Site icon Vistara News

Judo Championship | ವಿಶ್ವ ಚಾಂಪಿಯನ್‌ಷಿಪ್‌ ಗೆದ್ದು ದಾಖಲೆ ಬರೆದ ಭಾರತದ ಲಿಂತೊಯಿ

judo championship

ನವದೆಹಲಿ : ಮಣಿಪುರದ ೧೬ ವರ್ಷದ ಮಹಿಳಾ ಜೂಡೊ ಪಟು ಲಿಂತೊಯಿ ಚನಂಬಮ್‌, ಬೋಸ್ನಿಯಾದಲ್ಲಿ ನಡೆದ ಕೆಡೆಟ್‌ ಜೂಡೊ ವಿಶ್ವ ಚಾಂಪಿಯನ್‌ಷಿಪ್‌ನ (Judo Championship) ೫೭ ಕೆ.ಜಿ ವಿಭಾಗದಲ್ಲಿ ಬಂಗಾರದ ಪದಕ ಗೆದ್ದುಕೊಂಡಿದ್ದಾರೆ. ಈ ಮೂಲಕ ವಿಶ್ವ ಚಾಂಪಿಯನ್‌ಷಿಪ್‌ ಗೆದ್ದ ಭಾರತದ ಮೊಟ್ಟ ಮೊದಲ ಸ್ಪರ್ಧಿ ಎಂಬ ಇತಿಹಾಸ ನಿರ್ಮಿಸಿದ್ದಾರೆ.

ಶುಕ್ರವಾರ ನಡೆದ ಫೈನಲ್‌ ಸ್ಪರ್ಧೆಯಲ್ಲಿ ಅವರು ಬ್ರೆಜಿಲ್‌ನ ಬಿಯಾಂಕ ರೀಸ್‌ ಅವರನ್ನು ೧-೦ ಅಂಕಗಳಿಂದ ಮಣಿಸಿ ಬಂಗಾರದ ಪದಕಕ್ಕೆ ಕೊರಳೊಡ್ಡಿದರು. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ಇದೇ ಮೊದಲ ಪದಕವಾಗಿದ್ದು, ಇದುವರೆಗೆ ಯಾವುದೇ ವಿಭಾಗದಲ್ಲಿ ಪುರುಷ ಅಥವಾ ಮಹಿಳಾ ಸ್ಪರ್ಧಿಗಳು ಬಂಗಾರದ ಪದಕ ಗೆದ್ದಿರಲಿಲ್ಲ.

ಲಿಂತೊಯಿ ಚನಂಬಮ್‌ ಅವರು ಭಾರತದ ಇನ್‌ಸ್ಪೈಯರ್‌ ಇನ್‌ಸ್ಟಿಟ್ಯೂಟ್ಸ್‌ನ ಜೂಡೂ ಯೋಜನೆಯಲ್ಲಿ ೨೦೧೭ರಿಂದ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಈ ಯೋಜನೆಯಿಂದ ವಿಶ್ವ ಚಾಂಪಿಯನ್‌ಷಿಪ್‌ಗೆ ಮೊದಲು ಅವರು ಜಪಾನ್‌ನ ಸುಕುಬಾ ವಿಶ್ವ ವಿದ್ಯಾಲಯ, ಜಾರ್ಜಿಯಾ ಹಾಗೂ ಬೋಸ್ನಿಯಾದಲ್ಲಿ ತರಬೇತಿ ಪಡೆದುಕೊಂಡಿದ್ದಾರೆ.

2021ರಲ್ಲಿ ಚಂಡಿಗಢದಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಲಿಂತೋಯಿ ಚಿನ್ನದ ಗೆದ್ದಿದ್ದರು. ಅಂತೆಯೇ ಅದೇ ವರ್ಷ ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್‌ ಜೂನಿಯರ್‌ ಜೂಡೋ ಚಾಂಪಿಯನ್‌ಷಿಪ್‌ನಲ್ಲಿ ಸ್ವರ್ಣ ಪದಕ ಗೆದ್ದುಕೊಂಡರು.

“ನನಗೆ ಈ ಗೆಲುವನ್ನು ಯಾವ ರೀತಿ ಸಂಭ್ರಮಿಸಬೇಕು ಎಂದು ಗೊತ್ತಾಗುತ್ತಿಲ್ಲ. ಆದರೆ, ಈ ವಿಜಯದಿಂದ ನನಗೆ ಅತ್ಯಂತ ಖುಷಿಯಾಗಿದೆ. ಈ ಜಯವನ್ನು ಇನ್ನಷ್ಟು ಬೆಳೆಸುತ್ತೇನೆ,” ಎಂದು ಲಿಂತೋಯಿ ಹೇಳಿದ್ದಾರೆ.

ಇದನ್ನೂ ಓದಿ | Javelin Throw | ಲೂಸಾನ್‌ ಡೈಮಂಡ್‌ಲೀಗ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್‌ ಚೋಪ್ರಾ

Exit mobile version