ಲಕ್ನೋ: ಇಂಗ್ಲೆಂಡ್(IND vs ENG) ವಿರುದ್ಧದ ಪಂದ್ಯ ಆರಂಭಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಹೀಗಿರುವಾಗಲೇ ಭಾರತ ತಂಕ್ಕೆ ದೊಡ್ಡ ಆಘಾತವೊಂದು ಎದುರಾಗಿದೆ. ತಂಡದ ನಾಯಕ ರೋಹಿತ್ ಶರ್ಮ(Rohit Sharma injury) ಅವರು ಗಾಯಗೊಂಡಿದ್ದು ಈ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನ(Rohit Sharma likely to miss) ಎನ್ನಲಾಗಿದೆ.
ಈಗಾಗಲೇ ಉಪನಾಯಕ ಹಾರ್ದಿಕ್ ಪಾಂಡ್ಯ ಅವರು ಗಾಯಗೊಂಡು ತಂಡದಿಂದ ಹೊರಗುಳಿದ್ದಾರೆ. ಇದರ ಬೆನಲ್ಲೇ ನಾಯಕ ರೋಹಿತ್ಗೂ ಗಾಯವಾಗಿರುವುದು ಟೀಮ್ ಇಂಡಿಯಾದ ಅಭಿಮಾನಿಗಳಿಗೆ ಆತಂಕ ಉಂಟುಮಾಡಿದೆ.
ರೋಹಿತ್ ಅವರು ನೆಟ್ಸ್ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದಾಗ ಕೈಗೆ ಚೆಂಡು ಬಡಿದು ಗಾಯವಾಗಿದೆ ಎಂದು ತಂಡದ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. ಗಾಯಗೊಂಡ ರೋಹಿತ್ಗೆ ಕೂಡಲೇ ಫಿಸಿಯೋ ಮೈದಾನಕ್ಕೆ ಬಂದು ಚಿಕಿತ್ಸೆ ನೀಡಿದ್ದಾರೆ. ಆ ಬಳಿಕ ರೋಹಿತ್ ಅಭ್ಯಾಸವನ್ನು ಮೊಟಕುಗೊಳಿಸಿದ್ದಾರೆ ಎನ್ನಲಾಗಿದೆ. ಸದ್ಯ ರೋಹಿತ್ ಗಾಯ ಗಂಭೀರವಾಗಿದೆಯೇ ಎಂದು ಇನ್ನಷ್ಟೇ ತಿಳಿದು ಬರಬೇಕಿದೆ. ಅವರ ಅಲಭ್ಯತೆಯ ಬಗ್ಗೆ ಬಿಸಿಸಿಐ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಒಂದೊಮ್ಮೆ ರೋಹಿತ್ ಅವರು ಈ ಪಂದ್ಯದಿಂದ ಹೊರಗಳಿದರೆ ಅವರ ಅನುಪಸ್ಥಿತಿಯಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಅವರು ತಂಡವನ್ನು ಮುನ್ನಡೆಸಲಿದ್ದಾರೆ. ರೋಹಿತ್ ಸ್ಥಾನದಲ್ಲಿ ಇಶಾನ್ ಕಿಶನ್ ಅವರು ಶುಭಮನ್ ಗಿಲ್ ಜತೆ ಇನಿಂಗ್ಸ್ ಆರಂಭಿಸಬಹುದು. ಇಶಾನ್ ಆರಂಭಿಕ ಆಟಗಾರನಾಗಿರುವ ಕಾರಣ ಮತ್ತು ಇದಕ್ಕೂ ಮುನ್ನ ಗಿಲ್ ಅವರು ಡೆಂಗ್ಯೂ ಕಾರಣದಿಂದ 2 ಪಂದ್ಯದಿಂದ ಹೊರಗುಳಿದಿದ್ದಾಗ ಇಶಾನ್ ಅವರು ಇನಿಂಗ್ಸ್ ಆರಂಭಿಸಿದ್ದರು.
ಇದನ್ನೂ ಓದಿ IND vs ENG: ಭಾರತ-ಇಂಗ್ಲೆಂಡ್ ವಿಶ್ವಕಪ್ ದಾಖಲೆಯೇ ಬಲು ರೋಚಕ
ಸಿರಾಜ್ಗೆ ವಿಶ್ರಾಂತಿ ಸಾಧ್ಯತೆ
ಲಕ್ನೋ ಪಿಚ್ ಸ್ಪಿನ್ನರ್ಗಳಿಗೆ ಹೆಚ್ಚು ನೆರವು ನೀಡಲಿದೆ. ಹಾಗಾಗಿ ಭಾರತದ ಮೂವರು ವೇಗಿಗಳ ಪೈಕಿ ಒಬ್ಬರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಆರ್. ಅಶ್ವಿನ್ (R Ashwin) ಅವರನ್ನು ಆಯ್ಕೆ ಮಾಡಿ ಸಿರಾಜ್ ಅವರನ್ನು ಈ ಪಂದ್ಯದಿಂದ ಕೈಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ. ಕಳೆದ ಪಂದ್ಯದಲ್ಲಿ 5 ವಿಕೆಟ್ ಕಿತ್ತು ಮಿಂಚಿದ ಮೊಹಮ್ಮದ್ ಶಮಿ(Mohammed Shami) ಈ ಪಂದ್ಯದಲ್ಲಿಯೂ ಆಡುವುದು ಖಚಿತ. ಹೀಗಾಗಿ ಸಿರಾಜ್ ಹೊರಗುಳಿಯಲಿದ್ದಾರೆ.
ಸೂರ್ಯಕುಮಾರ್ಗೆ ಮತ್ತೊಂದು ಅವಕಾಶ
ಪಾದದ ಗಾಯಕ್ಕೆ ತುತ್ತಾದ ಹಾರ್ದಿಕ್ ಪಾಂಡ್ಯ ಅವರು ಈ ಪಂದ್ಯಕ್ಕೂ ಅಲಭ್ಯರಾದ ಕಾರಣ ಸೂರ್ಯಕುಮಾರ್ ಯಾದವ್ ಅವರು ಆಡುವುದು ಖಚಿತ. ಕಳೆದ ಪಂದ್ಯದಲ್ಲಿ ಅವರು ಆಡಿದರೂ ರನೌಟ್ ಆಗಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಎಡವಿದ್ದರು. ಕಳೆದ ಪಂದ್ಯದ ವೈಫಲ್ಯಕ್ಕೆ ಈ ಪಂದ್ಯದಲ್ಲಿ ಸಿಡಿಯುವ ನಿರೀಕ್ಷೆಯಲ್ಲಿದ್ದಾರೆ. ಶಾರ್ದೂಲ್ ಠಾಕೂರ್ ಆಲ್ರೌಂಡರ್ (Hardik Pandya) ಆಗಿದ್ದರೂ, ಅವರು ಈ ಹಿಂದಿನ ಪಂದ್ಯಗಳಲ್ಲಿ ಸಂಪೂರ್ಣ ವೈಫಲ್ಯ ಕಂಡಿದ್ದರು. ಹೀಗಾಗಿ ಅವರಿಗೆ ಜಾಗ ಸಿಗುವುದು ಕಷ್ಟ.
ಸಂಭಾವ್ಯ ತಂಡ
ಭಾರತ: ರೋಹಿತ್ ಶರ್ಮಾ/ ಇಶಾನ್ ಕಿಶನ್, ಶುಭಮನ್ ಗಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಆರ್ ಅಶ್ವಿನ್. ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ.
ಇಂಗ್ಲೆಂಡ್: ಜಾನಿ ಬೇರ್ಸ್ಟೋ, ಡೇವಿಡ್ ಮಲಾನ್, ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್, ಲಿಯಾಮ್ ಲಿವಿಂಗ್ಸ್ಟೋನ್, ಸ್ಯಾಮ್ ಕರ್ರನ್, ಕ್ರಿಸ್ ವೋಕ್ಸ್ / ಡೇವಿಡ್ ವಿಲ್ಲಿ, ಆದಿಲ್ ರಶೀದ್, ಮಾರ್ಕ್ ವುಡ್, ರೀಸ್ ಟಾಪ್ಲೆ.