Site icon Vistara News

INDW vs SAW: ವಿಶ್ವ ದಾಖಲೆ ನಿರ್ಮಿಸಿದ ಭಾರತ ಮಹಿಳಾ ತಂಡ

INDW vs SAW

INDW vs SAW: India surpass Australia's all-time record of highest-team total in Women's Test

ಚೆನ್ನೈ: ಪ್ರವಾಸಿ ದಕ್ಷಿಣ ಆಫ್ರಿಕಾ(INDW vs SAW) ವಿರುದ್ಧ ಸಾಗುತ್ತಿರುವ ಏಕೈಕ ಟೆಸ್ಟ್​ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಸಂಘಟಿತ ಬ್ಯಾಟಿಂಗ್​ ಪ್ರದರ್ಶನ ತೋರುವ ಮೂಲಕ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದೆ. ಮೊದಲ ದಿನದಾಟದ ಅಂತ್ಯಕ್ಕೆ ನಾಲ್ಕು ವಿಕೆಟ್ ನಷ್ಟಕ್ಕೆ 525 ರನ್ ಗಳಿಸಿದ್ದ ಭಾರತ ದ್ವಿತೀಯ ದಿನದಾಟದಲ್ಲಿ 78 ರನ್​ ಕಲೆ ಹಾಕಿ ಒಟ್ಟು 6 ವಿಕೆಟ್​ಗೆ 603 ರನ್​ ಬಾರಿಸಿ ಡಿಕ್ಲೇರ್​ ಘೋಷಿಸಿದೆ.

603 ರನ್ ಗಳಿಸುವ ಮೂಲಕ ಮಹಿಳಾ ಟೆಸ್ಟ್​ ಕ್ರಿಕೆಟ್​ನಲ್ಲಿ(highest-team total in Women’s Test) ಅತ್ಯಧಿಕ ರನ್​ ಕಲೆಹಾಕಿದ ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಇದಕ್ಕೂ ಮುನ್ನ ಈ ದಾಖಲೆ ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿತ್ತು. ಅಚ್ಚರಿ ಎಂದರೆ ಇದೇ ವರ್ಷ ಪರ್ತ್​ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 575 ರನ್​ಗಳಿಸಿ ಈ ದಾಖಲೆ ಬರೆದಿತ್ತು. ಆದರೆ ಕೆಲವೇ ತಿಂಗಳ ಅಂತರದಲ್ಲಿ ಈ ದಾಖಲೆ ಪತನಗೊಂಡಿದೆ.

ಸದ್ಯ ಈ ಟೆಸ್ಟ್ ಪಂದ್ಯದಲ್ಲಿ ಭಾರತ ಬಿಗಿ ಹಿಡಿತ ಸಾಧಿಸಿದೆ. ಮೊದಲ ದಿನದಾಟಕ್ಕೆ ಅಜೇಯರಾಗಿದ್ದ ನಾಯಕಿ ಹರ್ಮನ್ ಮತ್ತು ವಿಕೆಟ್ ಕೀಪರ್ ರಿಚಾ ಘೋಷ್ ಇಂದು ಆರಂಭಗೊಂಡ ದ್ವಿತೀಯ ದಿನದಾಟದಲ್ಲಿ ಅರ್ಧಶತಕ ಬಾರಿಸಿ ಗಮನಸೆಳೆದರು. ಹರ್ಮನ್​ಪ್ರೀತ್​ 69 ರನ್ ಗಳಿಸಿದರೆ, ರಿಚಾ 86 ರನ್ ವಿಕೆಟ್​ ಒಪ್ಪಿಸಿದರು. ರಿಚಾ ಔಟಾಗುತ್ತಿದ್ದಂತೆ ಭಾರತ ತಂಡವು ಡಿಕ್ಲೇರ್ ಘೋಷಿಸಿತು. ಸದ್ಯ ಚೇಸಿಂಗ್​ ನಡೆಸುತ್ತಿರುವ ದಕ್ಷಿಣ ಆಫ್ರಿಕಾ 1 ವಿಕೆಟ್ ಕಳೆದುಕೊಂಡು 50ರ ಗಡಿ ದಾಟಿದೆ. ​

ಇದನ್ನೂ ಓದಿ IND vs SA Final: ವಿಶ್ವಕಪ್​ ಗೆಲ್ಲಲು ಕೊಹ್ಲಿ, ರೋಹಿತ್​, ದ್ರಾವಿಡ್​ಗೆ ಇದು ಕೊನೆಯ ಅವಕಾಶ!

ಮೊದಲ ದಿನದಾಟದಲ್ಲಿ ಸೊಗಸಾದ ಬ್ಯಾಟಿಂಗ್​ ನಡೆಸಿದ ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂಧಾನ ಶತಕ ಸಂಭ್ರಮಿಸಿದರೆ, ಇವರ ಜತೆಗಾರ್ತಿ ಶಫಾಲಿ ವರ್ಷ ಬಿರುಸಿನ ಬ್ಯಾಟಿಂಗ್​ ಮೂಲಕ ದ್ವಿಶತಕ ಬಾರಿಸಿ ಮಿಂಚಿದರು. ದಕ್ಷಿಣ ಆಫ್ರಿಕಾ ಬೌಲರ್​ಗಳನ್ನು ಬೆಂಡೆತ್ತಿದ ಇವರಿಬ್ಬರು ಮೊದಲ ವಿಕೆಟ್​ಗೆ ದಾಖಲೆಯ 292 ರನ್ ಜೊತೆಯಾಟವಾಡಿದರು. ಮಂಧಾನ 149 ರನ್ ಗಳಿಸಿದರೆ, ಶಫಾಲಿ 197 ಎಸೆತಗಳಲ್ಲಿ 205 ರನ್ ಮಾಡಿದರು. ಈ ಇನ್ನಿಂಗ್ಸ್ ನಲ್ಲಿ ಅವರು 23 ಬೌಂಡರಿ ಮತ್ತು 8 ಸಿಕ್ಸರ್ ಚಚ್ಚಿದರು. ಈ ವಿಕೆಟ್​ ಪತನದ ಬಳಿಕ ಆಡಲಿಳಿದ ಮಧ್ಯಮ ಕ್ರಮಾಂಕದ ನಂಬಿಕಸ್ತ ಆಟಗಾರ್ತಿ ಜೆಮಿಮಾ ರೋಡ್ರಿಗಸ್ 55 ರನ್ ಬಾರಿಸಿದರು.

ಮೊದಲು ವಿಕೆಟ್ 292 ರನ್ ಜೊತೆಯಾಟವಾಡಿದ ಮಂಧನಾ ಮತ್ತು ಶಫಾಲಿ ಹೊಸ ವಿಶ್ವದಾಖಲೆ ಬರೆದರು. 2004 ರಲ್ಲಿ ಕರಾಚಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪಾಕಿಸ್ತಾನದ ಸಜ್ಜಿದಾ ಶಾ ಮತ್ತು ಕಿರಣ್ ಬಲೂಚ್ ಅವರ 241 ರನ್ ಆರಂಭಿಕ ವಿಕೆಟ್ ಜೊತೆಯಾಟದ ದಾಖಲೆಯನ್ನು ಶಫಾಲಿ ಮತ್ತು ಸ್ಮೃತಿ ಹಿಂದಿಕ್ಕಿದರು.

Exit mobile version