ಹೈದರಾಬಾದ್: ಆರ್ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು ಗುರುವಾರ ನಡೆದ ಐಪಿಎಲ್(IPL 2023) ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಶತಕ ಬಾರಿಸುವ ಮೂಲಕ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 6ನೇ ಶತಕವನ್ನು ಪೂರೈಸಿದರು. ಈ ಮೂಲಕ ಕ್ರಿಸ್ ಗೇಲ್ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿದರು. ಆದರೆ ಕೊಹ್ಲಿಯ ಈ ಶತಕದಲ್ಲೊಂದು ಸ್ವಾರಸ್ಯಕರ ಸಂಗತಿ ಇದೆ.
ವಿರಾಟ್ ಕೊಹ್ಲಿ ಅವರು 2016ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದರು. ಅಂದು ಮೇ 18 ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊಹ್ಲಿ ಸಿಕ್ಸರ್ ಬೌಂಡರಿಗಳ ಮಳೆಯನ್ನೇ ಸುರಿಸಿ 113 ರನ್ ಬಾರಿಸಿದ್ದರು. ಕಾಕತಾಳಿಯ ಎಂಬತೆ ಗುರುವಾರ ಕೊಹ್ಲಿ ಬಾರಿಸಿದ ಶತಕವೂ ಮೇ 18ರಂದೇ ದಾಖಲಾಯಿತು. ಅಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ತಮ್ಮ ಕೈ ಬೆರಳಿಗೆ ಗಾಯವಾಗಿದ್ದರೂ ಪಂದ್ಯವನ್ನು ಆಡಿದ್ದರು. ಶತಕ ಬಾರಿಸಿದ ಬಳಿಕ ಗಂಟೆ ಬಾರಿಸಿದಂತೆ ಸನ್ನೆ ಮಾಡುವ ಮೂಲಕ ತಮ್ಮ ಕೈ ಬೆರಳಿಗೆ ಮೂರು ಸ್ಟಿಚ್ಗಳನ್ನು ಹಾಕಿರುವ ವಿಚಾರವನ್ನು ಬಹಿರಂಗಪಡಿಸಿದ್ದರು.
ಆ ಪಂದ್ಯದಲ್ಲಿ ಆರ್ಸಿಬಿ ಡಕ್ವರ್ತ್ ನಿಯಮದನ್ವಯ 82 ರನ್ ಅಂತರದಲ್ಲಿ ಗೆದ್ದು ಬೀಗಿತ್ತು. ಅಂದು ವಿರಾಟ್ ಕೊಹ್ಲಿಯ ಜತೆಗಾರ ಕ್ರಿಸ್ ಗೇಲ್ ಕೂಡ ಅರ್ಧಶತಕ ಬಾರಿಸಿದ್ದರು. ಗೇಲ್ 73 ರನ್ ಬಾರಿಸಿದ್ದರು. ಹೈದರಾಬಾದ್ ವಿರುದ್ಧ ಡು ಪ್ಲೆಸಿಸ್(71) ಕೂಡ ಅರ್ಧಶತಕ ಬಾರಿಸಿದರು. ಒಟ್ಟಾರೆ ಕೊಹ್ಲಿಗೆ ಜೆರ್ಸಿ ನಂ. 18 ಹೇಗೆ ಅದೃಷ್ಟವೋ ಹಾಗೆಯೇ ಈ ಸಂಖ್ಯೆಯ ದಿನಾಂಕವೂ ಅವರ ಜೀವನದಲ್ಲಿ ವಿಶೇಷವಾಗಿ ಕಾಣಿಸಿಕೊಂಡಿದೆ.
ಇದನ್ನೂ ಓದಿ IPL 2023: ಶತಕದ ಬಳಿಕ ಪತ್ನಿ ಅನುಷ್ಕಾಗೆ ಮೈದಾನದಿಂದಲೇ ವಿಡಿಯೊ ಕಾಲ್ ಮಾಡಿದ ಕೊಹ್ಲಿ
ಹೈದರಾಬಾದ್ಗೆ ಸೋಲು
ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಹೈದರಾಬಾದ್ ತಂಡ ಹೆನ್ರಿಕ್ ಕ್ಲಾಸೆನ್ ಅವರ ಶತಕದ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 186 ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ಆರ್ಸಿಬಿ ವಿರಾಟ್ ಕೊಹ್ಲಿಯ ಶತಕ ಮತ್ತು ಡು ಪ್ಲೆಸಿಸ್ ಅವರ ಅರ್ಧಶತಕದ ನೆರವಿನಿಂದ 19.2 ಓವರ್ಗಳಲ್ಲಿ 187 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಸದ್ಯ ಆರ್ಸಿಬಿ 14 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಮೇ 21ರಂದು ನಡೆಯುವ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಗೆದ್ದರೆ ಆರ್ಸಿಬಿ ಪ್ಲೇ ಆಫ್ ಪ್ರವೇಶ ಪಡೆಯಲಿದೆ.