ಮುಂಬಯಿ: ಐಪಿಎಲ್ನಲ್ಲಿ ಸತತ ಶತಕ ಸಿಡಿಸಿ ಮಿಂಚುತ್ತಿರುವ ಶುಭಮನ್ ಗಿಲ್ ಅವರ ಬ್ಯಾಟಿಂಗ್ ಬಗ್ಗೆ ಹಲವು ಕ್ರಿಕೆಟ್ ದಿಗ್ಗಜರು ಕೊಂಡಾಡಿದ್ದಾರೆ. ಆದರೆ ಆರ್ಸಿಬಿ ತಂಡದ ಮಾಜಿ ಆಟಗಾರ ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್ ಅವರು ಯಶಸ್ವಿ ಜೈಸ್ವಾಲ್ ಶ್ರೇಷ್ಠ ಆಟಗಾರ ಎಂದು ಹೆಸರಿಸಿದ್ದಾರೆ.
ಸದ್ಯ ಐಪಿಎಲ್ನ ಕಾಮೆಂಟ್ರಿ ಪ್ಯಾನಲ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಬಿಡಿ ಪ್ರಸ್ತುತ ಕ್ರಿಕೆಟ್ ಆಟಗಾರರ ಬಗೆಗಿನ ಕುರಿತು ಮಾತನಾಡುವ ವೇಳೆ ಜೈಸ್ವಾಲ್ ಕ್ರಿಕೆಟ್ ಭವಿಷ್ಯದ ಬಗ್ಗೆ ಉಪಯುಕ್ತ ಸಲಹೆ ನೀಡಿದ್ದಾರೆ, “ನನ್ನ ಪ್ರಕಾರ ಜೈಸ್ವಾಲ್ ದೊಡ್ಡ ಆಟಗಾರ. ಈ ಬಗ್ಗೆ ನನಗೆ ಖಚಿತತೆ ಇದೆ. ಇಷ್ಟು ಸಣ್ಣ ವಯಸ್ಸಿನಲ್ಲಿಯೇ ಫರ್ಪೆಕ್ಟ್ ಕ್ರಿಕೆಟ್ ಹೊಡೆತಗಳನ್ನು ಹೊಡೆಯುವುದನ್ನು ಕರಗತ ಮಾಡಿಕೊಂಡಿರುವ ಅವರು ಶ್ರೇಷ್ಠ ಆಟಗಾರನೇ. ಇದರಲ್ಲಿ ಯಾವುದೇ ಅನುಮಾನ ಬೇಡ. ಅದರಲ್ಲೂ ಪವರ್‌ಪ್ಲೇನಲ್ಲಿ ಎದುರಾಳಿ ಬೌಲರ್ಗಳಿಗೆ ಚಳಿ ಬಿಡಿಸುವ ಅವರ ಬ್ಯಾಟಿಂಗ್ ನೋಡುವುದೇ ಒಂದು ಖುಷಿ. ಅಂತಾರಾಷ್ಟ್ರೀಯ ಪಂದ್ಯವನ್ನು ಆಡುವ ಮುನ್ನವೇ ಇಂತಹ ಬ್ಯಾಟಿಂಗ್ ನಡೆಸುವುದು ಕಷ್ಟಕರ. ಆದರೆ ಇದು ಜೈಸ್ವಾಲ್‌ಗೆ ಸಲೀಸು” ಎಂದು ಹೇಳಿದರು.
ಇದೇ ವೇಳೆ ಶುಭಮನ್ ಗಿಲ್ ಬ್ಯಾಟಿಂಗ್ ಕುರಿತು ಮಾತನಾಡಿದ ಎಬಿಡಿ, ಗಿಲ್ ಸ್ವಲ್ಪ ವಯಸಾದವರು. ಹಾಗಾಗಿ ಜೈಸ್ವಾಲ್‌ಗೆ ದೀರ್ಘಾವಧಿ ಅವಕಾಶಗಳನ್ನು ನೀಡಬೇಕು. ಖಂಡಿತ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್ ಆಗಲಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ IPL 2023: ಮೋದಿ ಸ್ಟೇಡಿಯಂನಲ್ಲಿ ಪೊಲೀಸ್ ಅಧಿಕಾರಿಗೆ ಥಳಿಸಿದ ಮಹಿಳೆ; ವಿಡಿಯೊ ವೈರಲ್
21 ವರ್ಷದ ಜೈಸ್ವಾಲ್ ಅವರು ಈ ಬಾರಿಯ ಐಪಿಎಲ್ನಲ್ಲಿ 14 ಪಂದ್ಯಗಳನ್ನು ಆಡಿ 625 ರನ್ಗಳನ್ನು ಬಾರಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು 5 ಅರ್ಧಶತಕ ಒಳಗೊಂಡಿದೆ. ಸದ್ಯ ಅವರು ಜೂನ್ 7ರಿಂದ ಲಂಡನ್ನಲ್ಲಿ ಆರಂಭಗೊಳ್ಳಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಭಾಗವಾಗಿ ಭಾರತ ತಂಡದಲ್ಲಿ ಮೀಸಲು ಆಟಗಾರನಾಗಿ ಆಯ್ಕೆಯಾಗಿದ್ದಾರೆ.