ಅಹಮದಾಬಾದ್: ವಿಶ್ವಕಪ್ ಟೂರ್ನಿಗೆ(ICC World Cup 2023) ಇನ್ನೂ ಮೂರು ತಿಂಗಳುಗಳ ಕಾಲಾವಕಾಶವಿದೆ. ಆದರೆ ಅಭಿಮಾನಿಗಳಲ್ಲಿ ಕುತೂಹಲ ಈಗಿಂದಲೇ ಕಾವೇರಿದೆ. ಅದರಲ್ಲೂ ಭಾರತ ಮತ್ತು ಪಾಕ್ ನಡುವಿನ(India Vs Pakistan) ಹೈವೋಲ್ಟೆಜ್ ಕದನ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಉಭಯ ತಂಡಗಳ ಪಂದ್ಯ ಅಕ್ಟೋಬರ್ 15ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ(Narendra Modi stadium in Ahmedabad) ನಡೆಯಲಿದೆ. ಈ ಪಂದ್ಯ ಆರಂಭಕ್ಕೂ ಮುನ್ನವೇ ಅಹಮದಾಬಾದ್ನಲ್ಲಿ ಹೋಟೆಲ್ ಬುಕ್ಕಿಂಗ್ಗೆ ಜನರು ಮುಗಿಬೀಳುತ್ತಿದ್ದು. ದರಗಳು ಗಗನಕ್ಕೇರಿದೆ.
ಟೂರ್ನಿಯ ವೇಳಾಪಟ್ಟಿ ಪ್ರಕಟಕ್ಕೂ ಮುನ್ನ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಯಾವುದೇ ಕಾರಣಕ್ಕೂ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ಆಡುವುದಿಲ್ಲ ಎಂದು ಪಟ್ಟು ಹಿಡಿದಿತ್ತು. ಇದೇ ವಿಚಾರವಾಗಿ ಪಾಕ್ ಮನವೊಲಿಸಲು ಐಸಿಸಿಯ ಅಧಿಕಾರಿಗಳು ಪಾಕ್ ಪ್ರವಾಸ ಮಾಡಿದ್ದರು. ಇದೇ ವೇಳೆ ಯಶಸ್ವಿ ಸಂಧಾನ ನಡೆಸಿದ್ದರು. ಪಾಕ್ ಅಂತಿಮವಾಗಿ ಮೋದಿ ಸ್ಟೇಡಿಯಂನಲ್ಲಿ ಆಡುವುದಾಗಿ ಒಪ್ಪಿಕೊಂಡಿತು.
ಭಾರತ ಮತ್ತು ಪಾಕ್ ಪಂದ್ಯದ ಟಿಕೆಟ್ ಮಾರಾಟ ಆರಂಭಕ್ಕೂ ಮುನ್ನವೇ ಇದೀಗ ಅಹಮದಾಬಾದ್ನ ಹೋಟೆಲ್‌ಗಳು ಬುಕ್ಕಿಂಗ್ ಭರದಿಂದ ಸಾಗುತ್ತಿದೆ ಎಂದು ಇಲ್ಲಿನ ಹೋಟೆಲ್ ಅಸೋಸಿಯೇಶನ್ನ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಜತೆಗೆ ಹೋಟೆಲ್ ದರವೂ ಅಧಿಕಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಸದ್ಯ ಮಾಹಿತಿ ಪ್ರಕಾರ ಶೇ.10ರಷ್ಟು ದರ ಏರಿಕೆಯಾಗಿದೆ ಎಂದು ತಿಳಿದುಬಂದಿದೆ. ಕೆಲವು ಹೋಟೆಲ್‌ಗಳು ಸುಮಾರು 1 ಲಕ್ಷ ರೂ.ಗಳನ್ನು ವಿಧಿಸುತ್ತಿವೆ. ಆದರೂ ಹೆಚ್ಚಿನವು ಈಗಾಗಲೇ ಬುಕ್ಕಿಂಗ್ ಆಗಿದೆ ಎಂದು ವರದಿಯಾಗಿದೆ. ಸಾಮಾನ್ಯ ದಿನಗಳಲ್ಲಿ ನಗರದಲ್ಲಿ ಐಷಾರಾಮಿ ಹೋಟೆಲ್‌ಗಳ ದರ 5ರಿಂದ 8 ಸಾವಿರ ಇರುತ್ತದೆ. ಆದರೆ ಭಾರತ ಮತ್ತು ಪಾಕ್ ಪಂದ್ಯ ನಡೆಯುವ ಅಕ್ಟೋಬರ್ 15ರಂದು ದರ 40,000 ರೂ.ಗೆ ಜಿಗಿದಿದೆ ಎಂದು ತಿಳಿದುಬಂದಿದೆ.
ಪಾಕ್ ವಿರುದ್ಧ ಏಕದಿನ ವಿಶ್ವ ಕಪ್ನಲ್ಲಿ ಭಾರತ ಅಜೇಯ
ವಿಶ್ವಕಪ್ ಇತಿಹಾಸದಲ್ಲಿ ಭಾರತ-ಪಾಕಿಸ್ತಾನ ತಂಡಗಳದ್ದೇ ಒಂದು ಪ್ರತ್ಯೇಕ ಇತಿಹಾಸ! ಬಗೆದಷ್ಟೂ ರೋಚಕ ಅಂಕಿಅಂಶ, ಘಟನಾವಳಿ, ರೋಮಾಂಚನ ಹಾಗೂ ಉದ್ವೇಗದ ಕ್ಷಣಗಳು ಉಕ್ಕಿ ಬರುತ್ತವೆ. ಇವುಗಳಲ್ಲಿ ಪ್ರಮುಖವಾದುದೆಂದರೆ, ಪಾಕಿಸ್ಥಾನ ವಿರುದ್ಧದ ಏಕದಿನ ವಿಶ್ವಕಪ್ ಮುಖಾಮುಖೀಯಲ್ಲಿ ಭಾರತ ಸೋಲರಿಯದ ಸರದಾರನಾಗಿ ಮೆರೆದಿರುವುದು. ಈ ಪ್ರತಿಷ್ಠಿತ ಕೂಟದಲ್ಲಿ ಆಡಿದ ಏಳೂ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನವನ್ನು ಮಣ್ಣುಮುಕ್ಕಿಸಿದೆ!. ಇದೀಗ ಎಂಟನೇ ಮುಖಾಮುಖಿಯಲ್ಲಿಯೂ ಅದರಲ್ಲೂ 7 ವರ್ಷಗಳ ಬಳಿಕ ತವರಿನಲ್ಲಿ ಮತ್ತೊಮ್ಮೆ ಸೋಲಿನ ಪಂಚ್ ನೀಡಲು ಭಾರತ ಸಜ್ಜಾಗಿದೆ. ಆದರೆ ಪಾಕ್ ಸವಾಲನ್ನು ಅಷ್ಟು ಸುಲಭವಾಗಿ ಕಡೆಗಣಿಸುವಂತಿಲ್ಲ.
ಇದನ್ನೂ ಓದಿ ICC World Cup 2023: 9 ಪಂದ್ಯಗಳಿಗಾಗಿ 8,400 ಕಿ.ಮೀ. ಸಂಚಾರ ಮಾಡಲಿದೆ ಭಾರತ ತಂಡ
ಏಳು ಬಾರಿ ವಿಶ್ವ ಕಪ್ ಮುಖಾಮುಖಿ
ಭಾರತ ಮತ್ತು ಪಾಕ್ ಮೊದಲ ಬಾರಿಗೆ ಮಿಶ್ವ ಕಪ್ನಲ್ಲಿ ಮುಖಾಮುಖಿಯಾಗಿದ್ದು 1992ರಲ್ಲಿ ಆ ಬಳಿಕ 1996, 1999, 2003, 2011, 2015, 2019 ಈ ಎಲ್ಲ ಮುಖಾಮುಳಿಯಲ್ಲಿಯೂ ಭಾರತ ಗೆಲುವು ಸಾಧಿಸಿದೆ.
ಭಾರತ ಪಂದ್ಯದ ಸಂಪೂರ್ಣ ವೇಳಾಪಟ್ಟಿ
ಭಾರತ vs ಆಸ್ಟ್ರೇಲಿಯಾ- 8 ಅಕ್ಟೋಬರ್, ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ
ಭಾರತ vs ಅಫಘಾನಿಸ್ತಾನ- 11 ಅಕ್ಟೋಬರ್, ಅರುಣ್ ಜೇಟ್ಲಿ ಕ್ರೀಡಾಂಗಣ, ದೆಹಲಿ
ಭಾರತ vs ಪಾಕಿಸ್ತಾನ- 15 ಅಕ್ಟೋಬರ್, ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್
ಭಾರತ vs ಬಾಂಗ್ಲಾದೇಶ- 19 ಅಕ್ಟೋಬರ್, ಎಂಸಿಎ ಸ್ಟೇಡಿಯಂ, ಪುಣೆ
ಭಾರತ vs ನ್ಯೂಜಿಲ್ಯಾಂಡ್- 22 ಅಕ್ಟೋಬರ್, HPCA ಸ್ಟೇಡಿಯಂ, ಧರ್ಮಶಾಲಾ
ಭಾರತ vs ಇಂಗ್ಲೆಂಡ್- 29 ಅಕ್ಟೋಬರ್, ಏಕನಾ ಕ್ರಿಕೆಟ್ ಸ್ಟೇಡಿಯಂ, ಲಕ್ನೋ
ಭಾರತ vs ಕ್ವಾಲಿಫೈಯರ್ 2- 2 ನವೆಂಬರ್, ವಾಂಖೆಡೆ ಸ್ಟೇಡಿಯಂ, ಮುಂಬೈ
ಭಾರತ vs ದಕ್ಷಿಣ ಆಫ್ರಿಕಾ- 5 ನವೆಂಬರ್, ಈಡನ್ ಗಾರ್ಡನ್ಸ್, ಕೋಲ್ಕತ್ತಾ
ಭಾರತ vs ಕ್ವಾಲಿಫೈಯರ್ 1- 11 ನವೆಂಬರ್, ಎಂ. ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು