Site icon Vistara News

INDW vs AUSW: ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್​ ಸೋಲು ಕಂಡ ಭಾರತ ಮಹಿಳಾ ತಂಡ

Phoebe Litchfield took her time initially before getting up to speed

ಮುಂಬಯಿ: ಆಸ್ಟ್ರೇಲಿಯಾ(INDW vs AUSW) ವಿರುದ್ಧ ಏಕೈಕ ಪಂದ್ಯದ ಟೆಸ್ಟ್ ಸರಣಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದ ಭಾರತ ಮಹಿಳಾ ಕ್ರಿಕೆಟ್​ ತಂಡ ಇದೀಗ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ(India Women vs Australia Women, 1st ODI) 6 ವಿಕೆಟ್​ಗಳ ಹೀನಾಯ ಸೋಲು ಕಂಡಿದೆ. ಗೆದ್ದ ಅಲಿಸ್ಸಾ ಹೀಲಿ ಬಳಗ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ.

ಮುಂಬಯಿಯ ವಾಂಖೆಡೆ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಭಾರತ ನಿಗದಿತ 50 ಓವರ್​ಗಳನ್ನು ಆಡಿ 8 ವಿಕೆಟ್​ಗೆ 282 ರನ್​ಗಳನ್ನು ಬಾರಿಸಿತು. ಬೃಹತ್​ ಮೊತ್ತವನ್ನು ಪೇರಿಸಿದರೂ ಕೂಡ ಇದನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿ ಸೋಲಿಗೆ ತುತ್ತಾಯಿತು. ದೊಡ್ಡ ಮೊತ್ತವನ್ನು ದಿಟ್ಟ ರೀತಿಯಲ್ಲಿ ಬೆನ್ನಟ್ಟಿದ ಆಸ್ಟ್ರೇಲಿಯಾ ಆಟಗಾರ್ತಿಯರು 46.3 ಓವರ್​ಗಳಲ್ಲಿ ಕೇವಲ 4 ವಿಕೆಟ್​ ಕಳೆದುಕೊಂಡು 285 ರನ್​ ಬಾರಿಸಿ ವಿಜಯ ಪತಾಕೆ ಹಾರಿಸಿತು.

ಆರಂಭಿಕ ಆಘಾತದದ ಹೊರತಾಗಿಯೂ ಪಂದ್ಯ ಗೆದ್ದ ಆಸೀಸ್​

ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ಖಾತೆ ತೆರೆಯುವ ಮುನ್ನವೇ ನಾಯಕ ಅಲಿಸ್ಸಾ ಹೀಲಿ(0) ವಿಕೆಟ್​ ಕಳೆದುಕೊಂಡು ಆಘಾತಕ್ಕೆ ಸಿಲುಕಿತು. ರೇಣುಕಾ ಸಿಂಗ್​ ತಮ್ಮ ಮೂರನೇ ಎಸೆತದಲ್ಲಿ ಈ ವಿಕೆಟ್​ ಕಿತ್ತು ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಆದರೆ ದ್ವಿತೀಯ ವಿಕೆಟ್​ಗೆ ಜತೆಯಾದ ಫೋಬೆ ಲಿಚ್ಫೀಲ್ಡ್ ಮತ್ತು ಎಲ್ಲಿಸ್ ಪೆರ್ರಿ ಸೇರಿಕೊಂಡು ಭಾರತದ ಗೆಲುವಿನ ಕನಸಿಗೆ ತಣ್ಣಿರೇರಚಿದರು.

ಇದನ್ನೂ ಓದಿ IND vs SA: ಇನಿಂಗ್ಸ್​, 32 ರನ್​ಗಳ ಸೋಲಿಗೆ ತುತ್ತಾದ ಭಾರತ

ಆರಂಭಿಕ ವಿಕೆಟ್​ ಕಿತ್ತ ಜೋಶ್​ನಲ್ಲಿದ್ದ ಭಾರತಕ್ಕೆ ಈ ಜೋಡಿ ಕ್ರೀಸ್​ನಲ್ಲಿ ಬೇರೂರಿ ನಿಂತು ಕಾಡಿದರು. ಎಲ್ಲ ಬೌಲರ್​ಗಳಿಗೂ ಸರಿಯಾಗಿ ದಂಡಿಸಿ ಉಭಯ ಆಟಗಾರ್ತಿಯರು ಅರ್ಧಶತಕ ಬಾರಿಸಿ ಸಂಭ್ರಮಿಸಿದರು. ಈ ಜೋಡಿ 2ನೇ ವಿಕೆಟ್​ಗೆ ಬರೋಬ್ಬರಿ 148 ರನ್​ಗಳ ಜತೆಯಾಟ ನಡೆಸಿ ತಂಡಕ್ಕೆ ಉತ್ತಮ ಅಡಿಪಾಯ ನಿರ್ಮಿಸಿದರು. ಶೂನ್ಯಕ್ಕೂ ತಂಡದ ವಿಕೆಟ್​ ಬಿದ್ದರೂ ಕೂಡ ಕಿಂಚಿತ್ತೂ ವಿಚಲಿತರಾಗಿ ಆಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.

ಲಿಚ್ಫೀಲ್ಡ್ 89 ಎಸೆತ ಎದುರಿಸಿ 8 ಬೌಂಡರಿ ಮತ್ತು ಒಂದು ಸಿಕ್ಸರ್​ ನೆರವಿನಿಂದ 78 ರನ್​ ಬಾರಿಸಿದರು. ಇವರ ಜತೆಗಾರ್ತಿ ಎಲ್ಲಿಸ್ ಪೆರ್ರಿ 9 ಬೌಂಡರಿ ಮತ್ತು 2 ಸೊಗಸಾದ ಸಿಕ್ಸರ್​ ಚಚ್ಚಿ 75 ರನ್​ ಗಳಿಸಿದರು. ಉಭಯ ಆಟಗಾರ್ತಿಯ ವಿಕೆಟ್​ ಪತನದ ಬಳಿಕ ಆಡಲಿಳಿದ ಬೆತ್​ ಮೂನಿ ಹಾಗೂ ಟಹ್ಲಿಯಾ ಮೆಕ್‌ಗ್ರಾತ್‌ ಜೋಡಿಯೂ ತಾಳ್ಮೆಯು ಬ್ಯಾಟಿಂಗ್​ ನಡೆಸುವ ಮೂಲಕ ಉತ್ತಮ ಜತೆತಯಾಟ ನಡೆಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಬೆತ್​ ಮೂನಿ 42 ರನ್​ ಗಳಿಸಿ ಔಟಾದರೂ, ಮೆಕ್‌ಗ್ರಾತ್‌ 11 ಬೌಂಡರಿ ಬಾರಿಸಿ 68 ಗಳಿಸಿ ಅಜೇಯರಾಗಿ ಉಳಿದರು. ಭಾರತ ಪರ ರೇಣುಕಾ ಸಿಂಗ್​, ಪೂಜಾ ವಸ್ತ್ರಾಕರ್​ ಮತ್ತು ಸ್ನೇಹ್​ ರಾಣಾ ತಲಾ ಒಂದು ವಿಕೆಟ್​ ಕಿತ್ತರು.

ಜೆಮಿಮಾ ಹೋರಾಟ ವ್ಯರ್ಥ

ಇದಕ್ಕೂ ಮುನ್ನ ಬ್ಯಾಟಿಂಗ್​ ನಡೆಸಿದ ಭಾರತ ಪರ ಮಧ್ಯಮ ಕ್ರಮಾಂಕದ ಆಟಗಾರ್ತಿ ಜೆಮಿಮಾ ರೋಡ್ರಿಗಸ್​ ಅಮೋಘ ಬ್ಯಾಟಿಂಗ್​ ನಡೆಸಿ ಅಧರ್ಶತಕ ಬಾರಿಸಿದರು. 5ನೇ ಕ್ರಮಾಂಕದಲ್ಲಿ ಆಡಲಿಳಿದ ಜೆಮಿಮಾ 7 ಬೌಂಡರಿ ನೆರವಿನಿಂದ 82 ರನ್​ ಬಾರಿಸಿದರು. ಆದರೆ ಪಂದ್ಯ ಸೋತ ಕಾರಣ ಇವರ ಈ ಹೋರಾಟ ವ್ಯರ್ಥವಾಯಿತು. ಆರಂಭಿಕ ಆಟಗಾರ್ತಿ ಯಾಸ್ತಿಕಾ ಭಾಟಿಯಾ 49 ರನ್​ಗೆ ವಿಕೆಟ್​ ಕಳೆದುಕೊಂಡು ಒಂದು ರನ್​ ಅಂತರದಲ್ಲಿ ಅರ್ಧಶತಕದಿಂದ ವಂಚಿರಾದರು.

ಅಂತಿಮ ಹಂತದಲ್ಲಿ ಕ್ರೀಸ್​ಗಿಳಿದು ಸ್ಫೋಟಕ ಬ್ಯಾಟಿಂಗ್​ ನಡೆಸಿದ ಬೌಲರ್​ ಪೂಜಾ ವಸ್ತ್ರಾಕರ್​ ಕೇಬಲ 42 ಎಸೆತಗಳಿಂದ ಅಜೇಯ 62 ರನ್​ ಬಾರಿಸಿದರು. ಅವರ ಈ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್​ ಸಿಡಿಯಿತು. ನಾಯಕಿ ಕೌರ್​ 9 ಹಾಗೂ ಆರಂಭಿಕ ಆಟಗಾರ್ತಿ ಶಫಾಲಿ 1 ರನ್​ಗೆ ವಿಕೆಟ್​ ಒಪ್ಪಿಸಿ ನಿರಾಸೆ ಮೂಡಿಸಿದರು.

Exit mobile version