Site icon Vistara News

WTC Final 2023 : ಭಾರತ ತಂಡದ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್ ಟ್ರೋಫಿ​ ಕನಸು ಎರಡನೇ ಬಾರಿ ಭಗ್ನ!

Australia Cricket Team

#image_title

ಲಂಡನ್​: ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನ ಗೆಲ್ಲುವ ಭಾರತ ತಂಡದ ಆಸೆ ಎರಡನೇ ಬಾರಿ ಕಮರಿ ಹೋಯಿತು. ಇಲ್ಲಿನ ದಿ ಓವಲ್​ ಸ್ಟೇಡಿಯಮ್​​ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 209 ರನ್​ಗಳ ಹೀನಾಯ ಸೋಲು ಅನುಭವಿಸಿದ ಭಾರತ ತಂಡ ನಿರಾಸೆ ಎದುರಿಸಿತು. ಇದರೊಂದಿಗೆ ಆಸ್ಟ್ರೇಲಿಯಾ ತಂಡ ಚೊಚ್ಚಲ ಫೈನಲ್ ಪ್ರವೇಶದಲ್ಲಿಯೇ ಚಾಂಪಿಯನ್​ ಪಟ್ಟ ಅಲಂಕರಿಸಿತು. ಮೂರು ವರ್ಷಗಳ ಅವಧಿಯಲ್ಲಿ ಆಸೀಸ್​ ತಂಡಕ್ಕೆ ಇದು ಎರಡನೇ ಪ್ರಶಸ್ತಿ. 2021ರ ಟಿ20 ವಿಶ್ವ ಕಪ್​ ಈ ತಂಡದ ಪಾಲಾಗಿತ್ತು. ಇತ್ತ ರೋಹಿತ್​ ಶರ್ಮಾ ತಂಡ ಕಳೆ ಬಾರಿಯೂ ಫೈನಲ್​ಗೇರಿ ನ್ಯೂಜಿಲ್ಯಾಂಡ್ ವಿರುದ್ಧ ಸೋತಿದ್ದರೆ ಹಾಲಿ ಆವೃತ್ತಿಯಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಮಣಿಯಿತು.

ಭಾರತ ತಂಡಕ್ಕೆ ಎರಡನೇ ಇನಿಂಗ್ಸ್​​ನಲ್ಲಿಗೆ 444 ರನ್​ಗಳ ಬೃಹತ್​ ಗೆಲುವಿನ ಟಾರ್ಗೆಟ್​ ನೀಡಿತ್ತು ಆಸ್ಟ್ರೇಲಿಯಾ. ಆದರೆ, ಭಾರತ ತಂಡ 234 ರನ್​ಗಳಿಗೆ ಆಲ್​ಔಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು. ಇದರೊಂದಿಗೆ ರೋಹಿತ್​ ಶರ್ಮಾ ಬಳಗ ಮತ್ತೊಂದು ಬಾರಿ ಸೋಲಿನ ಕಹಿಯುಂಡಿತು. ಅದೇ ರೀತಿ ಕಳೆದ 10 ವರ್ಷಗಳಿಂದ ಐಸಿಸಿ ಟ್ರೋಫಿಯ ಬರ ಎದುರಿಸುತ್ತಿರುವ ಭಾರತ ತಂಡಕ್ಕೆ ಮತ್ತೊಂದು ಭಾರಿ ಆಘಾತ ಎದುರಾಯಿತು. ಭಾರತ ತಂಡಕ್ಕೆ ಮುಂದಿನ ಅವಕಾಶ ಏಕ ದಿನ ವಿಶ್ವ ಕಪ್​ 2023.

ನಾಲ್ಕನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್​ ಕಳೆದುಕೊಂಡು 164 ರನ್ ಬಾರಿಸಿದ್ದ ಭಾರತ ಐದನೇ ದಿನದ ಮೊದಲ ಸೆಷನ್​ನಲ್ಲಿಯೇ ಸಂಪೂರ್ಣ ಪತನಗೊಂಡಿತು. ಆಸೀಸ್​ ವೇಗಿಗಳು ಹಾಗೂ ಸ್ಪಿನ್ನರ್ ನೇಥನ್​ ಲಯಾನ್ ಅವರ ಬೌಲಿಂಗ್ ದಾಳಿಗೆ ಭಾರತದ ಬ್ಯಾಟರ್​​ಗಳು ಪತರಗುಟ್ಟಿದರು.

ಗೆಲುವು ತಂದುಕೊಡದ ವಿರಾಟ್​- ರಹಾನೆ

ನಾಲ್ಕನೇ ದಿನದ ಕೊನೇ ಸೆಷನ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ವಿರಾಟ್​ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಭಾರತಕ್ಕೆ ಗೆಲುವು ತಂದುಕೊಡಬಹುದು ಎಂದು ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಅವರಿಬ್ಬರಲ್ಲಿ ಒಬ್ಬರಿಗೂ ಐದನೇ ದಿನ ಹೆಚ್ಚು ಹೊತ್ತು ಆಡಲು ಸಾಧ್ಯವಾಗಲಿಲ್ಲ. ವಿರಾಟ್​ ಕೊಹ್ಲಿ ಶನಿವಾರದ ಮೊತ್ತಕ್ಕೆ ಐದು ರನ್​ ಮಾತ್ರ ಸೇರಿಸಲು ಶಕ್ತಗೊಂಡರು. ಕೇವಲ ಒಂದು ರನ್​ ಕೊರತೆಯೊಂದಿಗೆ ಅರ್ಧ ಶತಕ ಬಾರಿಸುವ ಅವಕಾಶದಿಂದ ವಂಚಿತರಾದರು. ಸ್ಕಾಟ್​ ಬೋಲ್ಯಾಂಡ್ ಅವರ ವೇಗದ ಎಸೆತಕ್ಕೆ ಅವರು ಸ್ಮಿತ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಬಳಿಕ ಆಡಲು ಬಂದ ರವೀಂದ್ರ ಜಡೇಜಾ ಕೂಡ ಬೋಲ್ಯಾಂಡ್ ಎಸೆತಕ್ಕೆ ವಿಕೆಟ್​ ಕೀಪರ್​ ಅಲೆಕ್ಸ್​ ಕ್ಯೇರಿಗೆ ಕ್ಯಾಚ್ ನೀಡಿ ಔಟಾದರು. ಅಲ್ಲಿಗೆ ಭಾರತ ತಂಡ ಆಸೆ ಕಮರಿ ಹೋಯಿತು.

108 ಎಸೆತಗಳನ್ನು ಎದುರಿಸಿ 46 ರನ್ ಬಾರಿಸಿದ್ದ ಅಜಿಂಕ್ಯ ರಹಾನೆ ಸ್ಟಾರ್ಕ್​ ಎಸೆತಕ್ಕೆ ವಿಕೆಟ್​ಕೀಪರ್​ಗೆ ಕ್ಯಾಚ್​ ನೀಡಿ ನಿರ್ಗಮಿಸುವುದರೊಂದಿಗೆ ಭಾರತದ ಗೆಲುವಿನ ಆಸೆ ಇಲ್ಲದಾಯಿತು. ವಿಕೆಟ್​ ಕೀಪರ್​ ಕೆ. ಎಸ್​ ಭರತ್​ 23 ರನ್​ ಬಾರಿಸಿದರೆ ಉಮೇಶ್ ಯಾದವ್ 1 ರನ್​ ಗಳಿಸಿದರು. ಮೊಹಮ್ಮದ್ ಶಮಿ 13 ರನ್ ಗಳಿಸಿದರು.

ಇದನ್ನೂ ಓದಿ : IPL 2023 : ಆರ್​ಸಿಬಿ ಸೋಲುತ್ತಿದ್ದಂತೆ ವಿರಾಟ್ ಕೊಹ್ಲಿಯನ್ನು ಅಪಹಾಸ್ಯ ಮಾಡಿದ ನವಿನ್​ ಉಲ್ ಹಕ್​!

ಆಸ್ಟ್ರೇಲಿಯಾ ಬೌಲಿಂಗ್ ದಾಳಿಯ ಪರ ಸ್ಕಾಟ್ ಬೋಲ್ಯಾಂಡ್​ 46 ರನ್​ ನೀಡಿ 3 ವಿಕೆಟ್​ ಕಬಳಿಸಿದರೆ, ಸ್ಪಿನ್ನರ್ ನೇಥನ್ ಲಯಾನ್​ 41ಕ್ಕೆ 4 ರನ್ ಪೇರಿಸಿದರು. ಮಿಚೆಲ್​ ಸ್ಟಾರ್ಕ್​ 2 ವಿಕೆಟ್ ಹಾಗೂ ಪ್ಯಾಟ್​ ಕಮಿನ್ಸ್​ 1 ವಿಕೆಟ್ ತಮ್ಮದಾಗಿಸಿಕೊಂಡರು.

Exit mobile version