ನವ ದೆಹಲಿ: ಆಸ್ಟ್ರೇಲಿಯಾದ ಆಲ್ರೌಂಡರ್ ಮಿಚೆಲ್ ಮಾರ್ಷ್ (Mitchell Marsh) ಬಲ ಸ್ನಾಯುಸೆಳೆತದ ಗಾಯದಿಂದಾಗಿ ಚಿಕಿತ್ಸೆಗಾಗಿ ಮನೆಗೆ ಮರಳಬೇಕಾಗಿರುವುದರಿಂದ ಐಪಿಎಲ್ 2024ರಲ್ಲಿ (IPL 2024) ಡೆಲ್ಲಿ ಕ್ಯಾಪಿಟಲ್ಸ್ ತಂಡ ಗಮನಾರ್ಹ ಹಿನ್ನಡೆಯನ್ನು ಎದುರಿಸಿದೆ. ಮುಂಬರುವ ಟಿ 20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾದ ನಾಯಕತ್ವಕ್ಕಾಗಿ ಸ್ಪರ್ಧೆಯಲ್ಲಿದ್ದ ಮಾರ್ಷ್ ಅವರನ್ನು ದೆಹಲಿ ತಂಡದ ಮ್ಯಾನೇಜ್ಮೆಂಟ್ನೊಂದಿಗೆ ಚರ್ಚಿಸಿದ ನಂತರ ವಾಪಸ್ ಕರೆಸಿಕೊಳ್ಳಲಾಗಿದೆ ಎಂದು ಇಎಸ್ಪಿಎನ್ ಕ್ರಿಕ್ಇನ್ಫೋ ವರದಿ ಮಾಡಿದೆ.
ಐಪಿಎಲ್ ಋತುವಿನ ಉಳಿದ ಭಾಗಕ್ಕೆ ಅವರ ಲಭ್ಯತೆಯ ಬಗ್ಗೆ ನಿರ್ಧಾರ ಪ್ರಕಟಗೊಂಡಿಲ್ಲ. ಮಾರ್ಷ್ ಕೊನೆಯ ಬಾರಿಗೆ ಏಪ್ರಿಲ್ 3 ರಂದು ಕೆಕೆಆರ್ ವಿರುದ್ಧ ಕಾಣಿಸಿಕೊಂಡರು. ಅವರು ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ನಂತರದ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು. ಈ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 23 ರನ್ ಗಳಿಸಿದ್ದು ಅವರ ಗರಿಷ್ಠ ಸ್ಕೋರ್ ಆಗಿದೆ. ಈ ಪಂದ್ಯದಲ್ಲಿ ರಾಜಸ್ಥಾನ್ 12 ರನ್ಳಿಂದ ಜಯಗಳಿಸಿತು. ದುರದೃಷ್ಟವಶಾತ್, ಕೆಕೆಆರ್ ವಿರುದ್ಧದ 106 ರನ್ಗಳ ಸೋಲಿನಲ್ಲಿ ಅವರು ಡಕ್ ಔಟ್ ಆಗಿದ್ದರು.
🚨 Mitchell Marsh has returned to Australia to treat the partial tear in his right hamstring
— ESPNcricinfo (@ESPNcricinfo) April 13, 2024
ESPNcricinfo has learned that the allrounder was recalled by Cricket Australia after coordination with Delhi Capitals 🔁 #IPL2024 pic.twitter.com/wMOQcE1TC4
ಉತ್ತಮ ಫಾರ್ಮ್
ಮಾರ್ಷ್ ಆಸ್ಟ್ರೇಲಿಯಾಕ್ಕಾಗಿ ವಿವಿಧ ಸ್ವರೂಪಗಳಲ್ಲಿ ಪ್ರಭಾವಶಾಲಿ ಫಾರ್ಮ್ನಲ್ಲಿದ್ದರು. ಇದರಿಂದಾಗಿ ಅವರು ವರ್ಷದ ಅತ್ಯುತ್ತಮ ಪುರುಷರ ಆಸ್ಟ್ರೇಲಿಯನ್ ಕ್ರಿಕೆಟಿಗರಿಗೆ ನೀಡುವ ಅಲನ್ ಬಾರ್ಡರ್ ಪದಕ ಸಿಗುವಂತೆ ಮಾಡಿತ್ತು. ಜನವರಿ 2023 ರಿಂದ 32 ವರ್ಷದ ಮಾರ್ಷ್ 38 ಪಂದ್ಯಗಳಲ್ಲಿ 1,954 ಅಂತಾರಾಷ್ಟ್ರೀಯ ರನ್ ಗಳಿಸಿದ್ದಾರೆ. ಮೂರು ಶತಕಗಳು ಸೇರಿದಂತೆ 50.10 ಸರಾಸರಿಯನ್ನು ಹೊಂದಿದ್ದಾರೆ ಮತ್ತು 10 ವಿಕೆಟ್ಗಳನ್ನು ಸಹ ಪಡೆದಿದ್ದಾರೆ. ಕಳೆದ ಒಂದು ವರ್ಷದಿಂದ, ಮಿಚೆಲ್ ಮಾರ್ಷ್ ಎಲ್ಲಾ ಮೂರು ಸ್ವರೂಪಗಳಲ್ಲಿ ಆಟಗಾರನಾಗಿ ಮರಳಿದ ನಂತರ ಅವರ ಕೆಲಸದ ಹೊರೆಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡುತ್ತಿದೆ.
ಮಾರ್ಷ್ ಅನುಪಸ್ಥಿತಿಯ ಹೊರತಾಗಿ, ಜಿಟಿ ವಿರುದ್ಧದ ಮುಂಬರುವ ಪಂದ್ಯಕ್ಕೆ ಮುಂಚಿತವಾಗಿ ಆಸ್ಟ್ರೇಲಿಯಾದ ಅನುಭವಿ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರ ಫಿಟ್ನೆಸ್ ಬಗ್ಗೆಯೂ ಡಿಸಿ ಈಗ ಚಿಂತಿತವಾಗಿದೆ. ಕಳೆದ ಶುಕ್ರವಾರ ಎಲ್ಎಸ್ಜಿ ವಿರುದ್ಧದ ಪಂದ್ಯದಲ್ಲಿ ಕ್ಯಾಚ್ ಹಿಡಿಯಲು ಪ್ರಯತ್ನಿಸುವಾಗ ವಾರ್ನರ್ ಬೆರಳಿಗೆ ಗಾಯವಾಗಿತ್ತು. ಗಾಯವು ಊತಕ್ಕೆ ಕಾರಣವಾಗಿತ್ತು. ತಂಡವು ಅಹಮದಾಬಾದ್ಗೆ ಆಗಮಿಸಿದ ನಂತರ ವಾರ್ನರ್ ಸ್ಕ್ಯಾನ್ಗೆ ಒಳಗಾಗಬೇಕಾಗಿತ್ತು.