ಬೆಂಗಳೂರು: ಐಪಿಎಲ್ನ ಬದ್ಧ ಎದುರಾಳಿಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಇಂದು(ಸೋಮವಾರ) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಕನ್ನಡಿಗ ಮನೋಜ್ ಭಾಂಡಗೆ ಅವಕಾಶ ಸಿಗುವ ಸಾಧ್ಯತೆಯೊಂದು ದಟ್ಟವಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕರ್ನಾಟಕದ ವೇಗಿ ವೈಶಾಖ್ ವಿಜಯ್ಕುಮಾರ್ ಅವರಿಗೆ ಆರ್ಸಿಬಿ ಅವಕಾಶ ನೀಡಿತ್ತು. ಚೊಚ್ಚಲ ಪಂದ್ಯದಲ್ಲಿಯೇ ವೈಶಾಖ್ ಅವರು 4 ಓವರ್ ಬೌಲಿಂಗ್ ನಡೆಸಿ ಕೇವಲ 20 ರನ್ ವೆಚ್ಚದಲ್ಲಿ ಪ್ರಮುಖ 3 ವಿಕೆಟ್ ಕಿತ್ತು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಮತ್ತೊಬ್ಬ ಕನ್ನಡಿಗ ಮನೋಜ್ ಭಾಂಡಗೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಅವಕಾಶ ನೀಡುವ ಸಾಧ್ಯತೆ ಇದೆ.
ಡೆಲ್ಲಿ ವಿರುದ್ಧದ ಪಂದ್ಯದ ಗೆಲುವಿನ ಬಳಿಕ ಆರ್ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಅವರು ವೈಶಾಖ್ ಅವರ ಬೌಲಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಜತೆಗೆ ಸ್ಥಳಿಯ ಆಟಗಾರರು ತಂಡದಲ್ಲಿದ್ದರೆ ಇದು ಹೆಚ್ಚಿನ ನೆರವು ನೀಡಲಿದೆ ಎಂದು ಹೇಳಿದ್ದರು. ಇದೇ ಕಾರಣಕ್ಕೆ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಮನೋಜ್ ಭಾಂಡೆ ಅವರನ್ನು ಕಣಕ್ಕಿಳಿಸುವ ಯೋಜನೆ ಆರ್ಸಿಬಿ ತಂಡದ್ದಾಗಿದೆ. ಏಕೆಂದರೆ ಅವರು ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿಯೇ ಆಡಿ ಬೆಳೆದವರು. ಹೀಗಾಗಿ ಅವರಿಗೆ ಇಲ್ಲಿನ ಪರಿಸ್ಥಿತಿಗೆ ತಕ್ಕಂತೆ ಆಡಿದ ಅನುಭವ ಇದೆ. ಇನ್ನೊಂದೆಡೆ ಹರ್ಷಲ್ ಪಟೇಲ್ ನಿರೀಕ್ಷಿತ ಮಟ್ಟದ ಪ್ರದರ್ಶನ ತೋರುತ್ತಿಲ್ಲ. ಹೀಗಾಗಿ ಅವರನ್ನು ಈ ಪಂದ್ಯದಿಂದ ಕೈ ಬಿಟ್ಟು ಆಲ್‌ರೌಂಡರ್ ಆಗಿರುವ ಮನೋಜ್ ಅವರಿಗೆ ಅವಕಾಶ ನೀಡಬಹುದು.
ಇದನ್ನೂ ಓದಿ IPL 2023: ಐಪಿಎಲ್ ಪ್ರತಿನಿಧಿಸಿದ ಮೊದಲ ಅವಳಿ ಸಹೋದರರು; ಯಾರಿದು?
ರಾಯಚೂರಿನವರಾದ ಮನೋಜ್ ಭಾಂಡಗೆ ಅವರು ಈಗಾಗಲೇ ಕರ್ನಾಟಕ ಪರ ಆಡಿದ ಹಲವು ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಆಲ್‌ರೌಂಡರ್ ಪಾತ್ರ ನಿರ್ವಹಿಸಿದ ಅವರು 7 ಟಿ20 ಪಂದ್ಯಗಳಲ್ಲಿ 116 ರನ್ ಗಳಿಸಿದ್ದಾರೆ. ಎಡಗೈ ಬ್ಯಾಟರ್ ಆಗಿರುವ ಅವರು ಬಲಗೈ ಮಧ್ಯಮ ವೇಗದ ಬೌಲರ್ ಕೂಡ ಆಗಿದ್ದಾರೆ.