ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ತನಿಖೆ ನಡೆಸಲು (Wrestlers Protest) ಭಾರತೀಯ ಒಲಿಂಪಿಕ್ ಅಸೋಸಿಯೇಷನ್ 7 ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಿದೆ. ಈ ವಿಚಾರವನ್ನು ಐಒಎ ಅಧ್ಯಕ್ಷೆ ಪಿ.ಟಿ ಉಷಾ ಖಚಿತ ಪಡಿಸಿದ್ದಾರೆ.
ಮೇರಿ ಕೋಮ್, ಡೋಲಾ ಬ್ಯಾನರ್ಜಿ, ಅಲಕಾನಂದ ಅಶೋಕ್, ಯೋಗೇಶ್ವರ್ ದತ್, ಸಹದೇವ್ ಯಾದವ್ ಮತ್ತು ಇಬ್ಬರು ವಕೀಲರ ನೇತೃತ್ವದಲ್ಲಿ ತನಿಖೆ ನಡೆಯಲಿದೆ.
ಐಒಎ ಅಧ್ಯಕ್ಷೆ ಪಿ.ಟಿ ಉಷಾ ಮತ್ತು ಜಂಟಿ ಕಾರ್ಯದರ್ಶಿ ಕಲ್ಯಾಣ್ ಚೌಬೆ ಅವರೊಂದಿಗೆ ಅಭಿನವ್ ಬಿಂದ್ರಾ ಮತ್ತು ಯೋಗೇಶ್ವರ್ ಮುಂತಾದವರು ಭಾಗವಹಿಸಿದ್ದ ಐಒಎ ತುರ್ತು ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
“ಕುಸ್ತಿಯಲ್ಲಿನ ಇತ್ತೀಚಿನ ಬೆಳವಣಿಗೆಗಳಿಂದ ನಾನು ತೀವ್ರ ಕಳವಳಗೊಂಡಿದ್ದೇನೆ ಮತ್ತು ವಿಚಲಿತನಾಗಿದ್ದೇನೆ. ಕುಸ್ತಿ ಪಟುಗಳು ಮಾಡಿದ ಆರೋಪವನ್ನು ಗಂಭೀರವಾಗಿ ಪರಿಗಣಿಸಿ ಈ ಬಗ್ಗೆ ತನಿಖೆ ನಡೆಸುತ್ತೇವೆ” ಎಂದು ಐಒಎ ಅಧ್ಯಕ್ಷೆ ಪಿ.ಟಿ ಉಷಾ ಹೇಳಿದರು.
ಇದಕ್ಕೂ ಮುನ್ನ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ಗೆ ತೆರಳಿದ ಪ್ರತಿಭಟನಾನಿರತ ಕುಸ್ತಿಪಟುಗಳು, ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳದ ಆರೋಪದ ಬಗ್ಗೆ ತನಿಖೆ ನಡೆಸಲು ಸಮಿತಿ ರಚಿಸುವಂತೆ ಒತ್ತಾಯಿಸಿ ಪತ್ರ ಬರೆದಿದ್ದರು. ಇದೀಗ ಕುಸ್ತಿಪಟುಗಳ ಮನವಿಯನ್ನು ಗಂಭೀರವಾಗಿ ಪರಿಗಣಿಸಿರುವ ಐಒಎ ತನಿಖೆ ನಡೆಸಲು ಸಮಿತಿ ರಚಿಸಿದೆ.
ಟೋಕಿಯೊ ಒಲಿಂಪಿಕ್ಸ್ ಪದಕ ವಿಜೇತರಾದ ರವಿ ದಹಿಯಾ ಮತ್ತು ಬಜರಂಗ್ ಪುನಿಯಾ ರಿಯೊ ಗೇಮ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಸೇರಿದಂತೆ ಐವರು ಕುಸ್ತಿಪಟುಗಳು ಪತ್ರಕ್ಕೆ ಸಹಿ ಹಾಕುವ ಮೂಲಕ ಐಒಎ ಅಧ್ಯಕ್ಷೆ ಪಿ.ಟಿ ಉಷಾ ಅವರಿಗೆ ಮನವಿ ಮಾಡಿದ್ದರು. ಪತ್ರದಲ್ಲಿ ಪ್ರಸ್ತುತ ಅಧಿಕಾರದಲ್ಲಿರುವ ಭಾರತ ಕುಸ್ತಿ ಫೆಡರೇಷನ್ ವಿಸರ್ಜಿಸಬೇಕು ಮತ್ತು ಅದರ ಅಧ್ಯಕ್ಷರನ್ನು ವಜಾಗೊಳಿಸಬೇಕು ಎಂದು ಕುಸ್ತಿಪಟುಗಳು ಬೇಡಿಕೆ ಇರಿಸಿದ್ದರು. ಜತೆಗೆ ರಾಷ್ಟ್ರೀಯ ಒಕ್ಕೂಟದ ವ್ಯವಹಾರಗಳನ್ನು ನಡೆಸಲು ಕುಸ್ತಿಪಟುಗಳೊಂದಿಗೆ ಸಮಾಲೋಚಿಸಿ ಹೊಸ ಸಮಿತಿಯನ್ನು ರಚಿಸಬೇಕು ಎಂದು ಅವರು ಒತ್ತಾಯಿಸಿದ್ದರು.
ಈ ಪ್ರಕರಣ ರಾಜಕೀಯ ತಿರುವು ಪಡೆಯುತ್ತಿದ್ದಂತೆ ಇದೀಗ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಈ ಆರೋಪದ ಬಗ್ಗೆ ತನಿಖೆ ನಡೆಸಲು ಮುಂದಾಗಿದೆ. ಇನ್ನಾದರೂ ಕುಸ್ತಿ ಪಟುಗಳು ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸಲಿದ್ದಾರಾ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ | Wrestlers’ Protest | ಪ್ರತಿಭಟನಾ ನಿರತ ಕುಸ್ತಿ ಪಟುಗಳ ವಿರುದ್ಧ ಎಫ್ಐಆರ್?