ಮುಂಬಯಿ: ಮುಂಬೈ ಇಂಡಿಯನ್ಸ್ ವಿರುದ್ಧ ಸ್ಫೋಟಕ ಬ್ಯಾಟಿಂಗ್ ನಡೆಸಿದ ಅಜಿಂಕ್ಯ ರಹಾನೆ ಈ ಪಂದ್ಯದಲ್ಲಿ ಹಲವು ದಾಖಲೆಯನ್ನು ಬರೆದಿದ್ದಾರೆ. ಅರ್ಷದ್ ಖಾನ್ ಅವರ ಒಂದೇ ಓವರ್ನಲ್ಲಿ 1 ಸಿಕ್ಸ್ ಹಾಗು 4 ಬೌಂಡರಿ ಬಾರಿಸಿ ಒಟ್ಟು 23 ರನ್ ಬಾರಿಸಿ ಅಬ್ಬರಿಸಿದರು. ಈ ಸಿಡಿಲಬ್ಬರದ ಬ್ಯಾಟಿಂಗ್ ಪರಿಣಾಮ ರಹಾನೆ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ಈ ಬಾರಿಯ ಐಪಿಎಲ್ನಲ್ಲಿ ದಾಖಲಾದ ಅತ್ಯಂತ ವೇಗದ ಅರ್ಧಶತಕವಾಗಿದೆ. ಇದಕ್ಕೂ ಮುನ್ನ ಜಾಸ್ ಬಟ್ಲರ್ ಹಾಗೂ ಶಾರ್ದೂಲ್ ಠಾಕೂರ್ 20 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಇದೀಗ ಈ ದಾಖಲೆಯನ್ನು ರಹಾನೆ ಮುರಿದಿದ್ದಾರೆ.
ಕೇವಲ 19 ಎಸೆತಗಳಿಂದ ಅರ್ಧಶತಕ ಬಾರಿಸಿದ ರಹಾನೆ, ಚೆನ್ನೈ ಪರ ಅತಿ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಎರಡನೇ ಬ್ಯಾಟರ್ ಎಂಬ ಹಿರಿಮೆ ಪಾತ್ರರಾದರು. 2014ರಲ್ಲಿ ಸುರೇಶ್ ರೈನಾ ಅವರು 16 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಅಗ್ರ ಸ್ಥಾನ ಪಡೆದಿದ್ದಾರೆ. ಸಾರಸ್ಯವೆಂದರೆ ರೈನಾ ಕೂಡ ವಾಂಖೆಡೆ ಮೈದಾನದಲ್ಲಿಯೇ ಈ ಸಾಧನೆ ಮಾಡಿದ್ದರು. ಇದೀಗ ರಹಾನೆ ಕೂಡ ಇದೇ ಮೈದಾನದಲ್ಲಿ ಚೆನ್ನೈ ಪರ ಈ ಸಾಧನೆ ಮಾಡಿದ್ದಾರೆ.
ಮುಂಬೈ ವಿರುದ್ಧ ಐಪಿಎಲ್ನಲ್ಲಿ ಅತಿ ವೇಗದ ಅರ್ಧಶತಕ ಸಿಡಿಸಿದವರ ಪಟ್ಟಿಯಲ್ಲಿ ರಹಾನೆ ಮೂರನೇ ಆಟಗಾರನಾಗಿ ಮೂಡಿಬಂದರು. ಪ್ಯಾಟ್ ಕಮಿನ್ಸ್ ಮುಂಬೈ ವಿರುದ್ಧ 14 ಎಸೆತಗಳಿಂದ ಅರ್ಧಶತಕ ಬಾರಿಸಿ ಅಗ್ರ ಸ್ಥಾನದಲ್ಲಿದ್ದಾರೆ. ದ್ವಿತೀಯ ಸ್ಥಾನದಲ್ಲಿ ರಿಷಭ್ ಪಂತ್ ಕಾಣಿಸಿಕೊಂಡಿದ್ದಾರೆ. ಪಂತ್ 18 ಎಸೆತಗಳಿಂದ ಈ ಸಾಧನೆ ಮಾಡಿದ್ದರು.
ಇದನ್ನೂ ಓದಿ IPL 2023: ವಿರಾಟ್ ಕೊಹ್ಲಿಯ ಐಪಿಎಲ್ ದಾಖಲೆ ಮುರಿದ ಡೇವಿಡ್ ವಾರ್ನರ್
ಈ ಪಂದ್ಯದಲ್ಲಿ ಕೇವಲ 27 ಎಸೆತ ಎದುರಿಸಿದ ರಹಾನೆ ಮೂರು ಸಿಕ್ಸರ್ ಮತ್ತು 7 ಬೌಂಡರಿ ಸಿಡಿಸಿ 61 ರನ್ ಬಾರಿಸಿದರು. ಈ ಬ್ಯಾಟಿಂಗ್ ಪ್ರದರ್ಶನದ ಮೂಲಕ ಅವರು ತನ್ನಲ್ಲಿ ಇನ್ನೂ ಟಿ20 ಕ್ರಿಕೆಟ್ ಜೀವಂತವಾಗಿದೆ ಎಂಬ ಸ್ಪಷ್ಟ ಸಂದೇಶವೊಂದನ್ನು ನೀಡಿದ್ದಾರೆ. ಈ ಆವೃತ್ತಿಯ ಐಪಿಎಲ್ನಲ್ಲಿ ಆಡಿದ ಮೊದಲ ಪಂದ್ಯ ಇದಾಗಿತ್ತು. ಜತೆಗೆ ಐಪಿಎಲ್ನಲ್ಲಿ ರಹಾನೆ ಆಡಿದ 7ನೇ ತಂಡ ಚೆನ್ನೈ ಸೂಪರ್ಕಿಂಗ್ಸ್ ಆಗಿದೆ. ರಹಾನೆ ಅವರ ಈ ಬ್ಯಾಟಿಂಗ್ ಪ್ರದರ್ಶನಕ್ಕೆ ಟೀಮ್ ಇಂಡಿಯಾದ ಮಾಜಿ ಆಟಗಾರರಾದ ವೀರೇಂದ್ರ ಸೆಹವಾಗ್, ಜಹೀರ್ ಖಾನ್, ಸುರೇಶ್ ರೈನಾ ಸೇರಿ ಹಲವು ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ IPL 2023: ವಿರಾಟ್ ಕೊಹ್ಲಿಯ ಐಪಿಎಲ್ ದಾಖಲೆ ಮುರಿದ ಡೇವಿಡ್ ವಾರ್ನರ್
7 ವಿಕೆಟ್ ಗೆಲುವು ಸಾಧಿಸಿದ ಚೆನ್ನೈ
ಮುಂಬಯಿಯ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಶನಿವಾರದ ಐಪಿಎಲ್ನ(IPL 2023) ಡಬಲ್ ಹೆಡರ್ನ ದ್ವಿತೀಯ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಇಂಡಿಯನ್ಸ್ ನಾಟಕೀಯ ಕುಸಿತ ಕಂಡು 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ಹಿರಿಯ ಆಟಗಾರ ಅಜಿಂಕ್ಯ ರಹಾನೆ(61) ಅವರ ಸೊಗಸಾದ ಅರ್ಧಶತಕ ಮತ್ತು ಋತುರಾಜ್ ಗಾಯಕ್ವಾಡ್ ಅವರ ತಾಳ್ಮೆಯುತ ಬ್ಯಾಟಿಂಗ್ ನೆರವಿನಿಂದ 18.1 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 159 ರನ್ ಬಾರಿಸಿ ಗೆಲುವಿನ ನಗೆ ಬೀರಿತು. ಇದು ಚೆನ್ನೈಗೆ ಆಡಿದ ಮೂರು ಪಂದ್ಯಗಳಲ್ಲಿ ಒಲಿದ ಎರಡನೇ ಗೆಲುವಾಗಿದೆ.