ಮುಂಬೈ: ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರ 33ನೇ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾ (Ind vs Sl) ವಿರುದ್ಧ ಸೆಣಸಲಿದೆ. ಮೆನ್ ಇನ್ ಬ್ಲೂ ಅತ್ಯುತ್ತಮ ಫಾರ್ಮ್ ನಲ್ಲಿದ್ದು, ಪಂದ್ಯಾವಳಿಯಲ್ಲಿ ಆಡಿದ ಎಲ್ಲಾ ಆರು ಪಂದ್ಯಗಳನ್ನು ಗೆದ್ದಿದೆ ಮತ್ತು ಪ್ರಸ್ತುತ 12 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ ನಲ್ಲಿ ಅಗ್ರಸ್ಥಾನದಲ್ಲಿದೆ.
ಇಂಗ್ಲೆಂಡ್ ವಿರುದ್ಧ ಆಡಿದ ತಂಡವನ್ನೇ ಭಾರತ ತಂಡದ ಮ್ಯಾನೇಜ್ಮೆಂಟ್ ಕಣಕ್ಕೆ ಇಳಿಸಿದೆ. ಯಾವುದೇ ಬದಲಾಣೆ ಮಾಡಿಲ್ಲ.
ಕಳೆದ ಬಾರಿ ಉಭಯ ತಂಡಗಳು ಮುಖಾಮುಖಿಯಾದಾಗ ಮೊಹಮ್ಮದ್ ಸಿರಾಜ್ 21 ರನ್ಗೆ 6 ವಿಕೆಟ್ ಪಡೆದಿದ್ದರು. ಲಂಕಾ ತಂಡ ಕೇವಲ 50 ರನ್ಗಳಿಗೆ ಆಲೌಟ್ ಆಗಿತ್ತು. ಆದರೆ ಭಾರತವು ಕೇವಲ 6.1 ಓವರ್ಗಳಲ್ಲಿ 10 ವಿಕೆಟ್ ಉಳಿಸಿಕೊಂಡು ಗೆಲುವು ಸಾಧಿಸಿತ್ತು.
ತವರು ನೆಲದಲ್ಲಿ ಇತ್ತೀಚೆಗೆ ನಡೆದ ಏಷ್ಯಾಕಪ್ನ ಫೈನಲ್ಗೆ ಪ್ರವೇಶಿಸಿದ್ದು, ಶ್ರೀಲಂಕಾ ತಂಡಕ್ಕೆ ಅಚ್ಚರಿಯಾಗಿತ್ತು. ಆದರೆ ಆ ನಿರ್ಣಾಯಕ ಪಂದ್ಯದಲ್ಲಿ ಭಾರತದ ವಿರುದ್ಧ ಹೀನಾಯ ಸೋಲು ಅನುಭವಿಸಿತ್ತು.
ಸತತ ಏಳನೇ ಗೆಲುವು ಭಾರತ ತಂಡವನ್ನು ಬಹುತೇಕ ಅಗ್ರಸ್ಥಾನದಲ್ಲಿ ನಿಲ್ಲಿಸಲಿದೆ. ಹೀಗಾಗಿ ಈ ಪಂದ್ಯ ತಂಡದ ಲೈನ್ಅಪ್ ಅನ್ನು ಉತ್ತಮಗೊಳಿಸಲು ಅನುವು ಮಾಡಿಕೊಡುತ್ತದೆ.
ಆರು ಸಮಗ್ರ ಗೆಲುವುಗಳ ನಂತರ ಭಾರತವು ಸೋಲಿಲ್ಲದ ಏಕೈಕ ತಂಡವಾಗಿ ಎತ್ತರಕ್ಕೆ ಏರುತ್ತಿದೆ .ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಮತ್ತು ನಾಕೌಟ್ ಹಂತದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಅಂಚಿನಲ್ಲಿದೆ.