Site icon Vistara News

IND vs PAK : ಭಾರತ ವಿರುದ್ಧ ಸೋಲುವುದಕ್ಕಾಗಿ ಮ್ಯಾಚ್ ಫಿಕ್ಸಿಂಗ್ ಮಾಡಿದ ಪಾಕ್​ ಆಟಗಾರ; ಆರೋಪ

IND vs PAK

ನವದೆಹಲಿ: ಐಸಿಸಿ ಟಿ 20 ವಿಶ್ವಕಪ್ 2024 ರಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತ (IND vs PAK) ವಿರುದ್ಧ ಸೋತ ನಂತರ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳು ಸಿಟ್ಟಿಗೆದ್ದಿದ್ದಾರೆ. ಜತೆಗೆ ಮಾಜಿ ಆಟಗಾರರು ಬೆಂಕಿಯಾಗಿದ್ದಾರೆ. ಅವರೆಲ್ಲರೂ ಒಂದೊಂದು ತೆರನಾದ ಆರೋಪಗಳನ್ನು ಮಾಡುತ್ತಿದ್ದಾರೆ. ಅಂತೆಯೇ ಅಲ್ಲಿನ ಮಾಜಿ ಕ್ರಿಕೆಟಿಗರಾದ ಸಲೀಮ್ ಮಲಿಕ್ ಮ್ಯಾಚ್ ಫಿಕ್ಸಿಂಗ್ ಆರೋಪವನ್ನು ಮಾಡಿದ್ದಾರೆ.

2007 ರಲ್ಲಿ ಐಸಿಸಿ ಟಿ 20 ವಿಶ್ವಕಪ್ ಪ್ರಾರಂಭವಾದಾಗಿನಿಂದ ಭಾರತ ಮತ್ತು ಪಾಕಿಸ್ತಾನ 8 ನೇ ಬಾರಿಗೆ ಮುಖಾಮುಖಿಯಾಗಿವೆ. ಮೊದಲಿನಿಂದಲೂ, ಪಾಕಿಸ್ತಾನಿಗಳ ಮೇಲೆ ಭಾರತೀಯರು ಯಾವಾಗಲೂ ಮೇಲುಗೈ ಸಾಧಿಸಿದ್ದಾರೆ. 2007ರ ಆವೃತ್ತಿಯ ಗ್ರೂಪ್ ಮ್ಯಾಚ್ ಆಗಿರಲಿ ಅಥವಾ ಫೈನಲ್ ಆಗಿರಲಿ, ಮೆನ್ ಇನ್ ಬ್ಲೂ ತಂಡವು ಒಂದು ಬಾರಿ ಹೊರತುಪಡಿಸಿ ಪ್ರತಿ ಬಾರಿಯೂ ಗೆದ್ದಿದೆ.

ಇದನ್ನೂ ಓದಿ: IND vs PAK : ಪಾಕಿಸ್ತಾನದ ಬೌಲರ್​ ವಿರುದ್ಧ ವಿಶೇಷ ದಾಖಲೆ ಮಾಡಿದ ರೋಹಿತ್ ಶರ್ಮಾ

2021 ರಲ್ಲಿ, ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನವು ಟಿ 20 ವಿಶ್ವಕಪ್​​ನಲ್ಲಿ ಭಾರತದ ವಿರುದ್ಧ ಮೊದಲ ಗೆಲುವನ್ನು ಸಾಧಿಸಿತು. ಆದರೆ ಆ ಗೆಲುವಿನ ನಂತರ ಎರಡು ಬಾರಿ ಸೋತಿದ್ದಾರೆ. 2022 ರ ಆವೃತ್ತಿಯಲ್ಲಿ, ವಿರಾಟ್ ಕೊಹ್ಲಿ ಪಾಕಿಸ್ತಾನಿಗಳಿಂದ ಗೆಲುವನ್ನು ಕಸಿದುಕೊಂಡಿದ್ದರು. ಭಾನುವಾರ ರಾತ್ರಿ ಜಸ್​ಪ್ರಿತ್​ ಬುಮ್ರಾ ಪಾಕ್ ಆಸೆಗೆ ತಣ್ಣೀರು ಎರಚಿದ್ದರು.

ಈ ಪಂದ್ಯವು ಕಡಿಮೆ ಸ್ಕೋರಿಂಗ್ ಥ್ರಿಲ್ಲರ್ ಆಗಿತ್ತು. 2 ನೇ ಇನ್ನಿಂಗ್ಸ್ ನ ಅಂತಿಮ ಎಸೆತದವರೆಗೂ ಸಂಪೂರ್ಣವಾಗಿ ಸಾಗಿತು. ಪಾಕಿಸ್ತಾನಕ್ಕೆ 120 ಎಸೆತಗಳಲ್ಲಿ ಕೇವಲ 120 ರನ್​ಗಳ ಅಗತ್ಯವಿತ್ತು. ಈ ಸಮೀಕರಣ ಬರೆಯಲು ಸರಳವಾಗಿ ಕಂಡರೂ, ಅನುಷ್ಠಾನವು ಅತ್ಯಂತ ಕಳಪೆಯಾಗಿತ್ತು. ಕೊನೆಯಲ್ಲಿ ಗ್ರೀನ್ ಆರ್ಮಿ 6 ರನ್​ಗಳಿಂದ ಸೋತಿತು.

ಸಲೀಮ್ ಮಲಿಕ್ ಕೋಪ ಇಮಾದ್ ಮೇಲೆ

ಪಾಕಿಸ್ತಾನದ ಮಾಜಿ ನಾಯಕ ಸಲೀಮ್ ಮಲಿಕ್ ಅವರು ಆಲ್ರೌಂಡರ್ ಇಮಾದ್ ವಾಸಿಮ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಾಸಿಮ್ 2023 ರಲ್ಲಿ ನಿವೃತ್ತಿ ಘೋಷಿಸಿದ್ದರು/ ಅವರು ವಿಶ್ವದಾದ್ಯಂತದ ದೇಶೀಯ ಲೀಗ್​ಗಳಲ್ಲಿ ಮಾತ್ರ ಆಡುತ್ತಿದ್ದರು. ಅವರು ವಾಪಸ್ ಆಗಿರುವುದೂ ಟೀಕೆಗೆ ಗುರಿಯಾಗಿತ್ತು. ಭಾನುವಾರದ ಅವರ ಪ್ರದರ್ಶನವು ಅವರನ್ನು ಇನ್ನಷ್ಟು ಟೀಕೆಗೆ ಗುರಿ ಮಾಡಿತು.

ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಇಮಾದ್ ವಾಸಿಮ್ 23 ಎಸೆತಗಳಲ್ಲಿ ಕೇವಲ 15 ರನ್ ಬಾರಿಸಿದ್ದರು. ಮಂಡಳಿಯೇ ವಾಪಸ್​ ಕರೆಸಿದ ಆಟಗಾರನಿಂದ ಇದು ಹೆಚ್ಚು ಪ್ರಶ್ನಾರ್ಹ. ರಾಷ್ಟ್ರೀಯ ಮಟ್ಟದ ಸುದ್ದಿ ವಾಹಿನಿಯೊಂದರೊಂದಿಗಿನ ಚಾಟ್​ನಲ್ಲಿ ಸಲೀಮ್ ಮಲಿಕ್ ಅವರು ಸುಮಾರು 4 ಓವರ್​ಗಳ ಕಳಪೆ ಬ್ಯಾಟಿಂಗ್ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ವಾಸಿಮ್ ಉದ್ದೇಶಪೂರ್ವಕವಾಗಿ ಅನೇಕ ಚೆಂಡುಗಳನ್ನು ವ್ಯರ್ಥ ಮಾಡಿದ್ದಾರೆ ಮತ್ತು ಅವರು ಸ್ವಾರ್ಥದಿಂದ ಆಡಿದರು ಮತ್ತು ಅವರ ಸರಾಸರಿಯನ್ನು ಹೆಚ್ಚಿಸಲು ಬಯಸಿದ್ದರು ಎಂದು ಸಲೀಮ್ ಮಲಿಕ್ ಆರೋಪಿಸಿದ್ದಾರೆ. “ನೀವು ಅವರ (ವಾಸಿಮ್) ಇನ್ನಿಂಗ್ಸ್ ಅನ್ನು ನೋಡಿದರೆ ಅವರು ರನ್ ಗಳಿಸದೆ ಚೆಂಡುಗಳನ್ನು ವ್ಯರ್ಥ ಮಾಡುತ್ತಿದ್ದಾರೆ. ಅದು ಮ್ಯಾಚ್​ ಫಿಕ್ಸಿಂಗ್ ರೀತಿ ಅನಿಸುತ್ತಿತ್ತು. ರನ್ ಚೇಸ್​​ ವಿಷಯಗಳನ್ನು ಕಷ್ಟಕರವಾಗಿಸುತ್ತಿದ್ದಾರೆ ಎಂದು ತೋರುತ್ತದೆ” ಎಂದು ಸಲೀಮ್ ಮಲಿಕ್ ಹೇಳಿದ್ದಾರೆ.

ಶಾಹಿದ್ ಅಫ್ರಿದಿ ಹೇಳಿದ್ದೇನು?

ಪಾಕಿಸ್ತಾನದ ದಂತಕಥೆ ಶಾಹಿದ್ ಅಫ್ರಿದಿ ಕೂಡ ತಂಡದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಫ್ರಿದಿ ಅವರು ಆಟಗಾರರ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದು ವಿಶ್ವ ಕಪ್​ ಮುಗಿದ ಬಳಿಕ ಬಹಿರಂಗ ಪಡಿಸುವೆ ಎಂದಿದ್ದಾರೆ.

“ಒಬ್ಬ ನಾಯಕನು ಎಲ್ಲರನ್ನೂ ಒಟ್ಟುಗೂಡಿಸುತ್ತಾನೆ. ಆತನೇ ತಂಡದ ವಾತಾವರಣವನ್ನು ಹಾಳುಮಾಡಬಹುದು ಅಥವಾ ಅವನು ತಂಡವನ್ನು ನಿರ್ಮಿಸಬಹುದು. ಈ ವಿಶ್ವಕಪ್ ಮುಗಿಯಲಿ, ನಾನು ಬಹಿರಂಗವಾಗಿ ಮಾತನಾಡುತ್ತೇನೆ” ಎಂದು ಶಾಹಿದ್ ಅಫ್ರಿದಿ ಹೇಳಿದ್ದಾರೆ.

Exit mobile version