Site icon Vistara News

FIFA World Cup | ಜಾಕಿರ್‌ ನಾಯ್ಕ್‌ಗೆ ಆಹ್ವಾನ, ಭಾರತದಲ್ಲಿ ಬಾಯ್ಕಾಟ್‌ ವಿಶ್ವ ಕಪ್‌ ಟ್ರೆಂಡಿಂಗ್‌

fifa world cup

ಬೆಂಗಳೂರು : ವಿವಾದಿತ ಇಸ್ಲಾಮಿಕ್‌ ಧರ್ಮಗುರು ಜಾಕಿರ್‌ ನಾಯ್ಕ್‌ ಅವರಿಗೆ ಫುಟ್ಬಾಲ್‌ ವಿಶ್ವ ಕಪ್‌ಗೆ (FIFA World Cup) ಆಹ್ವಾನ ಕೊಟ್ಟಿರುವ ಕತಾರ್‌ ಫುಟ್ಬಾಲ್‌ ಒಕ್ಕೂಟದ ನಿರ್ಧಾರಕ್ಕೆ ಭಾರತದಲ್ಲಿ ಭಾರೀ ವಿರೋಧ ವ್ಯಕ್ತವಾಗಿದ್ದು, ಬಾಯ್ಕಾಟ್‌ ಫಿಫಾ (ಫುಟ್ಬಾಲ್‌ಗೆ ಬಹಿಷ್ಕಾರ) ಟ್ರೆಂಡಿಂಗ್‌ ನಡೆಯುತ್ತಿದೆ. ಜಾಕಿರ್‌ ನಾಯಕ್‌ ವಿಶ್ವ ಕಪ್ ಉದ್ಘಾಟನಾ ಸಮಾರಂಭಕ್ಕೆ ಬಂದಿರುವ ವಿಡಿಯೊವನ್ನು ಅಲ್ಲಿನ ಕತಾರಿ ಟಿವಿಯ ಪತ್ರಕರ್ತರೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದರು. ಅಲ್ಲದೆ, ಅವರು ಇಸ್ಲಾಮ್‌ ಕುರಿತು ಪ್ರವಚನ ಕೂಡ ನೀಡಿದ್ದಾರೆ ಎಂಬುದಾಗಿ ಬರೆದುಕೊಂಡಿದ್ದಾರೆ. ಈ ವಿಷಯ ವಿರೋಧಕ್ಕೆ ಕಾರಣವಾಗಿದೆ.

ಜಾಕಿರ್‌ ಕತಾರ್‌ಗೆ ತೆರಳಿರುವ ವಿಷಯ ಸದ್ದಿಯಾಗುತ್ತಿದ್ದಂತೆ ಜಾಗತಿನ ಮೂಲೆಮೂಲೆಯಿಂದ ವಿರೋಧಗಳು ಎದುರಾಗುತ್ತಿವೆ. ಕ್ರೀಡೆಗಾಗಿ ಸೃಷ್ಟಿ ಮಾಡಿರು ವೇದಿಕೆಯಲ್ಲಿ ಧಾರ್ಮಿಕ ಪ್ರವಚನಗಳನ್ನು ನಡೆಸುತ್ತಿರುವುದು ಸರಿಯಾದ ಕ್ರಮವಲ್ಲ ಎಂಬುದಾಗಿ ಅಭಿಪ್ರಾಯಪಡುತ್ತಿದ್ದಾರೆ. ಅಂತೆಯೇ ಭಾರತದಲ್ಲಿ ಅಸಮಾಧಾನ ಎದ್ದಿದೆ.

ಭಾರತಕ್ಕೇಕೆ ಬೇಸರ

ಭಾರತೀಯ ಮೂಲದವರಾದ ಜಾಕಿರ್‌ ನಾಯ್ಕ್‌ ಅವರು ವಿವಾದಾತ್ಮಕ ಹಾಗೂ ದ್ವೇಷ ಭಾಷಣ ಮಾಡುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಮೇಲೆ ಭಾರತದಲ್ಲಿ ಪ್ರಕರಣಗಳೂ ದಾಖಲಾಗಿವೆ. ಹೀಗಾಗಿ ಭಾರತ ತೊರೆದಿರುವ ಅವರು ೨೦೧೭ರಿಂದ ಮಲೇಷ್ಯಾದಲ್ಲಿ ಬೀಡುಬಿಟ್ಟಿದ್ದಾರೆ. ಆದಾಗ್ಯೂ ಸಾಮಾಜಿಕ ಜಾಲತಾಣಗಳ ಮೂಲಕ ಅನುಯಾಯಿಗಳಿಗೆ ತಮ್ಮ ಭಾಷಣಗಳನ್ನು ತಲುಪಿಸುತ್ತಿದ್ದಾರೆ.

ಬಿಜೆಪಿ ನಾಯಕರಿಂದ ಬಹಿಷ್ಕಾರಕ್ಕೆ ಕರೆ

ಮಂಗಳವಾರ ಬಿಜೆಪಿ ವಕ್ತಾರ ಸಾವಿಯೊ ರೋಡ್ರಿಗಸ್‌ ಅವರು, ಕತಾರ್‌ನಲ್ಲಿ ನಡೆಯುತ್ತಿರುವ ಫುಟ್ಬಾಲ್ ವಿಶ್ವ ಕಪ್‌ ಅನ್ನು ಬಹಿಷ್ಕಾರ ಮಾಡುವಂತೆ ಭಾರತೀಯ ಫುಟ್ಬಾಲ್‌ ಒಕ್ಕೂಟ ಹಾಗೂ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದಾರೆ.

ಈ ಕುರಿತು ಅವರು ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದ್ದು “ಫಿಫಾ ವಿಶ್ವ ಕಪ್‌ ಜಾಗತಿಕ ಕ್ರೀಡಾಕೂಟ. ಜಗತ್ತಿನ ಮೂಲೆಮೂಲೆಯಿಂದ ಜನರು ಬಂದು ಆಟವನ್ನು ನೋಡಿ ಸಂಭ್ರಮಿಸುತ್ತಾರೆ. ಜಗತ್ತು ಭಯೋತ್ಪಾದನೆಯ ವಿರುದ್ಧ ಹೋರಾಟ ಮಾಡುತ್ತಿರುವ ಸಂದರ್ಭದಲ್ಲಿ, ಉಗ್ರರ ಬಗ್ಗೆ ಅನುಕಂಪ ತೋರಿಸುವ ಧಾರ್ಮಿಕ ನಾಯಕನನ್ನು ಫುಟ್ಬಾಲ್ ವಿಶ್ವ ಕಪ್‌ಗೆ ಕರೆದಿರುವುದು ತಪ್ಪು. ಅವರು ಅಲ್ಲೂ ತಮ್ಮ ದ್ವೇಷ ಭಾಷಣ ಮುಂದುವರಿಸಲಿದ್ದಾರೆ,” ಎಂಬುದಾಗಿ ಅವರು ಹೇಳಿದ್ದಾರೆ.

ಇದನ್ನೂ ಓದಿ | ವಿಸ್ತಾರ TOP 10 NEWS | ಮಂಗಳೂರಿನಲ್ಲಿ ಸ್ಫೋಟ, ಕೊಪ್ಪದಲ್ಲಿ ಲವ್‌ ಜಿಹಾದ್‌, ಕತಾರ್‌ನಲ್ಲಿ ಜಾಕಿರ್‌ ನಾಯ್ಕ್‌ ಹಾಗೂ ಇನ್ನಷ್ಟು ಪ್ರಮುಖ ಸುದ್ದಿಗಳಿವು

Exit mobile version