Site icon Vistara News

INDW vs ENGW: ದಾಖಲೆಯ ಗೆಲುವು ಸಾಧಿಸಿ ಸರಣಿ ಗೆದ್ದ ಭಾರತ ಮಹಿಳಾ ಕ್ರಿಕೆಟ್​ ತಂಡ

India clinched the one-off Test against England by a huge margin

ಮುಂಬಯಿ: ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಸೋಲು ಕಂಡಿದ್ದ ಭಾರತ ಮಹಿಳಾ ಕ್ರಿಕೆಟ್​(INDW vs ENGW) ತಂಡ ಇದಕ್ಕೆ ತಕ್ಕ ತಿರುಗೇಟು ನೀಡಿದೆ. ಏಕೈಕ ಟೆಸ್ಟ್​ ಪಂದ್ಯವನ್ನು ಬೃಹತ್​ ಅಂತರದಿಂದ ಗೆದ್ದು ಬೀಗಿದೆ. ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡೂ ವಿಭಾಗದಲ್ಲಿ ಉತ್ಕೃಷ್ಟ ಮಟ್ಟದ ಪ್ರದರ್ಶನ ತೋರಿದ ಹರ್ಮನ್ ಕೌರ್ ಬಳಗವು ದಾಖಲೆಯ 347 ರನ್ ಬೃಹತ್ ಅಂತರದ ಗೆಲುವು ಸಾಧಿಸಿದೆ. ಈ ಪಂದ್ಯ ಮೂರೇ ದಿನಕ್ಕೆ ಅಂತ್ಯಗೊಂಡಿತು.

ನವಿಮುಂಬೈಯ ಡಿ.ವೈ ಪಾಟೀಲ್​ ಸ್ಟೇಡಿಯಂನಲ್ಲಿ ನಡೆದ ಈ ಟೆಸ್ಟ್​ ಪಂದ್ಯದಲ್ಲಿ ಭಾರತ ಮೊದಲ ಇನಿಂಗ್ಸ್​ನಲ್ಲಿ 428 ರನ್​ ಬಾರಿಸಿತು. ಇದಕ್ಕುತ್ತರವಾಗಿ ಬ್ಯಾಟಿಂಗ್​ ನಡೆಸಿದ್ದ ಇಂಗ್ಲೆಂಡ್​ ಕೇವಲ 136ರನ್​ಗೆ ಕುಸಿದಿತ್ತು. ದ್ವಿತೀಯ ಇನಿಂಗ್ಸ್​ನಲ್ಲಿ ಭಾರತ 6 ವಿಕಟ್​ಗೆ 186 ರನ್​ ಬಾರಿಸಿ ಡಿಕ್ಲೇರ್​ ಮಾಡಿತು. 479 ರನ್​ಗಳ ಗೆಲುವಿನ ಗುರಿ ಪಡೆದ ಇಂಗ್ಲೆಂಡ್​ 131ಕ್ಕೆ ಸರ್ವಪತನ ಕಂಡು ಹೀನಾಯ 347 ರನ್​ಗಳ ಸೋಲು ಕಂಡಿತು.

ದಾಖಲೆಯ ಗೆಲುವು

ಮಹಿಳಾ ಟೆಸ್ಟ್​ ಕ್ರಿಕೆಟ್​ನಲ್ಲಿ ಇದು ದಾಖಲೆಯ ಮೊತ್ತದ ಗೆಲುವಾಗಿದೆ. ಇದಕ್ಕೂ ಮುನ್ನ 1998ರಲ್ಲಿ ನಡೆದಿದ್ದ ಶ್ರೀಲಂಕಾ ಮತ್ತು ವೆಸ್ಟ್​​ ಇಂಡೀಸ್​ ನಡುವಣ ಪಂದ್ಯದಲ್ಲಿ ಲಂಕಾ ವನಿತೆಯರು 309 ರನ್​ ಅಂತರದ ಗೆಲುವು ಕಂಡಿದ್ದರು. ಇದು, ಇದುವರೆಗಿನ ಮಹಿಳಾ ಟೆಸ್ಟ್​ ಕ್ರಿಕೆಟ್​ನ ದಾಖಲೆಯಾಗಿತ್ತು. ಆದರೆ ಈಗ ಈ ದಾಖಲೆ ಭಾರತದ ಪಾಲಾಗಿದೆ.

ದೀಪ್ತಿ ಶರ್ಮಾ ಸ್ಪಿನ್​ ಜಾದು

ಸ್ಪಿನ್ನ ಆಲ್​ರೌಂಡರ್​ ಆಗಿರುವ ದೀಪ್ತಿ ಶರ್ಮ ಇಂಗ್ಲೆಂಡ್​ ತಂಡದ ಕುಸಿತಕ್ಕೆ ಕಾರಣರಾದರು. ಸ್ಪಿನ್ನ ಜಾದು ನಡೆಸಿದ ಅವರು ಆಂಗ್ಲ ಆಟಗಾರ್ತಿಯರ ವಿಕೆಟ್​ಗಳನ್ನು ತರಗೆಲೆಯಂತೆ ಉದುರಿಸಿದರು. ಮೊದಲ ಇನಿಂಗ್ಸ್​ನಲ್ಲಿ ಐದು ವಿಕೆಟ್ ಕಿತ್ತಿದ್ದ ಅವರು ಎರಡನೇ ಇನ್ನಿಂಗ್ಸ್​ನಲ್ಲಿಯೂ ಅದೇ ಪ್ರದರ್ಶನ ತೋರುವ ಮೂಲಕ ನಲ್ಲಿ ನಾಲ್ಕು ವಿಕೆಟ್ ಪಡೆದರು. ಒಟ್ಟಾರೆ 9 ವಿಕೆಟ್​ ಉರುಳಿಸಿದ ಸಾಧನೆ ಮಾಡಿದರು. ಬ್ಯಾಟಿಂಗ್​ನಲ್ಲಿಯೂ ಮಿಂಚಿದ ಅವರು ಮೊದಲ ಇನಿಂಗ್ಸ್​ನಲ್ಲಿ ಅರ್ಧಶತಕ ಬಾರಿಸಿದ್ದರು. 67 ರನ್​ ಗಳಿಸಿದ್ದರು. ಅವರ ಈ ಸಾಧನೆಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು.

ಎರಡನೇ ದಿನದಾಟದ ಅಂತ್ಯಕ್ಕೆ ಆರು ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿದ್ದ ಭಾರತದ ಇಂದು ಅದೇ ಹಂತಕ್ಕೆ ಡಿಕ್ಲೇರ್ ಮಾಡಿತು. ಗೆಲ್ಲಲು 479 ರನ್ ಗುರಿ ಪಡೆದ ಹೀದರ್ ನೈಟ್ ಬಳಗ ಪಂದ್ಯ ಆರಂಭಗೊಂಡು ಸರಿ ಸುಮಾರು 2 ಗಂಟೆಯ ಒಳಗಡೆ ಆಲೌಟ್​ ಆದರು. 27 ಓವರ್ ಬ್ಯಾಟಿಂಗ್​ ನಡೆಸಿ 131 ರನ್​ಗೆ ಆಟ ಮುಗಿಸಿದರು. ನಾಯಕಿ ಹೀದರ್ ನೈಟ್ 21 ರನ್ ಗಳಿಸಿ ತಂಡದ ಪರ ಹೆಚ್ಚಿನ ರನ್​ ಗಳಿಸಿದ ಆಟಗಾರ್ತಿಯಾದರು. ಉಳಿದವರು ಒಂದಂಕಿಗೆ ಸೀತರಾದರು. ಮೂರನೇ ದಿನದಾಟದಲ್ಲಿ ದೀಪ್ತಿ ಹೊರತುಪಡಿಸಿ ಪೂಜಾ ವಸ್ತ್ರಾಕರ್ ಮೂರು ವಿಕೆಟ್ ಮತ್ತು ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ಎರಡು ವಿಕೆಟ್ ಕಿತ್ತರು. ಭಾರತದ ಈ ದಾಖಲೆಯ ಗೆಲುವಿಗೆ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಅಭಿನಂದನೆ ಸಲ್ಲಿಸಿದ್ದಾರೆ.

Exit mobile version