Site icon Vistara News

ASIA CUP | ಇಂಡೋ- ಪಾಕ್‌ ಕದನದ ಟಿಕೆಟ್‌ ಬ್ಲ್ಯಾಕ್‌ನಲ್ಲಿ ಮಾರಾಟ!

Team india

ದುಬೈ: ಆಗಸ್ಟ್‌ 28 ರಂದು ಯುಎಇನಲ್ಲಿ ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ASIA CUP ಹಣಾಹಣಿಯ ಟಿಕೆಟ್‌ಗೆ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಯಾಗಿದೆ. ಹೈವೋಲ್ಟೇಜ್‌ ಪಂದ್ಯವನ್ನು ವೀಕ್ಷಿಸಲು ಕಾಯುತ್ತಿದ್ದ ಉಭಯ ದೇಶಗಳ ಕ್ರಿಕೆಟ್‌ ಪ್ರೇಮಿಗಳು ಆಗಸ್ಟ್‌ 15ರಂದು ಟಿಕೆಟ್‌ ವಿತರಣೆ ಆರಂಭಗೊಳ್ಳುತ್ತಿದ್ದಂತೆ ತಮಗೆ ಬೇಕಾದಷ್ಟು ಕ್ರಿಕೆಟ್‌ ಖರೀದಿ ಮಾಡಿಟ್ಟುಕೊಂಡಿದ್ದಾರೆ. ಈ ನಡುವೆ ಟಿಕೆಟ್‌ ಸಿಗದ ಕೆಲವರು ಆನ್‌ಲೈನ್‌ನಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಹೇಗಾದರೂ ಮಾಡಿ ಟಿಕೆಟ್‌ ಪಡೆಯಲು ಯತ್ನಿಸುತ್ತಿದ್ದಾರೆ. ಏತನ್ಮಧ್ಯೆ, ಟಿಕೆಟ್‌ಗೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬ್ಲ್ಯಾಕ್‌ ಟಿಕೆಟ್‌ ಮಾರಾಟಗಾರರು ಚುರುಕಾಗಿದ್ದಾರೆ. ನಾನಾ ಮಾರ್ಗಗಳ ಮೂಲಕ ಪಂದ್ಯದ ಟಿಕೆಟ್ ಖರೀದಿ ಮಾಡಿ ಇದೀಗ ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿದ್ದಾರೆ.

ಬ್ಲ್ಯಾಕ್‌ ಟಿಕೆಟ್‌ಗಳು ಕೆಲವೊಂದು ವೆಬ್‌ಸೈಟ್‌ಗಳ ಮೂಲಕ ಸಿಗುತ್ತಿವೆ. ಟಿಕೆಟ್‌ಗಾಗಿ ಹುಡುಕುತ್ತಾ ಆನ್‌ಲೈನ್‌ ಮೂಲಕ ಹುಡುಕಾಟ ನಡೆಸುವವರನ್ನು ಗುರಿಯಾಗಿಸಿಕೊಂಡು ಹೆಚ್ಚು ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಈ ಬೆಳವಣಿಗೆ ಆಯೋಜಕರನ್ನು ಚಿಂತೆಗೀಡು ಮಾಡಿದೆ.

ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯವೆಂದರೆ ವಿಶ್ವ ಕ್ರಿಕೆಟ್‌ನ ಪ್ರಬಲ ಪೈಪೋಟಿಯ ಪಂದ್ಯ. 2021ರಲ್ಲಿ ದುಬೈನ ಸ್ಟೇಡಿಯಮ್‌ನಲ್ಲಿ ನಡೆದ ಭಾರತ- ಪಾಕ್‌ ಹಣಾಹಣಿಯ ವೇಳೆಯೂ ಭಾರೀ ಪ್ರಮಾಣದಲ್ಲಿ ಪ್ರೇಕ್ಷಕರು ಹಾಜರಿದ್ದರು. ಆದರೆ, ಆ ಪಂದ್ಯದಲ್ಲಿ ಭಾರತ ತಂಡ ೧೦ ವಿಕೆಟ್‌ಳಿಂದ ಹೀನಾಯವಾಗಿ ಸೋತ್ತಿತ್ತು. ಅದೇ ಕ್ರೀಡಾಂಗಣದಲ್ಲಿ ಮತ್ತೆ ಎರಡೂ ತಂಡಗಳು ಮುಖಾಮುಖಿಯಾಗುತ್ತಿದ್ದು, ಭಾರತ ಹಿಂದಿನ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದೆ. ಹೀಗಾಗಿ ಜಿದ್ದಾಜಿದ್ದಿನ ಹೋರಾಟ ನಿರೀಕ್ಷೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್‌ಗೆ ಬೇಡಿಕೆ ಹೆಚ್ಚಾಗಿದೆ.

ಆಯೋಜಕರ ಎಚ್ಚರಿಕೆ

ಬ್ಲ್ಯಾಕ್‌ನಲ್ಲಿ ಟಿಕೆಟ್‌ ಮಾರಾಟ ಮಾಡುತ್ತಿರುವ ವಿಷಯ ಅರಿತಿರುವ ಆಯೋಜಕರು ಅಂಥ ಟಿಕೆಟ್‌ಗಳನ್ನು ಯಾವ ಕಾರಣಕ್ಕೂ ಖರೀದಿ ಮಾಡದಂತೆ ಕ್ರಿಕೆಟ್ ಪ್ರೇಮಿಗಳಿಗೆ ಸೂಚನೆ ನೀಡಿದೆ. ವೆಬ್‌ತಾಣಗಳ ಮೂಲಕ ಸೆಕೆಂಡ್ ಹ್ಯಾಂಡ್‌ ಟಿಕೆಟ್‌ಗಳನ್ನು ಖರೀದಿ ಮಾಡಿದರೆ ಅದನ್ನು ಮಾನ್ಯ ಮಾಡುವುದಿಲ್ಲ. ಅಂಥ ಟಿಕೆಟ್‌ಗಳನ್ನು ಹಿಡಿದುಕೊಂಡು ಸ್ಟೇಡಿಯಮ್‌ಗೆ ಬಂದರೆ ಹಣ ನಷ್ಟವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ | IND vs WI T20 | ಟಿ20 ಸರಣಿ ವಶಪಡಿಸಿಕೊಳ್ಳಲು ರೆಡಿಯಾಗಿದೆ ಟೀಮ್ ಇಂಡಿಯಾ

Exit mobile version