು.
ಇಲ್ಲಿನ ಚೆಪಾಕ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 49.3 ಓವರ್ಗಳಲ್ಲಿ 199 ರನ್ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ ತಂಡ 41.3 ಓವರ್ಗಳಲ್ಲಿ 201 ರನ್ ಬಾರಿಸಿ ಗೆಲುವು ಸಾಧಿಸಿತು. ಭಾರತ ತಂಡ ಆರಂಭದಲ್ಲಿ 2 ರನ್ಗಳಿಗೆ ಮೂರು ವಿಕೆಟ್ ಕಳೆದುಕೊಳ್ಳುವ ಮೂಲಕ ಆತಂಕಕ್ಕೆ ಒಳಗಾಯಿತು. ಆದರೆ, ಕೊಹ್ಲಿ ಮತ್ತು ರಾಹುಲ್ ಭಾರತ ತಂಡಕ್ಕೆ ಜಯ ತಂದುಕೊಟ್ಟರು.
𝗪ay to kick off the campaign 🇮🇳#AmiIndia #INDvAUS #CWC23 #TeamIndia pic.twitter.com/esFvKmlnHr
— KolkataKnightRiders (@KKRiders) October 8, 2023
ಸಣ್ಣ ಮೊತ್ತವನ್ನು ಬೆನ್ನಟ್ಟಲು ಹೊರಟ ಭಾರತ ತಂಡ 2 ರನ್ಗೆ ಮೂರು ವಿಕೆಟ್ ನಷ್ಟ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಬೇಸರ ಮೂಡಿಸಿತು. ಆರಂಭಿಕರಾದ ಇಶಾನ್ ಕಿಶನ್, ರೋಹಿತ್ ಶರ್ಮಾ ಶೂನ್ಯಕ್ಕೆ ಔಟಾದರೆ ಮೂರನೇ ನಾಲ್ಕನೇ ಕ್ರಮಾಂಕದಲ್ಲಿ ಬಂದ ಶ್ರೇಯಸ್ ಅಯ್ಯರ್ ಕೂಡ ಸೊನ್ನೆ ಸುತ್ತಿದರು. ಈ ವೇಳೆ ಭಾರತ ತಂಡದ ಅಭಿಮಾನಿಗಳಿಗೆ ಸೋಲಿನ ಛಾಯೆ ಕಂಡು ಬಂತು.
ಕೊಹ್ಲಿ- ರಾಹುಲ್ ಜತೆಯಾಟ
ಭಾರತ ತಂಡ ಸಂಕಷ್ಟದಲ್ಲಿದ್ದ ಸಮಯದಲ್ಲಿ ಜತೆಯಾಟದ ಕೊಹ್ಲಿ ಹಾಗೂ ಕೆ. ಎಲ್ ರಾಹುಲ್ ನಿಧಾನವಾಗಿ ಇನಿಂಗ್ಸ್ ಕಟ್ಟಲು ಆರಂಭಿಸಿದರು. ಅವರಿಬ್ಬರೂ ಆರಂಭಿಕ ಮುನ್ನಡೆ ಪಡೆದುಕೊಂಡು ಬೀಗುತ್ತಿದ್ದ ಆಸ್ಟ್ರೇಲಿಯಾ ತಂಡದ ಬೌಲರ್ಗಳನ್ನು ಹಿಮ್ಮೆಟ್ಟಿಸಿ ನಿಧಾನಕ್ಕೆ ರನ್ ಕದಿಯಲು ಆರಂಭಿಸಿದರು. ಅಂತಿಯಮವಾಗಿ ಅವರು 4ನೇ ವಿಕೆಟ್ಗೆ 165 ರನ್ಗಳ ಜತೆಯಾಟ ನೀಡಿದರು. ಈ ಜತೆಯಾಟ ಭಾರತಕ್ಕೆ ಜಯಕ್ಕೆ ಕಾರಣವಾಯಿತು.
ಕೊಹ್ಲಿಗೆ ಜೀವದಾನ
ಇನಿಂಗ್ಸ್ನ 7ನೇ ಓವರ್ನ 3 ಎಸೆತಕ್ಕೆ ಕೊಹ್ಲಿ ಜೀವದಾನ ಪಡೆದದ್ದು ಕೂಡ ಗೆಲುವಿಗೆ ಕಾರಣವಾಯಿತು. ಹೇಜಲ್ವುಡ್ ಅವರ ಶಾರ್ಟ್ಪಿಚ್ ಎಸೆತಕ್ಕೆ ಫುಲ್ಶಾಟ್ ಹೊಡೆಯಲು ಕೊಹ್ಲಿ ಯತ್ನಿಸಿದಾದ ಅವರು ಬ್ಯಾಟ್ನ ಅಂಚಿಗೆ ತಗುಲಿ ಮೇಲಕ್ಕೇರಿತು. ಕೀಪರ್ ಅಲೆಕ್ಸ್ ಕ್ಯೇರಿ ಹಾಗೂ ಶಾನ್ ಮಾರ್ಷ್ ಕ್ಯಾಚ್ ಹಿಡಿಯಲು ಓಡಿ ಬಂದರು. ಅಂತಿಮವಾಗಿ ಮಾರ್ಷ್ ಪ್ರಯತ್ನಪಟ್ಟರೂ ಸುಲಭ ಕ್ಯಾಚ್ ಕೈ ಚೆಲ್ಲಿದರು. 12 ರನ್ ಗಳಿಸಿದ್ದ ಕೊಹ್ಲಿ ಜೀವದಾನ ಪಡೆದರು. ಅಲ್ಲಿಂದ ತಿರುಗಿ ನೋಡದ ಅವರು ಅರ್ಧ ಶತಕ ಬಾರಿಸುವ ಜತೆಗೆ ರಾಹುಲ್ ಜತೆ ಸ್ಮರಣೀಯ ಜತೆಯಾಟವಾಡಿದರು.
First hurdle crossed successfully! Excellent knocks from @klrahul and @imVkohli in challenging conditions. Credit goes to @imjadeja and the rest of our bowling attack for stifling the Aussies. Keeping them down to 199 was a significant achievement. A victorious start to our… pic.twitter.com/Wun2hBHjE0
— Mithali Raj (@M_Raj03) October 8, 2023
ಭಾರತದ ಸ್ಪಿನ್ ವೈಭವ
ಅದಕ್ಕಿಂತ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಭಾರತದ ಸ್ಪಿನ್ ಬೌಲಿಂಗ್ ದಾಳಿಗೆ ತತ್ತರಿಸಿ 199 ರನ್ಗೆ ಆಲ್ಔಟ್ ಆಯಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಬಳಗ ಉತ್ತಮ ಆರಂಭ ಪಡೆದ ಹೊರತಾಗಿಯೂ ನಂತರ ಸತತವಾಗಿ ವಿಕೆಟ್ ಕಳೆದಕೊಂಡು ಸಾಧಾರಣ ಮೊತ್ತಕ್ಕೆ ಇನಿಂಗ್ಸ್ ಮುಗಿಸಿತು. ಭಾರತದ ಸ್ಪಿನ್ನರ್ಗಳಾದ ರವೀಂದ್ರ ಜಡೇಜಾ 3 ವಿಕೆಟ್, ಬುಮ್ರಾ ಹಾಗೂ ಕುಲ್ದೀಪ್ ತಲಾ 2 ವಿಕೆಟ್ ಕಬಳಿಸುವ ಮೂಲಕ ಆಸ್ಟ್ರೇಲಿಯಾದ ಬ್ಯಾಟಿಂಗ್ ಶಕ್ತಿಯನ್ನು ಕುಗ್ಗಿಸಿದರು.
ಇದನ್ನೂ ಓದಿ: Ravindra Jadeja : ಕಪಿಲ್ ದೇವ್ ಬಳಿಕ ಈ ದಾಖಲೆ ಮಾಡಿದ್ದು ರವೀಂದ್ರ ಜಡೇಜಾ ಮಾತ್ರ; ಏನದು ಸಾಧನೆ?
ಆರಂಭಿಕ ಬ್ಯಾಟರ್ ಶಾನ್ ಮಾರ್ಷ್ ಶೂನ್ಯಕ್ಕೆ ಔಟಾಗುವ ಮೂಲಕ ಆಸೀಸ್ ಬಳಗ ಹಿನ್ನಡೆ ಎದುರಿಸಿತು. ವಿರಾಟ್ ಕೊಹ್ಲಿ ಹಿಡಿದ ಅದ್ಭುತ ಕ್ಯಾಚ್ಗೆ ಮಾರ್ಷ್ ಬಲಿಯಾದರು. ಮೊದಲ ವಿಕೆಟ್ ಪತನಗೊಂಡ ಹೊರತಾಗಿಯೂ ಆಸ್ಟ್ರೇಲಿಯಾ ತಂಡ ರನ್ ಗಳಿಕೆ ವೇಗವನ್ನು ಕಡಿಮೆ ಮಾಡಲಿಲ್ಲ. ಡೇವಿಡ್ ವಾರ್ನರ್ ಹಾಗೂ ವೇಗದ ರನ್ ಗಳಿಕಗೆ ಮುಂದಾದರು. ಹೀಗಾಗಿ ಮೊದಲ ಹತ್ತು ಓವರ್ಗಳಲ್ಲಿ 43 ರನ್ ಬಾರಿಸಿತು. ಹೀಗಾಗಿ ಆಸ್ಟ್ರೇಲಿಯಾ ತಂಡ ದೊಡ್ಡ ಮೊತ್ತ ಪೇರಿಸುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಯಿತು. ಈ ವೇಳೆ ಸ್ಪಿನ್ ಕೈಚಳಕ ತೋರಿದ ಕುಲ್ದೀಪ್ ಯಾದವ್ ರಿಟರ್ನ್ ಕ್ಯಾಚ್ ಮೂಲಕ ಡೇವಿಡ್ ವಾರ್ನರ್ ಅವರ ವಿಕೆಟ್ ಪಡೆದರು. ಅಪಾಯಕಾರಿ ಪರಿಣಮಿಸುತ್ತಿದ್ ವಾರ್ನರ್ 41 ರನ್ಗೆ ಔಟಾದರು.ಈ ವೇಳೆ ಆಸ್ಟ್ರೇಲಿಯಾ 74 ರನ್ ಬಾರಿಸಿತು.
ಬಳಿಕ ದಾಳಿಗೆ ಇಳಿದ ಜಡೇಜಾ 46 ರನ್ ಬಾರಿಸಿ ಕ್ರೀಸ್ನಲ್ಲಿ ತಳವೂರಲು ಬಯಸುತ್ತಿದ್ದ ಸ್ಮಿತ್ ವಿಕೆಟ್ ಉರುಳಿಸಿದರು. ಅಲ್ಲದೆ, ಮರ್ನಸ್ ಲಾಬುಶೇನ್ (27) ವಿಕೆಟ್ ಕೂಡ ತಮ್ಮದಾಗಿಸಿಕೊಂಡರು. ಆ ಬಳಿಕ ಬ್ಯಾಟ್ ಮಾಡಲು ಬಂದ ಅಲೆಕ್ಸ್ ಕ್ಯೇರಿಯನ್ನು ಶೂನ್ಯಕ್ಕೆ ಪೆವಿಲಯನ್ ಗೆ ವಾಪಸ್ ಕಳುಹಿಸಿದರು.
ಭಾರತದ ಸ್ಪಿನ್ನರ್ಗಳು ಚೇತರಿಸಿಕೊಳ್ಳುತ್ತಿದ್ದಂತೆ ಆಸ್ಟ್ರೇಲಿಯಾದ ರನ್ ಗಳಿಕೆ ವೇಗ ಕಡಿಮೆಯಾಯಿತು. 140 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಯಿತು. ಆಲ್ರೌಂಡರ್ ಕ್ಯಾಮೆರಾನ್ ಗ್ರೀನ್ ಗೆ (8 ರನ್) ಅಶ್ವಿನ್ ಪೆವಿಲಿಯನ್ ದಾರಿ ತೋರಿದರು. ನಾಯಕ ಪ್ಯಾಟ್ ಕಮಿನ್ಸ್ 15 ರನ್ ಬಾರಿಸಿದರೆ, ಕೊನೆಯಲ್ಲಿ ಮಿಚೆಲ್ ಸ್ಟಾರ್ಕ್ 28 ರನ್ ಬಾರಿಸಿ ತಂಡದ ಮೊತ್ತವನ್ನು 200ರ ಸನಿಹ ತಂದಿಟ್ಟರು.
ಇದನ್ನೂ ಓದಿ : ICC World Cup 2023 : ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ಡೇವಿಡ್ ವಾರ್ನರ್, ಏನಿದು ರೆಕಾರ್ಡ್?
ಭಾರತ ತಂಡದ ಪರ ಬೌಲಿಂಗ್ನಲ್ಲಿ ಜಡೇಜಾ 28 ರನ್ ವೆಚ್ಚದಲ್ಲಿ 3 ವಿಕೆಟ್ ಉರುಳಿಸಿದರೆ, ಜಸ್ಪ್ರಿತ್ ಬುಮ್ರಾ 35 ರನ್ಗಳಿಗೆ 2 ವಿಕೆಟ್ ಪಡೆದರು. ಕುಲ್ದೀಪ್ ಯಾದವ್ 42 ರನ್ಗೆ 2 ವಿಕೆಟ್ ತಮ್ಮದಾಗಿಸಿಕೊಂಡರು.