Site icon Vistara News

INDW vs AUSW: ಸ್ಮೃತಿ, ಶಫಾಲಿ ಬೊಂಬಾಟ್​ ಬ್ಯಾಟಿಂಗ್​; ಆಸೀಸ್​ಗೆ ಹೀನಾಯ ಸೋಲು

Titas Sadhu picked up three wickets inside the powerplay

ನವಿ ಮುಂಬಯಿ: ಶಫಾಲಿ ವರ್ಮ(64*) ಮತ್ತು ಸ್ಮೃತಿ ಮಂಧಾನ(54) ಅವರ ಅರ್ಧಶತಕ, ಬೌಲಿಂಗ್​ನಲ್ಲಿ ಟಿಟಾಸ್‌ ಸಾಧು(4 ವಿಕೆಟ್​) ಪರಾಕ್ರಮದಿಂದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ(India Women vs Australia Women, 1st T20I) ಭಾರತ(INDW vs AUSW) ಮಹಿಳಾ ತಂಡ ಭರ್ಜರಿ 9 ವಿಕೆಟ್​ಗಳ ಗೆಲುವು ಸಾಧಿಸಿದೆ. ಜತೆಗೆ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದ.

ನವಿ ಮುಂಬಯಿಯ ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಭಾರತ ತನ್ನ ಆಯ್ಕೆಗೆ ತಕ್ಕ ಪ್ರದರ್ಶನ ತೋರುವ ಮೂಲಕ ಎದುರಾಳಿ ಆಸೀಸ್​ ತಂಡವನ್ನು 19.2 ಓವರ್​ಗಳಲ್ಲಿ 141 ರನ್​ಗೆ ಕಟ್ಟಿ ಹಾಕಿತು. ಬಳಿಕ ಗುರಿ ಬೆನ್ನಟ್ಟಿದ ಭಾರತ ಬ್ಯಾಟಿಂಗ್​ನಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರುವ ಮೂಲಕ 17.4 ಓವರ್​ನಲ್ಲಿ ಕೇವಲ ಒಂದು ವಿಕೆಟ್​ ಕಳೆದುಕೊಂಡು 145 ರನ್​ ಬಾರಿಸಿ ಗೆಲುವಿನ ನಗೆ ಬೀರಿತು.

ಶಫಾಲಿ-ಮಂಧಾನ ಅರ್ಧಶತಕ


ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಶಫಾಲಿ ವರ್ಮ ಮತ್ತು ಉಪನಾಯಕ ಸ್ಮೃತಿ ಮಂಧಾನ ಉತ್ತಮ ಜತೆಯಾಟ ನಡೆಸುವ ಮೂಲಕ ಭರ್ಜರಿ ಆರಂಭ ಒದಗಿಸಿದರು. ಉಭಯ ಆಟಗಾರ್ತಿಯರು ಕೂಡ ಆಸೀಸ್​ ಬೌಲಿಂಗ್​ ದಾಳಿಯನ್ನು ಸಮರ್ಥವಾಗಿ ಎದುರಿಸಿ ಅರ್ಧಶತಕ ಬಾರಿಸಿದರು. ಈ ಮೂಲಕ ಏಕದಿನ ಸರಣಿಯಲ್ಲಿ ಅನುಭವಿಸಿದ್ದ ಬ್ಯಾಟಿಂಗ್​ ಬರವನ್ನು ಇಲ್ಲಿ ನೀಗಿಸಿಕೊಂಡರು.

ಬಿರುಸಿನ ಬ್ಯಾಟಿಂಗ್​ ನಡೆಸಿದ ಶಫಾಲಿ ಒಟ್ಟು ಮೂರು ಜೀವದಾನ ಪಡೆದರು. ಇದರಲ್ಲಿ 2 ಜೀವದಾನ ಆಶ್ಲೀ ಗಾರ್ಡ್ನರ್ ಅವರಿಂದ ಲಭಿಸಿತು. 2 ಬಾರಿಯೂ ಕಾಟ್‌ ಬಿಹೈಂಡ್‌ ಅಪಾಯದಿಂದ ಪಾರಾದರು. ಇದರ ಸಂಪೂರ್ಣ ಲಾಭವೆತ್ತಿದ ಅವರು ಆಸೀಸ್​ಗೆ ಸಿಕ್ಸರ್​ ಮತ್ತು ಬೌಂಡರಿಗಳ ರುಚಿ ತೋರಿಸಿದರು. 44 ಎಸೆತ ಎದುರಿಸಿ 6 ಬೌಂಡರಿ ಮತ್ತು 3 ಸೊಗಸಾದ ಸಿಕ್ಸರ್​ ಬಾರಿಸಿ ಅಜೇಯ 64 ರನ್​ ಗಳಿಸಿದರು. ಇವರ ಜತೆಗಾರ್ತಿ ಸ್ಮೃತಿ ಮಂಧಾನ 7 ಬೌಂಡರಿ ಹಾಗೂ ಒಂದು ಸಿಕ್ಸರ್​ನಿಂದ 54 ರನ್​ ಗಳಿಸಿ ಗೆಲುವಿಗೆ 5 ರನ್​ ಬೇಕಿದ್ದಾಗ ವಿಕೆಟ್​ ಕೈ ಚೆಲ್ಲಿದರು. ಸಿಕ್ಸರ್​ಗೆ ಬಾರಿಸಿದ ಚೆಂಡನ್ನು ಬೌಂಡರಿ ಲೈನ್​​ನಲ್ಲಿ ತಾಲಿಯಾ ಮೆಕ್‌ಗ್ರಾತ್ ಯಾರೂ ಊಹಿಸಿದ ರೀತಿಯಲ್ಲಿ ಮೇಲಕ್ಕೆ ಜಿಗಿದು ಕ್ಯಾಚ್​ ಹಿಡಿದು ಈ ವಿಕೆಟ್​ ಪತನಕ್ಕೆ ಕಾರಣರಾದರು.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ; ಬದ್ಧ ಎದುರಾಳಿ ಭಾರತ-ಪಾಕ್​ ಪಂದ್ಯ ಯಾವಾಗ?

ಶಫಾಲಿ ಮತ್ತು ಸ್ಮೃತಿ ಮೊದಲ ವಿಕೆಟ್​ಗೆ ಬರೋಬ್ಬರಿ 137 ರನ್​ ಒಟ್ಟುಗೂಡಿಸಿದರು. ದ್ವಿತೀಯ ವಿಕೆಟ್​ಗೆ ಆಡಲಿಳಿದ ಜೆಮಿಮಾ ರೋಡ್ರಿಗಸ್​ ಬೌಂಡರಿ ಬಾರಿಸಿ ಭಾರತದ ಗೆಲುವುನ್ನು ಸಾರಿದರು. ಅವರು 6 ರನ್​ ಗಳಿಸಿ ಅಜೇಯರಾಗಿ ಉಳಿದರು.

ಮಿಂಚಿದ ಟಿಟಾಸ್‌ ಸಾಧು


ಮೊದಲು ಬ್ಯಾಟಿಂಗ್​ ನಡೆಸಿದ ಆಸ್ಟ್ರೇಲಿಯಾಕ್ಕೆ 19 ವರ್ಷದ ಯುವ ಆಟಗಾರ್ತಿ ಟಿಟಾಸ್‌ ಸಾಧು ಆರಂಭದಲ್ಲೇ ಆಘಾತ ನೀಡಿದರು. ಮೊನಚಾದ ಬೌಲಿಂಗ್​ ದಾಳಿ ನಡೆಸಿ ಬ್ಯಾಕ್​ ಟು ಬ್ಯಾಕ್​ ಮೂರು ವಿಕೆಟ್​ ಕಿತ್ತು ಆಸೀಸ್​ ಕುಸಿತಕ್ಕೆ ಕಾರಣರಾದರು. ಒಟ್ಟು 4 ಓವರ್​ ಎಸೆದು ಕೇವಲ 17 ರನ್​ ಬಿಟ್ಟು ಕೊಟ್ಟು 4 ವಿಕೆಟ್​ ಕಿತ್ತರು. ಇವರಿಗೆ ಕನ್ನಡತಿ ಶ್ರೇಯಾಂಕ ಪಾಟೀಲ್​ ಮತ್ತು ದೀಪ್ತಿ ಶರ್ಮ ಉತ್ತಮ ಸಾಥ್​ ನೀಡಿದರು. ಶ್ರೇಯಾಂಕ ಹಾಗೂ ದೀಪ್ತಿ ತಲಾ 2 ವಿಕೆಟ್​ ಪಡೆದರು.

33 ರನ್​ಗೆ 4 ವಿಕೆಟ್​ ಕಳೆದುಕೊಂಡ ಆಸೀಸ್​ ತಂಡಕ್ಕೆ ಆಸರೆಯಾದದ್ದು ಯುವ ಆಟಗಾರ್ತಿ ಫೋಬೆ ಲಿಚ್ಫೀಲ್ಡ್ ಮತ್ತು ಎಲ್ಲಿಸ್​ ಪೆರ್ರಿ. ಏಕದಿನದಲ್ಲಿ ಆರಂಭಿಕ ಸ್ಥಾನದಲ್ಲಿ ಆಡಿದ್ದ ಫೋಬೆ ಲಿಚ್ಫೀಲ್ಡ್ ಟಿ20ಯಲ್ಲಿ 6ನೇ ಸ್ಥಾನದಲ್ಲಿ ಕಣಕ್ಕಿಳಿದರು. ಸ್ಟೋಟಕ ಬ್ಯಾಟಿಂಗ್​ ನಡೆಸಿದ ಲಿಚ್ಫೀಲ್ಡ್ 3 ಸೊಗಸಾದ ಸಿಕ್ಸರ್​ ಮತ್ತು 4 ಬೌಂಡರಿ ಬಾರಿಸಿ 49 ರನ್​ಗೆ ಔಟಾದರು. ಪೆರ್ರಿ ತಲಾ 2 ಸಿಕ್ಸರ್​ ಹಾಗೂ ಬೌಂಡರಿ ನೆರವಿನಿಂದ 37 ರನ್ ಬಾರಿಸಿದರು. ಉಭಯ ಆಟಗಾರ್ತಿಯನ್ನು ಹೊರತುಪಡಿಸಿ ಉಳಿದ ಎಲ್ಲ ಆಟಗಾರ್ತಿಯರು ನಿರೀಕ್ಷಿತ ಬ್ಯಾಟಿಂಗ್​ ನಡೆಸುವಲ್ಲಿ ವಿಫಲರಾದರು.

Exit mobile version