ಲಂಡನ್: ಭಾರತ ಹಾಗೂ ಇಂಗ್ಲೆಂಡ್ (IND vs ENG ODI) ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ವೇಗಿಗಳ ದಾಳಿಗೆ ಇಂಗ್ಲೆಂಡ್ ತತ್ತರಿಸಿದೆ. ಜಸ್ಪ್ರಿತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ಮಾರಕ ಬೌಲಿಂಗ್ ನಡೆಸಿದ್ದು, ೧೧೦ ರನ್‌ಗೆ ಇಂಗ್ಲೆಂಡ್ ಆಲೌಟ್ ಆಗಿದೆ. ಇದು ಭಾರತದ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಗಳಿಸಿದ ಕನಿಷ್ಠ ಮೊತ್ತವಾಗಿದೆ.
ಕೆನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ತಂಡವು ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಭಾರತದ ವೇಗದ ಬೌಲರ್ ಬುಮ್ರಾ ತಾವೆಸೆದ ಮೊದಲ ಓವರ್‌ನಲ್ಲೇ ಮೇಡನ್ ಸಹಿತ ೨ ವಿಕೆಟ್ ಕಬಳಿಸಿ ಇಂಗ್ಲೆಂಡ್ ಬ್ಯಾಟರ್‌ಗಳಿಗೆ ಆರಂಭಿಕ ಶಾಕ್ ನೀಡಿದರು. ಜೇಸನ್ ರಾಯ್, ಜೋ ರೂಟ್, ಬೆನ್ ಸ್ಟೋಕ್ಸ್ ಡಕ್ ಔಟ್ (ಶೂನ್ಯಕ್ಕೆ ಔಟ್) ಆಗಿದ್ದು ವಿಶೇಷ. ಒಟ್ಟಾರೆ ಬುಮ್ರಾ ೧೯ ರನ್‌ಗೆ ೬ ವಿಕೆಟ್ ಪಡೆದರೆ, ಶಮಿ ೩೧ ರನ್‌ಗೆ ೩ ವಿಕೆಟ್ ಕಬಳಿಸಿದರು. ಕನ್ನಡಿಗ ಪ್ರಸಿಧ್ ಕೃಷ್ಣ ೧ ವಿಕೆಟ್ ಪಡೆದು ಇವರಿಬ್ಬರಿಗೆ ಸಾಥ್ ನೀಡಿದರು. ನಾಯಕ ಜೋಸ್ ಬಟ್ಲರ್ ೩೦, ಡೇವಿಡ್ ವಿಲ್ಲಿ ೨೧ ರನ್ ಗಳಿಸಿ ಅಲ್ಪ ಪ್ರತಿರೋಧ ತೋರಿದ್ದು ಹೊರತುಪಡಿಸಿದರೆ ಬೇರಾವ ಆಟಗಾರರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.
೨೨.೨ ಓವರ್‌ಗೆ ಇಂಗ್ಲೆಂಡ್ ೧೧೦ ರನ್‌ಗೆ ಆಲೌಟ್ ಆಗುವ ಮೂಲಕ ಭಾರತದ ವಿರುದ್ಧ ಕನಿಷ್ಠ ಮೊತ್ತಕ್ಕೆ ಪತನವಾದ ದಾಖಲೆ ಬರೆಯಿತು. ಈ ಹಿಂದೆ ೨೦೦೬ರಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ೧೨೫ ರನ್‌ಗೆ ಆಲೌಟ್ ಆಗಿದ್ದು ಕನಿಷ್ಠ ಮೊತ್ತವಾಗಿತ್ತು.
ಇದನ್ನೂ ಓದಿ: INDvsENG ODI: ಟಾಸ್ ಗೆದ್ದ ಭಾರತ, ವಿರಾಟ್ ಔಟ್, ಶ್ರೇಯಸ್ ಇನ್