ಇಂದೋರ್ : ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿಯ (INDvsAUS) ಮೂರನೇ ಪಂದ್ಯ ಕುತೂಹಲದ ಘಟ್ಟಕ್ಕೆ ತಲುಪಿದೆ. ಪಂದ್ಯದ ಎರಡನೇ ದಿನವಾದ ಗುರುವಾರದ (ಮಾರ್ಚ್ 2) ಆಟ ಮುಕ್ತಾಯದ ವೇಳೆಗೆ ಭಾರತ ತಂಡ ಎರಡನೇ ಇನಿಂಗ್ಸ್ನಲ್ಲಿ 163 ರನ್ಗಳಿಗೆ ಆಲ್ಔಟ್ ಆಗಿದೆ. ಪ್ರವಾಸಿ ಆಸ್ಟ್ರೇಲಿಯಾ ತಂಡದ ಗೆಲುವಿಗೆ 75 ರನ್ಗಳು ಬೇಕಾಗಿದೆ. ಇನ್ನೂ ಮೂರು ದಿನಗಳ ಪಂದ್ಯ ಬಾಕಿ ಉಳಿದಿದ್ದು ಆಸ್ಟ್ರೇಲಿಯಾ ಬಳಗದ ಗೆಲವು ಖಚಿತಗೊಂಡಿದೆ.
ಇಲ್ಲಿ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದ ಮೊದಲ ದಿನದ ಮುಕ್ತಾಯದ ವೇಳೆಗೆ ಭಾರತ ತಂಡ ಪೇರಿಸಿದ್ದ 109 ರನ್ಗಳಿಗೆ ಪ್ರತಿಯಾಗಿ ಬ್ಯಾಟ್ ಮಾಡಿದ್ದ ಪ್ರವಾಸಿ ಬಳಗ ದಿನದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 156 ರನ್ ಗಳಿಸಿತ್ತು. ಆದರೆ, ಗುರುವಾರ ಬೆಳಗ್ಗಿನ ಅವಧಿಯಲ್ಲಿ ಭಾರತದ ಬೌಲರ್ಗಳಾದ ರವೀಂದ್ರ ಜಡೇಜಾ ಹಾಗೂ (78 ರನ್ಗಳಿಗೆ 4 ವಿಕೆಟ್) ಹಾಗೂ ಉಮೇಶ್ ಯಾದವ್ (12 ರನ್ಗಳಿಗೆ ವಿಕೆಟ್) ಹಾಗೂ ರವಿಚಂದ್ರನ್ ಅಶ್ವಿನ್ (44 ರನ್ಗಳಿಗೆ 3 ವಿಕೆಟ್) ಪಾರಮ್ಯ ಸಾಧಿಸಿದರು. ಮೊದಲ ದಿನದ ಮೊತ್ತಕ್ಕೆ 41 ರನ್ ಪೇರಿಸಿ ಆಸ್ಟ್ರೇಲಿಯಾ ತಂಡ ಆಲ್ಔಟ್ ಅಯಿತು.
ಇದನ್ನೂ ಓದಿ : IND VS AUS: ಮೂರನೇ ಟೆಸ್ಟ್ನಲ್ಲಿ ಹಿಡಿತ ಸಾಧಿಸಿದ ಆಸ್ಟ್ರೇಲಿಯಾ; ಸದ್ಯ 47 ರನ್ಗಳ ಮುನ್ನಡೆ
88 ರನ್ಗಳ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡದ ಪರಿಸ್ಥಿತಿಯೂ ಭಿನ್ನವಾಗಿರಲಿಲ್ಲ. ನೇಥನ್ ಲಿಯಾನ್ (64 ರನ್ಗಳಿಗೆ 8 ವಿಕೆಟ್) ಮಾರಕ ಸ್ಪಿನ್ಗೆ ಭಾರತ ಬ್ಯಾಟರ್ಗಳು ತಲೆದೂಗಿದರು. ಚೇತೇಶ್ವರ್ ಪೂಜಾರ (59) ಅರ್ಧ ಶತಕ ಬಾರಿಸಿ ಮಿಂಚಿದರು. ಶ್ರೇಯಸ್ ಅಯ್ಯರ್ (26) ಸ್ವಲ್ಪ ಹೊತ್ತು ಬ್ಯಾಟ್ ಮಾಡಿದರೂ ತಂಡಕ್ಕೆ ದೊಡ್ಡ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ.
ಗಿಲ್ ಮತ್ತೆ ಫೇಲ್
ಕೆ ಎಲ್ ರಾಹುಲ್ ಬದಲಿಗೆ ಸ್ಥಾನ ಪಡೆದುಕೊಂಡಿದ್ದ ಶುಭ್ಮನ್ ಗಿಲ್ ಎರಡನೇ ಇನಿಂಗ್ಸ್ನಲ್ಲೂ ಫ್ರಭಾವ ಬೀರಲಿಲ್ಲ. ಅವರು ಐದು ರನ್ಗಳಿಗೆ ಔಟಾದರೆ, ನಾಯಕ ರೋಹಿತ್ ಶರ್ಮಾ 12 ರನ್ಗೆ ಆಟ ಮುಗಿಸಿದರು. ವಿರಾಟ್ ಕೊಹ್ಲಿ (13) ಬೇಗನೆ ಔಟಾದರು. ಜಡೇಜಾ ವಿಕೆಟ್ 7 ರನ್ಗೆ ಔಟಾದರು. ಶ್ರೀಕರ್ ಭರತ್ 3 ರನ್ ಬಾರಿಸಿ ಪೆವಿಲಿಯನ್ಗೆ ಮರಳಿದರು. ಅಶ್ವಿನ್ ಹಾಗೂ ಅಕ್ಷರ್ ಪಟೇಲ್ ಕ್ರಮವಾಗಿ 16 ಹಾಗೂ 15 ರನ್ ಬಾರಿಸಿದರು.