Site icon Vistara News

IPL 2023 : ಭರ್ಜರಿ ಗೆಲುವಿನ ನಡುವೆಯೇ ಆರ್​ಸಿಬಿಗೆ ಗಾಯದ ಆಘಾತ, ಪ್ರಮುಖ ಬೌಲರ್​ ಔಟ್​?

Injury shock for RCB in the middle of a great victory, important bowler out?

#image_title

ಬೆಂಗಳೂರು: ಹಾಲಿ ಆವೃತ್ತಿಯ ಐಪಿಎಲ್​​ಗೆ ಆರಂಭದಿಂದಲೇ ಆಟಗಾರರ ಗಾಯದ ಸಮಸ್ಯೆ ಕಾಡುತ್ತಿದೆ. ಟೂರ್ನಿ ಶುರುವಾಗುವ ಮೊದಲೇ 13 ಆಟಗಾರರು ಗಾಯಗೊಂಡು ಅಲಭ್ಯರಾಗಿದ್ದರೆ ಶುರುವಾದ ಬಳಿಕವೂ ಅದೇ ಸಮಸ್ಯೆ ಮುಂದುವರಿದಿದೆ. ಗಾಯದ ಸಮಸ್ಯೆ ವಿಚಾರದಲ್ಲಿ ಆರ್​ಸಿಬಿಯೂ ಪಾಡು ಪಡುತ್ತಿದ್ದು, ಮತ್ತೊಬ್ಬ ಪ್ರಮುಖ ಬೌಲರ್​ ಟೂರ್ನಿಯಿಂದ ಹೊರಕ್ಕೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಬೆಂಗಳೂರಿನಲ್ಲಿ ಭಾನುವಾರ ನಡೆದ ಮುಂಬಯಿ ಇಂಡಿಯನ್ಸ್​ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್​ನ ಬೌಲರ್ ರೀಸ್​ ಟೋಪ್ಲೆ ಗಾಯಗೊಂಡಿದ್ದಾರೆ.

ಮುಂಬಯಿ ವಿರುದ್ಧದ ಪಂದ್ಯದಲ್ಲಿ ಟೋಪ್ಲೆ ಫೀಲ್ಡಿಂಗ್ ಮಾಡುವಾಗ ನೆಲಕ್ಕೆ ಬಿದ್ದಿದ್ದರು. ಪರಿಣಾಮ ಅವರ ಭುಜದ ಮೂಳೆ ಕಳಚಿಕೊಂಡಿದೆ. ಹೀಗಾಗಿ ಅವರು ಮುಂದಿನ ಪಂದ್ಯಗಳಿಗೆ ಲಭ್ಯರಾಗುವರೇ ಎಂಬುದು ಗೊತ್ತಿಲ್ಲ. ಆರ್​ಸಿಬಿ ಹೆಡ್​ಕೋಚ್​ ಮೈಕ್​ ಹೆಸ್ಸಾನ್​ ಪ್ರಕಾರ ರೀಸ್ ಟೋಪ್ಲೆ ಅವರು ಸುಧಾರಿಸಿಕೊಂಡಿದ್ದಾರೆ. ಆದರೆ, ಅವರ ಗಾಯದ ಸ್ಥಿತಿಯ ಬಗ್ಗೆ ಹೆಚ್ಚಿನ ಮಾಹಿತಿ ಅವರಿಗಿಲ್ಲ.

ದುರದೃಷ್ಟವಶಾತ್​ ಫೀಲ್ಡಿಂಗ್ ಮಾಡುವಾಗ ರೀಸ್ ಟೋಪ್ಲೆಯ ಮಂಡಿ ನೆಲಕ್ಕೆ ಬಡಿಯಿತು. ಸಮತೋಲನ ತಪ್ಪಿ ಅವರು ನೆಲಕ್ಕೆ ಬಿದ್ದರು. ಹೀಗಾಗಿ ಭುಜದ ಮೂಳೆ ಕಳಚಿಕೊಂಡಿದೆ. ತಕ್ಷಣ ವೈದ್ಯಕೀಯ ತಂಡ ಅವರ ಭುಜದ ಮೂಳೆಯನ್ನು ಸ್ವಸ್ಥಾನದಲ್ಲಿ ನಿಲ್ಲಿಸಿದ್ದಾರೆ ಎಂದು ಹೆಸ್ಸಾನ್ ಅವರು ಆರ್​​ಸಿಬಿಯ ಯೂಟ್ಯೂಬ್​ ಚಾನೆಲ್​ನಲ್ಲಿ ಮಾಹಿತಿ ನೀಡಿದ್ದಾರೆ.

ರೀಸ್ ಟೋಪ್ಲೆ ಅವರನ್ನು ಸ್ಕ್ಯಾನ್​ಗೆ ಒಳಪಡಿಸಲಾಗಿದೆ. ಆರಂಭಿಕ ವರದಿ ಪ್ರಕಾರ ಅವರ ಗಾಯದ ಸಮಸ್ಯೆ ಗಂಭೀರವಾಗಿಲ್ಲ. ಹೀಗಾಗಿ ತಂಡದ ಜತೆಯೇ ಇದ್ದಾರೆ. ಮುಂದಿನ ವರದಿಯು ಯಾವ ರೀತಿ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಅವರು ಹೇಳಿದ್ದಾರೆ.

ಆರ್​ಸಿಬಿ ತಂಡ ಈಗಾಗಲೇ ರಜತ್ ಪಾಟೀದಾರ್​ ಹಾಗೂ ವೇಗದ ಬೌಲರ್​ ಜೋಶ್​ ಹೇಜಲ್​ವುಡ್​ ಅವರ ಸೇವೆಯನ್ನು ಗಾಯದ ಸಮಸ್ಯೆಯಿಂದಾಗಿ ಕಳೆದುಕೊಂಡಿದ್ದಾರೆ. ಇವರಿಬ್ಬರೂ ಐಪಿಎಲ್​ನ ಆರಂಭಿಕ ಪಂದ್ಯಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ.

ಕೇನ್​ ವಿಲಿಯಮ್ಸ್​​ ವಾಪಸ್​ ತವರಿಗೆ

16ನೇ ಆವೃತ್ತಿಯ ಐಪಿಎಲ್(IPL 2023) ಟೂರ್ನಿಯ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಮೊಣಕಾಲು ಗಾಯಕ್ಕೆ ತುತ್ತಾಗಿ ಟೂರ್ನಿಯಿಂದ ಹೊರಬಿದ್ದ ಗುಜರಾತ್ ಟೈಟಾನ್ಸ್(Gujarat Titans)​ ತಂಡದ ಆಟಗಾರ ಕೇನ್​ ವಿಲಿಯಮ್ಸನ್(Kane Williamson)​ ಅವರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ತವರಿನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಫೋಟೊವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿರುವ ವಿಲಿಯಮ್ಸನ್ ಈ ಬಾರಿಯ ಐಪಿಎಲ್​ ಆಡಲು ಸಾಧ್ಯವಾಗದ ಬಗ್ಗೆ ಭಾವನಾತ್ಮಕ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.

“ಈ ಆವೃತ್ತಿಯ ಮುಂಬರುವ ಪಂದ್ಯಗಳಿಗೆ ನನ್ನ ಗುಜರಾತ್ ಟೈಟಾನ್ಸ್ ತಂಡಕ್ಕೆ ಶುಭ ಹಾರೈಕೆಗಳು. ನಾನು ನಿಮ್ಮೊಂದಿಗೆ ಆಡಲು ಸಾಧ್ಯವಾಗದೆ ಇರುವುದಕ್ಕೆ ಬೇಸರವಿದೆ. ನನ್ನನ್ನು ಬೆಂಬಲಿಸಿದ ಎಲ್ಲ ಅಭಿಮಾನಿಗಳಿಗೂ ಧನ್ಯವಾದಗಳು. ಆದಷ್ಟು ಬೇಗ ಗುಣಮುಖರಾಗಲು ಎದುರು ನೋಡುತ್ತಿದ್ದೇನೆ. ಧನ್ಯವಾದಗಳು” ಎಂದು ಕೇನ್ ವಿಲಿಯಮ್ಸನ್‌ ಶುಭ ಹಾರೈಸಿದ್ದಾರೆ. ಈ ವೀಡಿಯೊವನ್ನು ಗುಜರಾತ್​ ಟೈಟಾನ್ಸ್​ ತನ್ನ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದೆ.

ಇದನ್ನೂ ಓದಿ IPL 2023: ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಲಕ್ನೋ ಸೂಪರ್‌ ಜೈಂಟ್ಸ್‌ ಪಂದ್ಯದ ಪಿಚ್​ ರಿಪೋರ್ಟ್​

ಭಾನುವಾರ ಕೇನ್​ ವಿಲಿಯಮ್ಸನ್​ ಅವರ ಮೊಣಕಾಲು ಗಾಯ ಗಂಭೀರ ಸ್ವರೂಪದಿಂದ ಕೂಡಿದೆ. ಹೆಚ್ಚಿನ ಚಿಕಿತ್ಸೆಗಾಗಿ ಅವರು ತಮ್ಮ ತವರು ನ್ಯೂಜಿಲ್ಯಾಂಡ್​ಗೆ ತೆರಳಲಿದ್ದಾರೆ. ಅವರ ಬದಲು ತಂಡಕ್ಕೆ ಬದಲಿ ಆಟಗಾರನನ್ನು ಇನ್ನಷ್ಟೇ ಅಂತಿಮಗೊಳಿಸಬೇಕಿದೆ. ಈ ಕುರಿತು ಸೂಕ್ತ ಸಮಯದಲ್ಲಿ ಘೋಷಣೆ ಮಾಡಲಾಗುವುದು ಎಂದು ಪ್ರಾಂಚೈಸಿ ತಿಳಿಸಿತ್ತು. ಇದೀಗ ಕೇನ್​ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

Exit mobile version