ಮುಂಬಯಿ: ಪ್ರವಾಸಿ ಇಂಗ್ಲೆಂಡ್(INDW vs ENGW) ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿಯೂ ಭಾರತ ಮಹಿಳಾ ತಂಡ ಮುಗ್ಗರಿಸಿದೆ. ಅತ್ಯಂತ ಕಳಪೆ ಬ್ಯಾಟಿಂಗ್ ನಡೆಸಿದ ಭಾರತ 4 ವಿಕೆಟ್ಗಳ ಅಂತರದಿಂದ ಸೋತು ಸರಣಿಯನ್ನು ಕಳೆದುಕೊಂಡಿದೆ. ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಕಾಯ್ದುಕೊಂಡ ಇಂಗ್ಲೆಂಡ್ ಇನ್ನೊಂದು ಪಂದ್ಯ ಬಾಕಿ ಇರುವಾಗಲೇ ಸರಣಿ ಗೆಲುವು ದಾಖಲಿಸಿದೆ. ಅಂತಿಮ ಪಂದ್ಯ ನಾಳೆ(ಭಾನುವಾರ) ನಡೆಯಲಿದೆ.
ಮುಂಬೈಯ ವಾಂಖೆಡೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತ ಬ್ಯಾಟಿಂಗ್ ಮರೆತವರಂತೆ ಆಡಿ 16.2 ಓವರ್ಗಳಲ್ಲಿ ಕೇವಲ 80 ರನ್ಗೆ ಸರ್ವಪತನ ಕಂಡಿತು. ಜವಾಬಿತ್ತ ಇಂಗ್ಲೆಂಡ್ ಕೂಡ 6 ವಿಕೆಟ್ ಕಳೆದುಕೊಂಡು 11.2 ಓವರ್ನಲ್ಲಿ 82 ರನ್ ಬಾರಿಸಿ ಕಷ್ಟದ ಗೆಲುವು ಸಾಧಿಸಿತು. ಭಾರತ ಕನಿಷ್ಠ 120 ರನ್ ಬಾರಿಸುತ್ತಿದ್ದರೆ ಗೆಲ್ಲುವ ಸಾಧ್ಯತೆ ಇತ್ತು.
ಮಾನ ಉಳಿಸಿದ ಜೆಮಿಮಾ
ಪಟಪಟನೆ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಭಾರತ ತಂಡಕ್ಕೆ ಆಸರೆಯಾದದ್ದು ಜೆಮಿಮಾ ರೋಡ್ರಿಗಸ್. ಅವರು ಏಕಾಂಗಿಯಾಗಿ ಹೋರಟ ನಡೆಸಿದ ಪರಿಣಾಮ ಭಾರತ 50 ಗಡಿ ದಾಟಿತು. ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಮೊದಲ ಓವರ್ನ 2ನೇ ಎಸೆತದಲ್ಲೇ ಎಲ್ಬಿಡಬ್ಲ್ಯೂ ಆಗಿ ಶೂನ್ಯ ಸುತ್ತಿದರು. ಕಳೆದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದರು.
England take unassailable lead in the series with a resounding win in the second T20I 🔥#INDvENG 📝: https://t.co/pzDRz4SrtX pic.twitter.com/nbuPTlshCC
— ICC (@ICC) December 9, 2023
ಅನುಭವಿ ಆಟಗಾರ್ತಿ ಎನಿಸಿಕೊಂಡ ಸ್ಮೃತಿ ಮಂಧಾನ ಅವರ ಕಳಪೆ ಬ್ಯಾಟಿಂಗ್ ಪ್ರದರ್ಶನ ಈ ಪಂದ್ಯದಲ್ಲಿಯೂ ಮುಂದುವರಿಯಿತು. ಕಳೆದೊಂದು ವರ್ಷದಿಂದ ಅವರು ತಂಡದಲ್ಲಿ ಕೇವಲ ಲೆಕ್ಕ ಭರ್ತಿಗೆ ಇದ್ದಂತೆ ತೋರುತ್ತಿದೆ. ಪತ್ರಿ ಪಂದ್ಯದಲ್ಲಿಯೂ ಕಳಪೆ ಪ್ರದರ್ಶನ ತೋರುತ್ತಿದ್ದಾರೆ. ಈ ಪಂದ್ಯದಲ್ಲಿ ಅವರ ಗಳಿಕೆ 10 ರನ್. ಇನ್ನು ನಾಯಕಿ ಹರ್ಮನ್ಪ್ರೀತ್ ಕೌರ್ ಕಥೆಯೂ ಕೂಡ ಇದೇ ಆಗಿದೆ. ಅವರು ಕೂಡ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದಾರೆ.
ಈ ಪಂದ್ಯದಲ್ಲಿ ಕೌರ್ ಗಳಿಕೆ 9 ರನ್. ಆ ಬಳಿಕ ಬಂದ ಆಲ್ರೌಂಡರ್ ದೀಪ್ತಿ ಶರ್ಮಾ ಕೂಡ ಖಾತೆ ತೆರೆಯುವಲ್ಲಿ ವಿಫಲರಾದರು. ರಿಚಾ ಘೋಷ್ (4) ಹಾಗೂ ಪೂಜಾ ವಸ್ತ್ರಾಕರ್ (6) ಒಂದಂಕಿಗೆ ಸೀಮಿತವಾಯಿತು. ಕರ್ನಾಟಕದ ಯುವ ಆಟಗಾರ್ತಿ ಶ್ರೇಯಾಂಕ ಪಾಟೀಲ್ ಈ ಪಂದ್ಯದಲ್ಲಾದರೂ ಉತ್ತಮ ಪ್ರದರ್ಶನ ತೋರಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಇದು ಹುಸಿಗೊಂಡಿತು. ಅವರು ಕೂಡ 4 ರನ್ಗೆ ಸೀಮಿತರಾದರು.
ಇದನ್ನೂ ಓದಿ IND vs SA: ಬೌನ್ಸಿ ಪಿಚ್ನಲ್ಲಿ ಹರಿಣಗಳ ಸವಾಲು ಮೆಟ್ಟಿ ನಿಂತಿತೇ ಯಂಗ್ ಇಂಡಿಯಾ?
ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಟೊಂಕ ಕಟ್ಟಿ ನಿಂತ ಜೆಮಿಮಾ 33 ಎಸೆತಗಳಲ್ಲಿ 30 ರನ್ ಬಾರಿಸಿದರು. ಸಾರ ಗ್ಲೆನ್ ಓವರ್ನಲ್ಲಿ ಸತತ 2 ಬೌಂಡರಿ ಬಾರಿಸಿದ ಮರು ಎಸೆತದಲ್ಲಿ ಸಿಂಗಲ್ ತೆಗೆಯುವ ಪ್ರಯತ್ನದಲ್ಲಿ ನುಗ್ಗಿ ಬಂದ ಚೆಂಡು ಪ್ಯಾಡ್ಗೆ ಬಡಿದು ಎಲ್ಬಿಡಬ್ಲ್ಯು ಆದರು. ಅಂತಿಮವಾಗಿ ಸೈಕಾ ಇಶಾಖ್ 8 ರನ್ಗಳಿಸಿ ಕ್ಲೀನ್ ಬೌಲ್ಡ್ ಆದರು. ಇದರೊಂದಿಗೆ ಟೀಮ್ ಇಂಡಿಯಾದ ಬ್ಯಾಟಿಂಗ್ ಇನಿಂಗ್ಸ್ ಕೂಡ ಕೊನೆಗೊಂಡಿತು. ಭಾರತ ಪರ ಕೇವಲ 2 ಬ್ಯಾಟರ್ ಮಾತ್ರ ಎರಡಂಕಿ ಮೊತ್ತ ಕಲೆಹಾಕಿದರು.
ಇಂಗ್ಲೆಂಡ್ಗೂ ಆರಂಭಿಕ ಆಘಾತ
81 ರನ್ಗಳ ಸುಲಭ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡ ಕೂಡ ಉತ್ತಮ ಆರಂಭಿಕ ಆಘಾತ ಎದುರಿಸಿತು. ಮೂರನೇ ಓವರ್ನಲ್ಲಿ ಸೋಫಿಯಾ ಡಂಕ್ಲಿ (6) ಹಾಗೂ ಡೇನಿಯಲ್ ವ್ಯಾಟ್ (0) ಅವರನ್ನು ಬೌಲ್ಡ್ ಮಾಡುವ ಮೂಲಕ ರೇಣುಕಾ ಸಿಂಗ್ ಭಾರತಕ್ಕೆ ಆರಂಭಿಕ ಮುನ್ನಡೆ ತಂದು ಕೊಟ್ಟರು. ಆದರೆ ಮೂರನೇ ವಿಕೆಟ್ಗೆ ಜತೆಯಾದ ಆಲಿಸ್ ಕ್ಯಾಪ್ಸಿ ಮತ್ತು ನ್ಯಾಟ್ ಸ್ಕಿವರ್ ಬ್ರಂಟ್ ರಕ್ಷಣಾತ್ಮಕ ಜತೆಯಾಟವಾಡುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿ ಗೆಲುವಿನ ದಡ ಸೇರಿಸಿದರು. ಈ ಜೋಡಿ ಮೂರನೇ ವಿಕೆಟ್ಗೆ 42 ರನ್ಗಳಿಸಿತು. ಆಲಿಸ್ ಕ್ಯಾಪ್ಸಿ (25) ಮತ್ತು ಸ್ಕಿವರ್ ಬ್ರಂಟ್(16) ರನ್ ಬಾರಿಸಿದರು.